ADVERTISEMENT

ಪ್ರೊ ಕಬಡ್ಡಿ: ಮುಂಬಾ ಗೆಲುವಿನಲ್ಲಿ ಮಿಂಚಿದ ಫಜಲ್‌ ಅಟ್ರಾಚಲಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 20:15 IST
Last Updated 10 ಅಕ್ಟೋಬರ್ 2019, 20:15 IST
ಯು ಮುಂಬಾ ತಂಡದ ರಕ್ಷಣಾ ವಿಭಾಗದ ಆಟಗಾರ ಫಜಲ್‌ ಅಟ್ರಾಚಲಿ (ಕೆಂಪು ಪೋಷಾಕು) ಹರಿಯಾಣ ತಂಡದ ಆಟಗಾರನನ್ನು ಹಿಡಿಯಲು ಪ್ರಯತ್ನಿಸಿದರು
ಯು ಮುಂಬಾ ತಂಡದ ರಕ್ಷಣಾ ವಿಭಾಗದ ಆಟಗಾರ ಫಜಲ್‌ ಅಟ್ರಾಚಲಿ (ಕೆಂಪು ಪೋಷಾಕು) ಹರಿಯಾಣ ತಂಡದ ಆಟಗಾರನನ್ನು ಹಿಡಿಯಲು ಪ್ರಯತ್ನಿಸಿದರು   

ಗ್ರೇಟರ್‌ ನೊಯ್ಡಾ: ‘ಸುಲ್ತಾನ್‌’ ಫಜಲ್‌ ಅಟ್ರಾಚಲಿ ‌‌ಅವರ ಉತ್ತಮ ರಕ್ಷಣಾ ಕೌಶಲದಿಂದ ಯು ಮುಂಬಾ ತಂಡ ಪ್ರೊ ಕಬಡ್ಡಿ ಲೀಗ್‌ ಏಳನೇ ಆವೃತ್ತಿಯ ಪಂದ್ಯದಲ್ಲಿ ಗುರುವಾರ ಹರಿಯಾಣ ಸ್ಟೀಲರ್ಸ್‌ ತಂಡವನ್ನು 39–33 ಪಾಯಿಂಟ್‌ಗಳಿಂದ ಸೋಲಿಸಿತು.

ಶಹೀದ್‌ ವಿಜಯ್‌ ಸಿಂಗ್‌ ಪಥಿಕ್‌ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ನಡೆದ ಉತ್ತಮ ಹೋರಾಟದ ಪಂದ್ಯದಲ್ಲಿ ಇರಾನ್‌ ಆಟಗಾರನಾಗಿರುವ ಫಜಲ್‌ ಒಟ್ಟು ಎಂಟು ಟ್ಯಾಕಲ್‌ ಪಾಯಿಂಟ್‌ಗಳನ್ನು ಗಳಿಸಿದರು. ಅವರಿಗೆ ಇನ್ನೊಬ್ಬ ಕಾರ್ನರ್‌ ಆಟಗಾರ ಸಂದೀಪ್‌ ನರ್ವಾಲ್‌ (5 ಪಾಯಿಂಟ್ಸ್‌) ಉತ್ತಮ ಬೆಂಬಲ ನೀಡಿದರು.

ಲೀಗ್‌ನಲ್ಲಿ ಬಹುತೇಕ ಮೀಸಲು ಆಟಗಾರನಾಗಿಯೇ ಇದ್ದ ಅಜಿಂಕ್ಯ ಕಪ್ರೆ ಉತ್ತಮ ರೇಡಿಂಗ್‌ ಪ್ರದರ್ಶಿಸಿ 9 ಪಾಯಿಂಟ್ಸ್‌ ಗಳಿಸಿದರು. ಅಜಿಂಕ್ಯ, ಫ್ಯೂಚರ್‌ ಕಬಡ್ಡಿ ಹೀರೋಸ್‌ ಯೋಜನೆ ಯಿಂದ ಬೆಳಕಿಗೆ ಬಂದವರು.

ADVERTISEMENT

ಸ್ಟೀಲರ್ಸ್‌ ಪರ ವಿನಯ್‌ ಐದು ಬೋನಸ್‌ ಸೇರಿ 11 ರೇಡ್‌ ಪಾಯಿಂಟ್ಸ್‌ ಗಳಿಸಿದರು. ಅನುಭವಿ ವಿಕಾಸ್‌ ಖಂಡೋಲಾ ಆರು ಪಾಯಿಂಟ್ಸ್‌ ಕಲೆಹಾಕಿದರು.

ಪೂರ್ವಾರ್ಧ ಉತ್ತಮ ಹೋರಾಟ ದಿಂದ ಕೂಡಿತ್ತು. ರೇಡಿಂಗ್‌ ವಿಭಾಗ ಒಂದಿಷ್ಟು ದುರ್ಬಲವಾದಂತೆ ಕಂಡರೂ ಮುಂಬಾ ತಂಡದ ರಕ್ಷಣಾ ವಿಭಾಗ ಅದನ್ನು ಸರಿದೂಗಿಸಿತು.

ಅಟ್ರಾಚಲಿ, ಸಂದೀಪ್‌ ಇಬ್ಬರೂ ಪ್ರೊ ಕಬಡ್ಡಿಯಲ್ಲಿ 300 ಟ್ಯಾಕಲ್‌ ಪಾಯಿಂಟ್ಸ್‌ ಪೂರೈಸಿದರು. ಇನ್ನೊಂ ದೆಡೆ ಸ್ಟೀಲರ್ಸ್‌ ರಕ್ಷಣಾ ವಿಭಾಗ ಕೂಡ ಪ್ರಬಲವಾಗಿಯೇ ಕಂಡಿತು. ಹೀಗಾಗಿ ವಿರಾಮದ ವೇಳೆ ಸ್ಕೋರ್‌ 15–15ರಲ್ಲಿ ಸಮಬಲಗೊಂಡಿತ್ತು.

ಉತ್ತರಾರ್ಧ ಪೈಪೋಟಿಯಿಂದ ಕೂಡಿತ್ತು. ಆದರೆ ಕೊನೆಯ ಕೆಲವು ನಿಮಿಷಗಳಿದ್ದಾಗ ನಾಲ್ಕು ಪಾಯಿಂಟ್‌ ಗಳ ಮುನ್ನಡೆ ಪಡೆದ ಮುಂಬಾ ಆ ಮುನ್ನಡೆಯನ್ನು ಇನ್ನಷ್ಟು ಬೆಳೆಸಿತು.

ಶುಕ್ರವಾರದ ಪಂದ್ಯಗಳು: ದಬಂಗ್‌ ಡೆಲ್ಲಿ– ಯು ಮುಂಬಾ (ರಾತ್ರಿ 7.30); ಯು.ಪಿ. ಯೋಧಾ– ಬೆಂಗಳೂರು ಬುಲ್ಸ್‌ (8.30).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.