ADVERTISEMENT

ಪ್ರಧಾನಿ ಮೋದಿ ಜತೆ ಸಂವಾದದ ವೇಳೆ ಸಾಧನೆಯ ಕಥೆ ಬಿಚ್ಚಿಟ್ಟ ಅಥ್ಲೀಟ್‌ಗಳು

ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಭಾರತ ತಂಡ: ಅಥ್ಲೀಟ್‌ಗಳನ್ನು ಹುರಿದುಂಬಿಸಿದ ಮೋದಿ

ಪಿಟಿಐ
Published 20 ಜುಲೈ 2022, 14:31 IST
Last Updated 20 ಜುಲೈ 2022, 14:31 IST
ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಭಾರತ ತಂಡದ ಅಥ್ಲೀಟ್‌ಗಳೊಂದಿಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೊ ಸಂವಾದ ನಡೆಸಿದರು  –ಪಿಟಿಐ ಚಿತ್ರ
ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಭಾರತ ತಂಡದ ಅಥ್ಲೀಟ್‌ಗಳೊಂದಿಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೊ ಸಂವಾದ ನಡೆಸಿದರು  –ಪಿಟಿಐ ಚಿತ್ರ   

ನವದೆಹಲಿ: ‘ಹತ್ತು ವರ್ಷಗಳ ಹಿಂದೆ ಭಾರತೀಯ ಸೇನೆಯನ್ನು ಸೇರಿದೆ. ಆಗ ನನ್ನ ತೂಕ 74 ಕೆ.ಜಿ. ಇತ್ತು. ಕ್ರೀಡೆಯಲ್ಲಿ ಭಾಗವಹಿಸಿ ತೂಕ ಕಡಿಮೆ ಮಾಡಿಕೊಂಡು ಫಿಟ್ ಆಗಲು ನಾನಿದ್ದ ತುಕಡಿಯಲ್ಲಿ ಎಲ್ಲರೂ ಪ್ರೋತ್ಸಾಹಿಸಿದರು. ತರಬೇತಿಗಾಗಿ ಹೆಚ್ಚುವರಿ ಸಮಯ ನೀಡುತ್ತಿದ್ದರು. ಮೂರ್ನಾಲ್ಕು ತಿಂಗಳಲ್ಲಿ ಸುಮಾರು ಇಪ್ಪತ್ತು ಕೆಜಿ ತೂಕ ಕಳೆದುಕೊಂಡೆ. ಅಲ್ಲಿಂದ ಓಟವೇ ನನ್ನ ಉಸಿರಾಯಿತು’

3000 ಮೀಟರ್ಸ್ ಸ್ಟೀಪಲ್ ಚೇಸ್ ಅಥ್ಲೀಟ್ ಅವಿನಾಶ್ ಸಬ್ಳೆ ತಾವು ಕ್ರೀಡಾಲೋಕಕ್ಕೆ ಕಾಲಿಟ್ಟ ಕಥೆಯನ್ನು ಬಿಚ್ಚಿಟ್ಟರು. ಇದೇ 28ರಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅವರು ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ವಿಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ‘ನಿಮ್ಮ ಮುಂದೆ ಎದುರಾಳಿಗಳೇ ಇಲ್ಲ ಎಂಬ ಗಟ್ಟಿ ಮನೋಬಲದೊಂದಿಗೆ ಮುನ್ನುಗ್ಗಿ’ ಎಂದು ಕರೆ ನೀಡಿದರು.

‘ನಿಮ್ಮ ಜೀವನದಲ್ಲಿ ಎದುರಾದ ಅಡೆತಡೆಗಳನ್ನು ಮೀರಿ ನಿಂತಿದ್ದು ಹೇಗೆ’ ಎಂದು ಪ್ರಧಾನಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ 27 ವರ್ಷದ ಅವಿನಾಶ್, ‘ಸ್ಟೀಪಲ್‌ ಚೇಸ್‌ ಸ್ಪರ್ಧೆಯಲ್ಲಿ ಅಡೆತಡೆಗಳು ಹೆಚ್ಚು. ಆದರೆ ನಾನು ಸೇನೆಯಲ್ಲಿ ಪಡೆದ ಕಠಿಣ ತರಬೇತಿಯಿಂದಾಗಿ ಈ ಕ್ರೀಡೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತಿದೆ’ ಎಂದರು.

