ನೀರಜ್ ಚೋಪ್ರಾ
ಪಿಟಿಐ ಚಿತ್ರ
ನವದೆಹಲಿ: ಬೆಂಗಳೂರಿನಲ್ಲಿ ಮೇ 24ರಂದು ನಡೆಯಲಿರುವ ಎನ್‌ಸಿ ಕ್ಲಾಸಿಕ್ ಜಾವೆಲಿನ್ ಕೂಟಕ್ಕೆ ಪಾಕಿಸ್ತಾನದ ಅಥ್ಲೀಟ್ ಅರ್ಷದ್ ನದೀಮ್ ಅವರನ್ನು ಆಹ್ವಾನಿಸಿದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ತಾವು ದ್ವೇಷದ ಮತ್ತು ನಿಂದನೆಯ ಸುರಿಮಳೆ ಎದುರಿಸುವಂತಾಗಿದೆ ಎಂದು ಭಾರತದ ಜಾವೆಲಿನ್ ಥ್ರೊ ತಾರೆ ನೀರಜ್ ಚೋಪ್ರಾ ಶುಕ್ರವಾರ ಅಳಲು ತೋಡಿಕೊಂಡಿದ್ದಾರೆ.
ಆದರೆ, ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ನಂತರ ಪಾಕ್‌ನ ಅಥ್ಲೀಟ್ ಭಾಗವಹಿಸುವ ಪ್ರಶ್ನೆಯೇ ಬರುವುದಿಲ್ಲ ಎಂದೂ ನೀರಜ್ ಸ್ಪಷ್ಟಪಡಿಸಿದ್ದಾರೆ. ನದೀಮ್ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ವರ್ಣ ಗೆದ್ದುಕೊಂಡಿದ್ದರು.
ತಮ್ಮ ಮತ್ತು ತಮ್ಮ ಕುಟುಂಬದ ಚಾರಿತ್ರ್ಯ ಪ್ರಶ್ನಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕಲಾಗುತ್ತಿರುವುದರಿಂದ ತಮಗೆ ನೋವಾಗಿದೆ ಎಂದೂ ಚೋಪ್ರಾ ಹೇಳಿದ್ದಾರೆ.
ಬೆಂಗಳೂರಿನ ಕೂಟಕ್ಕೆ ನದೀಮ್ ಅವರನ್ನು ಆಹ್ವಾನಿಸಿರುವುದಾಗಿ ಚೋಪ್ರಾ ಇತ್ತೀಚೆಗೆ ಆನ್‌ಲೈನ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದರು.
‘ಕಳೆದ 48 ಗಂಟೆಗಳಲ್ಲಿ ಎಲ್ಲವೂ ನಡೆದುಹೋದ ನಂತರ, ಎನ್‌ಸಿ ಕ್ಲಾಸಿಕ್‌ನಲ್ಲಿ ಅರ್ಷದ್ ಉಪಸ್ಥಿತಿಯ ಪ್ರಶ್ನೆಯೇ ಬರುವುದಿಲ್ಲ. ನನಗೆ ನನ್ನ ದೇಶ ಮತ್ತು ಅದರ ಹಿತಾಸಕ್ತಿಯೇ ಮೊದಲು’ ಎಂದು ಭಾರತೀಯ ಸೇನೆಯಲ್ಲಿ ಸುಬೇದಾರ್ ಮೇಜರ್ ಆಗಿರುವ ಚೋಪ್ರಾ ಎಕ್ಸ್‌ನಲ್ಲಿ ಹಾಕಿರುವ ದೀರ್ಘ ಸಂದೇಶದಲ್ಲಿ ಸ್ಪಷ್ಟನೆ ನೀಡಿದ್ದಾರೆ.
‘ಈ ದುಷ್ಕೃತದಿಂದ ಪ್ರಾಣ ಕಳೆದುಕೊಂಡವರಿಗೆ ನನ್ನ ಸಹಾನುಭೂತಿಯಿದೆ. ದೇಶದ ಜೊತೆಗೆ ನನಗೂ ನೋವಾಗಿದೆ. ಈ ಕೃತ್ಯಕ್ಕೆ ನನಗೂ ಆಕ್ರೋಶವಿದೆ’ ಎಂದು 27 ವರ್ಷ ವಯಸ್ಸಿನ ಅಥ್ಲೀಟ್ ಹೇಳಿದ್ದಾರೆ.
