ADVERTISEMENT

Pro Kabaddi League: ಮುಂಬಾಗೆ ಶರಣಾದ ಬುಲ್ಸ್

ಬೆಂಗಳೂರಿಗೆ ತಂಡಕ್ಕೆ 3ನೇ ಸೋಲು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 23:30 IST
Last Updated 5 ಸೆಪ್ಟೆಂಬರ್ 2025, 23:30 IST
ಬೆಂಗಳೂರು ಬುಲ್ಸ್ ರೇಡರ್‌ನನ್ನು ಕ್ಯಾಚ್‌ ಮಾಡುವಲ್ಲಿ ಯಶಸ್ವಿಯಾದ ಮುಂಬಾ ಆಟಗಾರರು.
ಬೆಂಗಳೂರು ಬುಲ್ಸ್ ರೇಡರ್‌ನನ್ನು ಕ್ಯಾಚ್‌ ಮಾಡುವಲ್ಲಿ ಯಶಸ್ವಿಯಾದ ಮುಂಬಾ ಆಟಗಾರರು.   

ವಿಶಾಖಪಟ್ಟಣ: ನಿರಾಶಾದಾಯಕ ಪ್ರದರ್ಶನ ಮುಂದುವರಿಸಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ತನ್ನ ಮೂರನೇ ಪಂದ್ಯದಲ್ಲಿ ಯು ಮುಂಬಾ ತಂಡದ ವಿರುದ್ಧ 20 ಅಂಕಗಳ ಹೀನಾಯ ಸೋಲು ಕಂಡಿತು.

ಇದರೊಂದಿಗೆ ಬೆಂಗಳೂರು ತಂಡ ಹಾಲಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲಿಗೆ ಒಳಗಾದ ಮೊದಲ ತಂಡ ಎನಿಸಿತು. ವಿಶ್ವನಾಥ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಮೊದಲ ಹಣಾಹಣಿಯಲ್ಲಿ ಬೆಂಗಳೂರು ತಂಡ 28-48 ಅಂಕಗಳಿಂದ ಮುಂಬಾಗೆ ಶರಣಾಯಿತು. ಕೋಚ್ ಬಿ.ಸಿ. ರಮೇಶ್ ಗರಡಿಯಲ್ಲಿ ಪಳಗಿರುವ ಬುಲ್ಸ್‌, ಲೀಗ್‌ ಪಟ್ಟಿಯಲ್ಲಿ ಪಾಯಿಂಟ್ ಖಾತೆ ತೆರೆಯಲು ವಿಫಲವಾಗಿದೆ.

ಬುಲ್ಸ್ ಪರ ಆಶೀಷ್‌ ಮಲಿಕ್ ಮತ್ತು ಅಲಿರೇಜಾ ತಲಾ ಆರು ಅಂಕ ಗಳಿಸಿದರು. ಉಳಿದವರು ವಿಫಲರಾದರು. ಮೂರನೇ ಜಯ ದಾಖಲಿಸಿದ ಮುಂಬಾ ತಂಡದ ಪರ ಅಜಿತ್ ಚೌಹಾನ್‌ (13 ಅಂಕ) ಅಮೋಘ ಪ್ರದರ್ಶನ ನೀಡಿ ಗೆಲುವಿನ ರೂವಾರಿಯೆನಿಸಿದರು. ಕ್ರಮವಾಗಿ ಆರು ಮತ್ತು ಐದು ಅಂಕಗಳನ್ನು ಗಳಿಸಿದ ಸತೀಶ್ ಕಣ್ಣನ್ ಮತ್ತು ರಿಂಕು ತಂಡದ ಗೆಲುವಿನ ಅಂತರವನ್ನು ಹಿಗ್ಗಿಸಲು ನೆರವಾದರು.

ADVERTISEMENT

ವಿರಾಮದ ವೇಳೆಗೇ ಮುಂಬೈ 29–12 ರಲ್ಲಿ 17 ಪಾಯಿಂಟ್‌ಗಳ ದೊಡ್ಡ ಮುನ್ನಡೆ ಗಳಿಸಿತ್ತು. ಉತ್ತರಾರ್ಧದಲ್ಲಿ ಆಶಿಶ್ ಮಲಿಕ್ ಮತ್ತು ಅಲಿರೇಜಾ ಹಿನ್ನಡೆ ಕಡಿಮೆ ಮಾಡಲು ಯತ್ನಿಸಿದರು. ಇದಕ್ಕೆ ಪ್ರತಿಯಾಗಿ ಮುಂಬಾ ಆಟಗಾರರು 15ಕ್ಕೂ ಹೆಚ್ಚು
ಅಂಕಗಳಿಂದ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಹೀಗಾಗಿ ಪಂದ್ಯ ಏಕಪಕ್ಷೀಯವಾಗಿ ಸಾಗಿತು. ಬುಲ್ಸ್‌ ಮೂರು ಬಾರಿ ಆಲೌಟ್‌ ಆಯಿತು. 

ಟ್ಯಾಕಲ್ ಮತ್ತು ರೇಡಿಂಗ್ ಎರಡು ವಿಭಾಗಗಳಲ್ಲೂ ಬುಲ್ಸ್ ಪ್ರದರ್ಶನ ಸಂಪೂರ್ಣ ನಿಸ್ತೇಜಗೊಂಡಿತು. 

ಶನಿವಾರದ ಪಂದ್ಯಗಳು:

ಪಟ್ನಾ ಪೈರೇಟ್ಸ್‌– ಬೆಂಗಳೂರು ಬುಲ್ಸ್‌ (ರಾತ್ರಿ 8)

ತಮಿಳು ತಲೈವಾಸ್‌– ಗುಜರಾತ್ ಜೈಂಟ್ಸ್ (ರಾತ್ರಿ 9)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.