ಜೈಪುರ: ಕನ್ನಡಿಗ ಗಣೇಶ ಹನುಮಂತಗೋಲು ಅವರು ಪಂದ್ಯದ ಕೊನೆಯ ರೇಡ್‌ನಲ್ಲಿ ಗಳಿಸಿದ ಮೂರು ಪಾಯಿಂಟ್ಸ್‌ಗಳ ನೆರವಿನಿಂದ ಬೆಂಗಳೂರು ಬುಲ್ಸ್ ತಂಡವು ಸೋಮವಾರ 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಎರಡು ಅಂಕಗಳ ರೋಚಕ ಜಯ ಸಾಧಿಸಿತು.
ಸವಾಯಿ ಮಾನ್ ಸಿಂಗ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ‘ದಕ್ಷಿಣ ಡರ್ಬಿ’ಯ ಹಣಾಹಣಿಯಲ್ಲಿ ಬುಲ್ಸ್ ತಂಡವು 34–32ರಿಂದ ತೆಲುಗು ಟೈಟನ್ಸ್ ತಂಡವನ್ನು ಮಣಿಸಿ, ‘ಗುಲಾಬಿ ನಗರಿ’ಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು.
ಕೊನೆಯ ಕ್ಷಣದವರೆಗೆ ಹಾವು–ಏಣಿಯಂತೆ ಸಾಗಿದ ಈ ಪಂದ್ಯವು ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಒಂದು ಅಂಕಗಳ ಹಿನ್ನಡೆಯಲ್ಲಿದ್ದ ಬುಲ್ಸ್ ತಂಡಕ್ಕೆ ಗಣೇಶ್ ಅವರು ನಿರ್ಣಾಯಕ ರೇಡ್‌ನಲ್ಲಿ ಮೂರು ಅಂಕಗಳನ್ನು ಬಾಚಿಕೊಂಡು, ಗೆಲುವಿನ ರೂವಾರಿಯಾದರು.
ಕನ್ನಡಿಗ ಬಿ.ಸಿ. ರಮೇಶ್ ಗರಡಿಯಲ್ಲಿ ಪಳಗಿದ ಬುಲ್ಸ್ ಆಟಗಾರರು ಈ ಪಂದ್ಯದಲ್ಲಿ ಮತ್ತೊಮ್ಮೆ ಸಾಂಘಿಕ ಆಟ ಪ್ರದರ್ಶಿಸಿದರು. ಮೊದಲ ಮೂರು ಪಂದ್ಯಗಳನ್ನು ಸೋತಿದ್ದ ಬುಲ್ಸ್, ನಂತರದಲ್ಲಿ ತಂಡ ಸಂಯೋಜನೆಯಲ್ಲಿ ಬದಲಾವಣೆ ಕಂಡುಕೊಂಡು ಸತತ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಂತಾಗಿದೆ.
ಪಂದ್ಯದ ಬಹುತೇಕ ಅವಧಿಯಲ್ಲಿ ಟೈಟನ್ಸ್ ತಂಡವೇ ಮುನ್ನಡೆ ಕಾಯ್ದುಕೊಂಡಿತ್ತು. ಮೊದಲಾರ್ಧದಲ್ಲಿ 11–14ರಿಂದ ಹಿನ್ನಡೆಯಲ್ಲಿದ್ದ ಬೆಂಗಳೂರು ತಂಡಕ್ಕೆ ರೇಡರ್ ಅಲಿರೆಜಾ ಮಿರ್ಜೈಯನ್ (11) ಮಹತ್ವದ ಚೇತರಿಕೆ ನೀಡಿದರು. ಅವರು ಈ ಆವೃತ್ತಿಯಲ್ಲಿ ನಾಲ್ಕು ಬಾರಿ ‘ಸೂಪರ್ ಟೆನ್’ ಸೇರಿದಂತೆ ಒಟ್ಟು 50 ಅಂಕಗಳ ಗಡಿ ದಾಟಿದರು. ಅವರಿಗೆ ಗಣೇಶ್ (7) ಬೆಂಬಲ ನೀಡಿದರು. ಟೈಟನ್ಸ್ ಪರ ಭರತ್ (13) ಮತ್ತು ವಿಜಯ್ (9) ಮಿಂಚಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.