ADVERTISEMENT

ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದ ಸಿಂಧು; ಕೋವಿಂದ್, ಮೋದಿ ಅಭಿನಂದನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜುಲೈ 2022, 12:33 IST
Last Updated 17 ಜುಲೈ 2022, 12:33 IST
ಪಿ.ವಿ.ಸಿಂಧು
ಪಿ.ವಿ.ಸಿಂಧು    

ನವದೆಹಲಿ:ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿರುವ ಭಾರತದ ಪಿ.ವಿ. ಸಿಂಧು ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಭಾನುವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಸಿಂಧು, ಚೀನಾದ ವಾಂಗ್‌ ಜಿ ಯಿ ಅವರನ್ನು 21-9, 11-21, 21-15 ಅಂತರದಿಂದ ಮಣಿಸಿಪ್ರಶಸ್ತಿ ಗೆದ್ದಿದ್ದಾರೆ.

ಸಿಂಧು ಗೆಲುವನ್ನು ಉದ್ದೇಶಿಸಿ ಟ್ವೀಟ್‌ ಮಾಡಿರುವ ಕೋವಿಂದ್‌, 'ಇದೇ ಮೊದಲ ಬಾರಿಗೆಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಪಿ.ವಿ. ಸಿಂಧು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಪುಟಿದೇಳಬಲ್ಲ ಸಾಮರ್ಥ್ಯ ಹಾಗೂ ಉತ್ಸಾಹ ನಮಗೆ ಪ್ರೇರಣೆಯಾಗಿದೆ. ದೇಶಕ್ಕೆ ಹೆಮ್ಮೆ ಮತ್ತು ಕೀರ್ತಿ ತರುವ ಕಾರ್ಯ ಮುಂದುವರಿಯಲಿ' ಎಂದು ಹಾರೈಸಿದ್ದಾರೆ.

ಪ್ರಧಾನಿ ಮೋದಿ,ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿಮೊದಲ ಸಲ ಪ್ರಶಸ್ತಿ ಗೆದ್ದಿರುವ ಪಿ.ವಿ. ಸಿಂಧು ಅವರನ್ನು ಅಭಿನಂದಿಸುತ್ತೇನೆ. ಅವರು ಮತ್ತೊಮ್ಮೆ ತಮ್ಮ ಅಸಾಧಾರಣ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ ಹಾಗೂ ಯಶಸ್ಸು ಸಾಧಿಸಿದ್ದಾರೆ. ಇದು ದೇಶಕ್ಕೆ ಹೆಮ್ಮೆಯ ಕ್ಷಣವಾಗಿದ್ದು, ಮುಂಬರುವ ಆಟಗಾರರಿಗೆ ಸ್ಫೂರ್ತಿ ನೀಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಶನಿವಾರ ನಡೆದಿದ್ದ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಜಪಾನ್‌ನ ಸಿನಾ ಕವಾಕಮಿ ಅವರನ್ನು 21-15, 21-7 ಅಂತರದಿಂದ ಮಣಿಸಿದ್ದ ಸಿಂಧು, ಅಂತಿಮ ಹಂತಕ್ಕೆ ಲಗ್ಗೆ ಇಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.