ADVERTISEMENT

ಐತಿಹಾಸಿಕ ಫೈನಲ್ ಪ್ರವೇಶಿಸಿದ ಭಾರತ ತಂಡ

ಡೆನ್ಮಾರ್ಕ್ ವಿರುದ್ಧ ಅಮೋಘ ಆಟ; ಸಿಂಗಲ್ಸ್‌ನಲ್ಲಿ ಮಿಂಚಿದ ಶ್ರೀಕಾಂತ್, ಪ್ರಣಯ್

ಪಿಟಿಐ
Published 13 ಮೇ 2022, 22:15 IST
Last Updated 13 ಮೇ 2022, 22:15 IST
ಎಚ್‌.ಎಚ್‌.ಪ್ರಣಯ್ –ಎಎಫ್‌ಪಿ ಚಿತ್ರ
ಎಚ್‌.ಎಚ್‌.ಪ್ರಣಯ್ –ಎಎಫ್‌ಪಿ ಚಿತ್ರ   

ಬ್ಯಾಂಕಾಕ್: ಬಲಿಷ್ಠ ಡೆನ್ಮಾರ್ಕ್ ವಿರುದ್ಧ ಅಮೋಘ ಸಾಮರ್ಥ್ಯ ಪ್ರದರ್ಶಿಸಿದ ಭಾರತ ತಂಡ ಥಾಮಸ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಪ್ರವೇಶಿಸಿತು.

ಶುಕ್ರವಾರ ನಡೆದ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಕಿದಂಬಿ ಶ್ರೀಕಾಂತ್ ಮತ್ತು ಬಳಗ 3–2ರಲ್ಲಿ ಗೆಲುವು ಸಾಧಿಸಿತು. ಈ ಮೂಲಕ ಟೂರ್ನಿಯಲ್ಲಿ ಭಾರತ ಇದೇ ಮೊದಲ ಬಾರಿ ಪ್ರಶಸ್ತಿ ಸುತ್ತು ಪ್ರವೇಶಿಸಿತು.

ಗುರುವಾರ ಕ್ವಾರ್ಟರ್‌ ಫೈನಲ್‌ನ ಮೊದಲ ಪಂದ್ಯದಲ್ಲಿ ಸೋತಿದ್ದ ಯುವ ಆಟಗಾರ ಲಕ್ಷ್ಯಸೇನ್ ಸೆಮಿಫೈನಲ್‌ನಲ್ಲೂ ಆರಂಭದ ಪಂದ್ಯದಲ್ಲಿ ನಿರಾಸೆ ಉಂಟುಮಾಡಿದರು. ವಿಕ್ಟರ್ ಅಕ್ಸೆಲ್ಸನ್ ಎದುರು ಅವರು 21–13, 21–13ರಲ್ಲಿ ಸೋತರು.

ADVERTISEMENT

ನಂತರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಮಿಂಚಿದರು. ಕಿಮ್ ಆಸ್ಟ್ರಪ್ ಮತ್ತು ಮಥಾಯಸ್ ಕ್ರಿಸ್ಟಿಯನ್‌ಸೆನ್ ಎದುರಿನ ರೋಚಕ ಪಂದ್ಯದಲ್ಲಿ ಭಾರತದ ಆಟಗಾರರು 21–18, 21–23, 22–20ರಲ್ಲಿ ಜಯ ಸಾಧಿಸಿ ಹಣಾಹಣಿಯನ್ನು 1–1ರಲ್ಲಿ ಸಮ ಮಾಡಿದರು.

ಆ್ಯಂಡರ್ಸ್ ಆ್ಯಂಟೊನ್ಸೆನ್ ಎದುರಿನ ಸಿಂಗಲ್ಸ್ ಪಂದ್ಯದಲ್ಲಿ 21–18, 12–21, 21–15ರಲ್ಲಿ ಗೆದ್ದು ಕಿದಂಬಿ ಶ್ರೀಕಾಂತ್ ಮುನ್ನಡೆ ಗಳಿಸಿಕೊಟ್ಟರು. ಆದರೆ ಎರಡನೇ ಡಬಲ್ಸ್‌ನಲ್ಲಿ ಕೃಷ್ಣಪ್ರಸಾದ್ ಗರಗ–ವಿಷ್ಣುವರ್ಧನ್ ಗೌಡ್ ಜೋಡಿ ರಸ್ಮುಸೀನ್–ಸೊಗಾರ್ಡ್‌ಗೆ 16–21, 13–21ರಲ್ಲಿ ಮಣಿದರು. ಹೀಗಾಗಿ ಕೊನೆಯ ಪಂದ್ಯ ನಿರ್ಣಾಯಕವಾಯಿತು.

ರಾಸ್ಮಸನ್ ಗೆಮ್ಕೆ ಎದುರಿನ ಈ ಪಂದ್ಯದಲ್ಲಿ ಕೆಚ್ಚೆದೆಯ ಆಟಗಾಡಿದ ಎಚ್‌.ಎಸ್‌.ಪ್ರಣಯ್ 13–21, 21–9, 21–12ರಲ್ಲಿ ಗೆದ್ದು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.