ADVERTISEMENT

ಪಾವತಿಸದ ಬುಕ್ಕಿಂಗ್ ಹಣ: ಪಾಕ್ ಹಾಕಿ ತಂಡ ಬೀದಿಗೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 23:54 IST
Last Updated 12 ಫೆಬ್ರುವರಿ 2026, 23:54 IST
<div class="paragraphs"><p>ಪಾಕಿಸ್ತಾನ</p></div>

ಪಾಕಿಸ್ತಾನ

   

ಕರಾಚಿ: ಆಸ್ಟ್ರೇಲಿಯಾದ ಕೆನ್‌ಬೆರಾದಲ್ಲಿ ಪಾಕಿಸ್ತಾನದ ಹಾಕಿ ತಂಡ ವಾಸ್ತವ್ಯ ಹೂಡಬೇಕಿದ್ದ ಹೋಟೆಲ್‌ಗೆ ಪಾಕಿಸ್ತಾನ ಹಾಕಿ ಫೆಡರೇಷನ್ ಹಣ ಪಾವತಿಸದ ಕಾರಣ ಬುಕ್ಕಿಂಗ್ ರದ್ದುಮಾಡಲಾಯಿತು. ಪರಿಣಾಮ ರಾಜಧಾನಿ ಕೆನ್‌ಬೆರಾ ತಲುಪಿದ ಆಟಗಾರರು ಗಂಟೆಗಟ್ಟಲೆ ರಸ್ತೆ ಬದಿ ಕಳೆಯಬೇಕಾಯಿತು.

ಆರ್ಥಿಕ ಮುಗ್ಗಟ್ಟಿನ ಕಾರಣ ಪಾಕಿಸ್ತಾನ ಹಾಕಿ ಫೆಡರೇಷನ್‌ ಹಣ ಪಾವತಿಸಿರಲಿಲ್ಲ. ತಂಡ ಮತ್ತು ಸಿಬ್ಬಂದಿ ಕಳೆದ ವಾರ ಆಸ್ಟ್ರೇಲಿಯಾಕ್ಕೆ ಹೊರಟಾಗ ಕೆನ್‌ಬೆರಾದಲ್ಲಿ ಬುಕ್‌ ಮಾಡಲಾಗಿದ್ದ ಫೋರ್‌ಸ್ಟಾರ್ ಹೋಟೆಲ್‌ಗೆ ಪಾಕಿಸ್ತಾನದ ಕ್ರೀಡಾ ಮಂಡಳಿ ಮತ್ತು ಪಾಕಿಸ್ತಾನ ಹಾಕಿ ಫೆಡರೇಷನ್ ಹಣ ಪಾವತಿಸಲಿದೆ ಎಂದು ಹೇಳಲಾಗಿತ್ತು. ಆದರೆ ಹಣ ಪಾವತಿಸದ ಕಾರಣ ಬೀದಿಬದಿ ಓಡಾಡಿ ಸಮಯ ಕಳೆದರು ಎಂದು ತಂಡದ ಆಪ್ತ ಮೂಲಗಳು ತಿಳಿಸಿವೆ. ಕೊನೆಗೂ ತಂಡಕ್ಕೆ ಅಲ್ಲಿ ವ್ಯವಸ್ಥೆ ಮಾಡಲಾಯಿತು.

ADVERTISEMENT

ಹೋಬಾರ್ಟ್‌ನಲ್ಲಿ ನಡೆಯಲಿರುವ ಎಫ್‌ಐಎಚ್‌ ಪ್ರೊ ಲೀಗ್‌ ಎರಡನೇ ಲೆಗ್‌ನಲ್ಲಿ ಆಡಲು ಪಾಕಿಸ್ತಾನ ತಂಡವು, ಆಸ್ಟ್ರೇಲಿಯಾಕ್ಕೆ ಬಂದಿದೆ.

ತಂಡವು ಕೆನ್‌ಬೆರಾ ತಲುಪಿದಾಗ ಹೋಟೆಲ್‌ನಲ್ಲಿ ಬುಕಿಂಗ್ ಆಗಿರಲಿಲ್ಲ. ತಂಡದ ಹೆಡ್‌ ಕೋಚ್‌ ತಾಹಿರ್ ಜಮಾನ್ ಅವರು ಕಾಲಮಾನ ವ್ಯತ್ಯಾಸದ ಕಾರಣ ಪಿಎಸ್‌ಬಿ ಮತ್ತು ಪಿಎಚ್‌ಎಫ್‌ ಅಧಿಕಾರಿಗಳ ಜೊತೆ ಸಂಪರ್ಕ ಸಾಧಿಸಲು ಸಮಸ್ಯೆಗಳನ್ನು ಎದುರಿಸಬೇಕಾಯಿತು ಎನ್ನಲಾಗಿದೆ. ನಂತರ ಅವರು ಮೊಬೈಲ್ ಸಂದೇಶ ಕಳುಹಿಸಿದರು.

ಈ ಪ್ರಕರಣ ಪಾಕಿಸ್ತಾನದ ರಾಷ್ಟ್ರೀಯ ಕ್ರೀಡೆಗೆ ಇರಿಸುಮುರಿಸು ಉಂಟುಮಾಡಿದೆ. ತಂಡವು ಪ್ರವಾಸದಲ್ಲಿ ಆಸ್ಟ್ರೇಲಿಯಾ, ಜರ್ಮನಿ ವಿರುದ್ಧ ಆಡಬೇಕಾಗಿದೆ.

ಹಣ ಪಾವತಿಸುವುದಾಗಿ ಮನವರಿಕೆಯಾದ ಮೇಲೆ ಹೋಟೆಲ್ ಆಡಳಿತವು ಆಟಗಾರರಿಗೆ ಕೆಲವು ಕೊಠಡಿಗಳನ್ನು ನೀಡಿತು.

ಪಾಕಿಸ್ತಾನ ಪ್ರೊ ಲೀಗ್‌ನಲ್ಲಿ ಆಡಿರುವ ಎಲ್ಲ ಆರೂ ಪಂದ್ಯಗಳನ್ನು ಸೋತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.