ADVERTISEMENT

ಪ್ರಣಯ್‌ ಕೈತಪ್ಪಿದ ಪ್ರಶಸ್ತಿ

ರೋಚಕ ಫೈನಲ್‌ನಲ್ಲಿ ಗೆದ್ದ ಚೀನಾದ ವೆಂಗ್ ಹಾಂಗ್‌ಗೆ ಆಸ್ಟ್ರೇಲಿಯಾ ಓಪನ್ ಕಿರೀಟ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2023, 14:49 IST
Last Updated 6 ಆಗಸ್ಟ್ 2023, 14:49 IST
ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ರನ್ನರ್‌ ಅಪ್‌ ಪದಕದೊಂದಿಗೆ ಭಾರತದ ಎಚ್‌.ಎಸ್‌. ಪ್ರಣಯ್‌ ಮತ್ತು ಪ್ರಶಸ್ತಿಯೊಂದಿಗೆ ಚೀನಾದ ವೆಂಗ್ ಹಾಂಗ್ ಯಾಂಗ್ –ಎಎಫ್‌ಪಿ ಚಿತ್ರ
ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ರನ್ನರ್‌ ಅಪ್‌ ಪದಕದೊಂದಿಗೆ ಭಾರತದ ಎಚ್‌.ಎಸ್‌. ಪ್ರಣಯ್‌ ಮತ್ತು ಪ್ರಶಸ್ತಿಯೊಂದಿಗೆ ಚೀನಾದ ವೆಂಗ್ ಹಾಂಗ್ ಯಾಂಗ್ –ಎಎಫ್‌ಪಿ ಚಿತ್ರ   

ಸಿಡ್ನಿ: ಭಾರತದ ಅಗ್ರಮಾನ್ಯ ಆಟಗಾರ ಎಚ್‌.ಎಸ್‌. ಪ್ರಣಯ್‌ ಅವರು ಭಾನುವಾರ ಆಸ್ಟ್ರೇಲಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನ ಫೈನಲ್‌ ಪಂದ್ಯದಲ್ಲಿ ಪರಾಭವಗೊಂಡರು.

90 ನಿಮಿಷ ನಡೆದ ರೋಚಕ ಹಹಾಹಣಿಯಲ್ಲಿ ಪ್ರಣಯ್,  ವಿಶ್ವದ 24ನೇ ಕ್ರಮಾಂಕದಲ್ಲಿರುವ   ಚೀನಾದ ವೆಂಗ್ ಹಾಂಗ್ ಯಾಂಗ್ ಎದುರು 9-21, 23-21, 20-22ರಿಂದ ಸೋತರು. ಇದರಿಂದಾಗಿ ಪ್ರಸಕ್ತ ಋತುವಿನಲ್ಲಿ ಎರಡನೇ ಬಿಡಬ್ಲ್ಯೂಎಫ್‌ ಪ್ರಶಸ್ತಿಯನ್ನು ಜಯಿಸುವ ಅವಕಾಶ ಅವರಿಗೆ ಕೈತಪ್ಪಿತು. ಅವರು ಮೇ ತಿಂಗಳಿನಲ್ಲಿ ನಡೆದಿದ್ದ ಮಲೇಷ್ಯಾ ಮಾಸ್ಟರ್ಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು.

24 ವರ್ಷದ ವೆಂಗ್‌ ಅವರು ಮಲೇಷ್ಯಾ ಓಪನ್‌ ಫೈನಲ್‌ನಲ್ಲಿ ಪ್ರಣಯ್‌ ವಿರುದ್ಧ ಸೋತಿದ್ದರು. ಇದೀಗ ಅವರು ಮುಯ್ಯಿ ತೀರಿಸಿಕೊಂಡಿದ್ದಾರೆ. ವೆಂಗ್‌ 2019ರ ಚೀನಾ ಮಾಸ್ಟರ್‌, 2022ರ ಕೊರಿಯಾ ಓಪನ್‌ ಚಾಂಪಿಯನ್‌ ಆಗಿದ್ದರು.

ADVERTISEMENT

ವಿಶ್ವ ಕ್ರಮಾಂಕದಲ್ಲಿ 9ನೇ ಸ್ಥಾನದಲ್ಲಿರುವ 31 ವರ್ಷದ ಪ್ರಣಯ್‌ ಅವರು ಮೊದಲ ಗೇಮ್‌ನಲ್ಲಿ ಲೋಪಗಳನ್ನು  ಸುಲಭವಾಗಿ ಕಳೆದುಕೊಂಡರೂ ಎರಡನೇ ಗೇಮ್‌ನಲ್ಲಿ ಪುಟಿದೆದ್ದರು. ಸಮಬಲದ ಹೋರಾಟ ನಡೆಸಿ ಅಂತಿಮಗಾಗಿ ಪ್ರಣಯ್‌ ಮೇಲುಗೈ ಸಾಧಿಸಿ, ಸಮಬಲಗೊಳಿಸಿದರು. ಆದರೆ, ನಿರ್ಣಾಯಕ ಗೇಮ್‌ನಲ್ಲಿ ಭಾರತೀಯ ಆಟಗಾರ ಆರಂಭದಿಂದಲೇ ಹಿಡಿತ ಸಾಧಿಸಿ 15–9ರ ಮುನ್ನಡೆಯೊಂದಿಗೆ ಪ್ರಶಸ್ತಿಯತ್ತ ದಾಪುಗಾಲು ಹಾಕುತ್ತಿರುವಾಗ ಎದುರಾಳಿ ಆಟಗಾರ ಪ್ರಬಲ ಹೊಡೆತ, ಡ್ರಾಪ್‌ ಶಾಟ್‌ಗಳ ಮೂಲಕ ತಿರುಗೇಟು ನೀಡಿದರು.

ಒಂದು ಹಂತದಲ್ಲಿ 71 ಶಾಟ್‌ ‌‍‌ರ‍್ಯಾಲಿ ಆಡಿ ಆಯಾಸಗೊಂಡು ಇಬ್ಬರೂ ಆಟಗಾರರು ಕುಸಿದು ಕುಳಿತು ವಿಶ್ರಾಂತಿ ಪಡೆದರು.  ನಂತರ ಮುಂದುವರಿದ ಆಟದಲ್ಲಿ ಚೀನಾ ಆಟಗಾರ ಮೇಲುಗೈ ಸಾಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.