ಈ ಸಂದರ್ಭದಲ್ಲಿ ಹಾಜರಿದ್ದ ಸೈಕ್ಲಿಸ್ಟ್‌ ಡೇವಿಡ್ ಬೆಕಮ್ ಅವರನ್ನುದ್ದೇಶಿಸಿ ಮೋದಿಯವರು, ‘ವೃತ್ತಿಪರ ಫುಟ್‌ಬಾಲ್ ಆಡಿದ್ದೀರಾ. ನಿಮ್ಮ ಸಹಕ್ರೀಡಾಪಟು ರೊನಾಲ್ಡೊ ಸಿಂಗ್ ಅವರೊಂದಿಗೆ ಫುಟ್‌ಬಾಲ್ ಆಡಿದ್ದೀರಾ‘ ಎಂದರು. ಇದೇ ಸಂದರ್ಭದಲ್ಲಿ ಮೋದಿಯವರು ಇಂಗ್ಲೆಂಡ್ ದೇಶದ ಫುಟ್‌ಬಾಲ್ ದಿಗ್ಗಜ ಡೇವಿಡ್‌ ಬೆಕಮ್ ಮತ್ತು ಪೊರ್ಚುಗಲ್ ತಾರೆ ರೊನಾಲ್ಡೊ ಅವರ ಹೆಸರುಗಳನ್ನು ಉಲ್ಲೇಖಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಡೇವಿಡ್, ‘ನಾವು ಫುಟ್‌ಬಾಲ್ ಆಡಿಲ್ಲ. ನಮ್ಮ ಬಹುಪಾಲು ಸಮಯವು ಟ್ರ್ಯಾಕ್‌ನಲ್ಲಿ ಸೈಕ್ಲಿಂಗ್ ಅಭ್ಯಾಸದಲ್ಲಿಯೇ ಕಳೆದುಹೋಗುತ್ತದೆ’ ಎಂದರು.

ಅಂಡಮಾನ್ ಮತ್ತು ನಿಕೊಬಾರ್ ದ್ವೀಪದ ಡೇವಿಡ್ ಅವರ ತಂದೆ 2004ರ ಸುನಾಮಿಯಲ್ಲಿ ಮೃತಪಟ್ಟಿದ್ದರು. ಅದಾಗಿ ಒಂದು ವರ್ಷದ ನಂತರ ತಾಯಿ ಕೂಡ ನಿಧನರಾಗಿದ್ದರು. ಬಹಳಷ್ಟು ಸವಾಲುಗಳನ್ನು ಮೆಟ್ಟಿ ನಿಂತು ಸೈಕ್ಲಿಂಗ್‌ನಲ್ಲಿ ಛಾಪು ಮೂಡಿಸಿರುವ ಡೇವಿಡ್ ಸಾಧನೆಯನ್ನು ಮೋದಿ ಶ್ಲಾಘಿಸಿದರು.