ಮೇ 27 ರಿಂದ ದಕ್ಷಿಣ ಕೊರಿಯಾದಲ್ಲಿ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್ ನಡೆಯಲಿದ್ದು ಅದಕ್ಕೆ ಸಿದ್ಧತೆ ನಡೆಸಬೇಕಾದ ಕಾರಣ ಈ ಕೂಟದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ನದೀಮ್ ಎರಡು ದಿನಗಳ ಹಿಂದೆಯೇ ತಿಳಿಸಿದ್ದರು.
‘ಒಬ್ಬ ಅಥ್ಲೀಟ್ ಆಗಿ ನಾನು ಇನ್ನೊಂದು ದೇಶದ ಕ್ರೀಡಾಪಟುವಿಗೆ ಆಹ್ವಾನ ನೀಡಿದ್ದೆ. ಅದಕ್ಕಿಂತ ಹೆಚ್ಚೇನೂ ಇಲ್ಲ. ದೇಶದಲ್ಲಿ ವಿಶ್ವದರ್ಜೆಯ ಕ್ರೀಡಾಕೂಟ ನಡೆಸುವಾಗ ಶ್ರೇಷ್ಠ ಕ್ರೀಡಾಪಟುಗಳನ್ನು ಕರೆತರುವ ಉದ್ದೇಶ ಮಾತ್ರ ಇದರ ಹಿಂದೆ ಇತ್ತು’ ಎಂದೂ ನೀರಜ್ ಹೇಳಿದ್ದಾರೆ.
‘ತಾಯಿಯನ್ನು ಗುರಿಪಡಿಸಲಾಗಿದೆ’:
ಒಲಿಂಪಿಕ್ಸ್ ಸಂದರ್ಭದಲ್ಲಿ, ‘ನದೀಮ್ ಕೂಡ ನನ್ನ ಮಗನ ಹಾಗೆ’ ಎಂದು ನೀರಜ್ ತಾಯಿ ಸರೋಜ್ ಹೇಳಿದ್ದರು. ಆ ಹೇಳಿಕೆಯನ್ನು ಮುಂದಿಟ್ಟುಕೊಂಡು ಅವರನ್ನೂ ಜಾಲತಾಣಗಳಲ್ಲಿ ನಿಂದಿಸಲಾಗುತ್ತಿದೆ.
‘ಜನ ಹೇಗೆ ಅಭಿಪ್ರಾಯ ಬದಲಾಯಿಸುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ. ವರ್ಷದ ಹಿಂದೆ ಒಲಿಂಪಿಕ್ಸ್ ವೇಳೆ ಅವರು ಮುಗ್ಧ ಮನಸ್ಸಿನಿಂದ ಹಾಗೆ ಹೇಳಿದ್ದರು. ಆಗ ಅವರ ಮಾತಿಗೆ ಮೆಚ್ಚುಗೆಯ ನುಡಿಗಳು ಕೇಳಿಬಂದಿದ್ದವು. ಆದರೆ ಈಗ ಅದೇ ಹೇಳಿಕೆಗೆ ಅವರನ್ನು ನಿಂದನೆಗೆ ಗುರಿಪಡಿಸಲಾಗುತ್ತಿದೆ’ ಎಂದಿದ್ದಾರೆ.
‘ನನ್ನ ನಿಯತ್ತನ್ನು ಪ್ರಶ್ನಿಸುವಾಗ ನೋವಾಗುತ್ತದೆ. ನನ್ನನ್ನು ಮತ್ತು ಕುಟುಂಬವನ್ನು ಗುರಿಪಡಿಸುವ ಜನರಿಗೆ ನಾನು ವಿವರಣೆ ನೀಡುವಾಗ ಖೇದವಾಗುತ್ತದೆ’ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.