34ನೇ ವಯಸ್ಸಿನಲ್ಲಿ ಕ್ರೀಡೆಗೆ ಕಾಲಿಟ್ಟ ಪ್ಯಾರಾ ಶಾಟ್‌ಪಟ್ ಅಥ್ಲೀಟ್ ಶರ್ಮಿಳಾ, ‘ನಮ್ಮದು ಬಡ ಕುಟುಂಬ, ಅಮ್ಮ ಅಂಧೆಯಾಗಿದ್ದರು. ನಾವು ಮೂವರು ಅಕ್ಕತಂಗಿಯರು ಮತ್ತು ಒಬ್ಬ ಸಹೋದರ ಇದ್ದ ಕುಟುಂಬ. ಸಣ್ಣ ವಯಸ್ಸಿನಲ್ಲಿಯೇ ನನಗೆ ಮದುವೆ ಮಾಡಿದರು. ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಆದರೆ, ನಾವು ಮೂವರೂ ಬಹಳಷ್ಟು ಕಿರುಕುಳ ಅನುಭವಿಸಿದೆವು. ಆಗ ನನ್ನ ತವರುಮನೆಯವರು ಮರಳಿ ಕರೆದುಕೊಂಡು ಬಂದರು. ಸಂಬಂಧಿಕರೊಬ್ಬರ ಸಹಕಾರದಿಂದ ಕ್ರೀಡೆಗೆ ಬಂದೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದೆ’ ಎಂದರು.

‘ಶರ್ಮಿಳಾ ಅವರ ಸಾಧನೆ ಎಲ್ಲರಿಗೂ ಸ್ಫೂರ್ತಿದಾಯಕ’ ಎಂದು ಮೋದಿ ಶ್ಲಾಘಿಸಿದರು.

ಡಬಲ್ಸ್‌ ಬ್ಯಾಡ್ಮಿಂಟನ್ ಆಟಗಾರ್ತಿ ತ್ರಿಷಾ ಜಾಲಿ ಅವರನ್ನುದ್ದೇಶಿಸಿದ ಪ್ರಧಾನಿ, ’ಒಲಿಂಪಿಕ್ಸ್‌ ಮುಗಿಯುವವರೆಗೂ ಐಸ್‌ಕ್ರೀಮ್ ತಿನ್ನುವುದಿಲ್ಲವೆಂದು ಪಿ.ವಿ. ಸಿಂಧು ನಿರ್ಧರಿಸಿದ್ದರು. ನಿಮ್ಮ ಯೋಜನೆ ಏನು. ಕಣ್ಣೂರಿನ ನೀವು ಅಲ್ಲಿ ಖ್ಯಾತವಾಗಿರುವ ಫುಟ್‌ಬಾಲ್ ಬಿಟ್ಟು ಬ್ಯಾಡ್ಮಿಂಟನ್ ಆಯ್ಕೆ ಮಾಡಿಕೊಂಡಿದ್ದು ಏಕೆ ’ ಎಂದು ಪ್ರಶ್ನಿಸಿದರು.‌

‘ಐದನೇ ವಯಸ್ಸಿನಲ್ಲಿ ಬ್ಯಾಡ್ಮಿಂಟನ್ ಆಡುವುದೇ ಸೂಕ್ತವಾಗಿತ್ತು. ಅಪ್ಪನ ಪ್ರೋತ್ಸಾಹವೂ ಇತ್ತು’ ಎಂದ ತ್ರಿಷಾ ಉತ್ತರಿಸಿದರು.

ಈ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ತಾರೆಯರಾದ ಪಿ.ವಿ.ಸಿಂಧು, ಕಿದಂಬಿ ಶ್ರೀಕಾಂತ್ ಮತ್ತು ಲಕ್ಷ್ಯ ಸೇನ್, ವೇಟ್‌ಲಿಫ್ಟರ್ ಮೀರಾಬಾಯಿ ಚಾನು, ಹಾಕಿ ಗೋಲ್‌ಕೀಪರ್ ಸವಿತಾ ಪೂನಿಯಾ, ಕುಸ್ತಿಪಟು ಸಾಕ್ಷಿ ಮಲಿಕ್, ಬಾಕ್ಸರ್‌ ಶಿವ ಥಾಪಾ, ಸುಮಿತ್, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಐಒಎ ಹಂಗಾಮಿ ನಾಯಕ ಅನಿಲ್ ಖನ್ನಾ, ಮಹಾಕಾರ್ಯದರ್ಶಿ ರಾಜೀವ್ ಮೆಹ್ತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.