ADVERTISEMENT

ಇಂದಿನಿಂದ ಪ್ರೊ ಕಬಡ್ಡಿ: ಪುಣೇರಿ ಪಲ್ಟನ್‌ಗೆ ಬೆಂಗಳೂರು ಬುಲ್ಸ್‌ ಸಡ್ಡು

​ಪ್ರಜಾವಾಣಿ ವಾರ್ತೆ
ಪಿಟಿಐ
Published 28 ಆಗಸ್ಟ್ 2025, 23:26 IST
Last Updated 28 ಆಗಸ್ಟ್ 2025, 23:26 IST
<div class="paragraphs"><p>ವಿಶಾಖಪಟ್ಟಣದಲ್ಲಿರುವ ‘ಐಎನ್‌ಎಸ್ ಕುರ್ಸುರಾ ಸಬ್‌ಮರೀನ್’ ಮುಂದೆ ಪ್ರೊ ಕಬಡ್ಡಿ ಟೂರ್ನಿಯ 12 ತಂಡಗಳ ನಾಯಕರು ಮತ್ತು ಲೀಗ್ ಚೇರ್ಮನ್ ಹಾಗೂ ಮಶಾಲ್ ಸ್ಪೋರ್ಟ್ಸ್ ವಾಣಿಜ್ಯ ವಿಭಾಗದ ಮುಖ್ಯಸ್ಥ ಅನುಪಮ್ ಗೋಸ್ವಾಮಿ ಇದ್ದಾರೆ&nbsp; </p></div>

ವಿಶಾಖಪಟ್ಟಣದಲ್ಲಿರುವ ‘ಐಎನ್‌ಎಸ್ ಕುರ್ಸುರಾ ಸಬ್‌ಮರೀನ್’ ಮುಂದೆ ಪ್ರೊ ಕಬಡ್ಡಿ ಟೂರ್ನಿಯ 12 ತಂಡಗಳ ನಾಯಕರು ಮತ್ತು ಲೀಗ್ ಚೇರ್ಮನ್ ಹಾಗೂ ಮಶಾಲ್ ಸ್ಪೋರ್ಟ್ಸ್ ವಾಣಿಜ್ಯ ವಿಭಾಗದ ಮುಖ್ಯಸ್ಥ ಅನುಪಮ್ ಗೋಸ್ವಾಮಿ ಇದ್ದಾರೆ 

   

 –ಪಿಟಿಐ ಚಿತ್ರ

ವಿಶಾಖಪಟ್ಟಣ: ರಾಷ್ಟ್ರೀಯ ಕ್ರೀಡಾ ದಿನಾಚರಣೆಯಂದು ಪ್ರೊ ಕಬಡ್ಡಿ ಟೂರ್ನಿಯ 12ನೇ ಆವೃತ್ತಿಯ ವೈಭವ ಗರಿಗೆದರಲಿದೆ. 

ADVERTISEMENT

ಇಲ್ಲಿಯ ವಿಶ್ವನಾಥ ಸ್ಪೋರ್ಟ್ಸ್ ಕ್ಲಬ್‌ ಒಳಾಂಗಣದಲ್ಲಿ ಟೂರ್ನಿಗೆ ಚಾಲನೆ ದೊರೆಯಲಿದೆ. ಉದ್ಘಾಟನೆ ಪಂದ್ಯದಲ್ಲಿ  ತೆಲುಗು ಟೈಟನ್ಸ್ ಮತ್ತು ತಮಿಳ್ ತಲೈವಾಸ್ ಮುಖಾಮುಖಿಯಾಗಲಿವೆ. ದಿನದ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ಮತ್ತು ಪುಣೇರಿ ಪಲ್ಟನ್‌ ನಡುವೆ ಹಣಾಹಣಿ ನಡೆಯಲಿದೆ. 

12 ತಂಡಗಳು ಹೊಸ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿಯಲಿವೆ. ಈ ಬಾರಿ ಕೆಲ ತಂಡಗಳ ನಾಯಕರು, ಕೋಚ್ ಮತ್ತು ಪ್ರಮುಖ ಆಟಗಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಬಹುತೇಕ ಎಲ್ಲ ತಂಡಗಳು ಉತ್ತಮ ಆಟಗಾರರ ಸಂಯೋಜನೆಯೊಂದಿಗೆ ಕಣಕ್ಕಿಳಿಯಲಿದ್ದು ಟೂರ್ನಿಯು ರೋಚಕವಾಗಿ ನಡೆಯುವ ಭರವಸೆಯನ್ನು ಆಯೋಜಕರು ವ್ಯಕ್ತಪಡಿಸುತ್ತಾರೆ. 

ಬೆಂಗಳೂರು ಬುಲ್ಸ್ ತಂಡವನ್ನು ಅಂಕುಶ್ ರಾಠಿ ಮುನ್ನಡೆಸಲಿದ್ದಾರೆ. ಅವರು ಹೋದ ಋತುವಿನಲ್ಲಿ ಜೈಪುರ ತಂಡದಲ್ಲಿದ್ದರು.  ಅವರ ಮೇಲೆ ನಿರೀಕ್ಷೆಗಳ ಭಾರವಿದೆ. ಮುಖ್ಯ ಕೋಚ್ ಬಿ.ಸಿ. ರಮೇಶ್ ಮಾರ್ಗದರ್ಶನದಲ್ಲಿ ಯುವ ತಂಡವು ಸಿದ್ಧವಾಗಿದೆ. ಇರಾನ್ ಆಟಗಾರರಾದ ಅಹಮದ್ ರೇಝಾ ಅಸ್ಗರಿ ಮತ್ತು ಅಲಿರೇಝಾ ಮಿರ್ಜಾನ್ ಅವರೂ ತಮ್ಮ ಸಾಮರ್ಥ್ಯ ತೋರಲು ಸಿದ್ಧರಾಗಿದ್ದಾರೆ. 

ಉತ್ತಮ ಆಟಗಾರರಾದ ಪಂಕಜ್ ಮೋಹಿತೆ, ಗೌರವ್ ಖತ್ರಿ ಹಾಗೂ ಮೋಹಿತ್ ಗೋಯತ್ ಅವರಿರುವ ಪುಣೇರಿ ತಂಡವೂ ಸವಾಲೊಡ್ಡಲು ಸಿದ್ಧವಾಗಿದೆ. 

ತೆಲುಗು–ತಮಿಳ್ ಹಣಾಹಣಿ: ಟೂರ್ನಿಯ ಮೊದಲ ಪಂದ್ಯದಲ್ಲಿ ಸ್ಥಳೀಯ ಅಭಿಮಾನಿಗಳ ಸಮ್ಮುಖದಲ್ಲಿ ತೆಲುಗು ಟೈಟನ್ಸ್‌ ಕಣಕ್ಕಿಳಿಯಲಿದೆ. ತಮಿಳ್ ತಲೈವಾಸ್ ಸವಾಲೊಡ್ಡಲಿದೆ. 

‘ಪ್ರತಿಯೊಂದು ಫ್ರ್ಯಾಂಚೈಸಿಯು ತಮ್ಮ ತಂಡವನ್ನು ಬಲಿಷ್ಠಗೊಳಿಸಲು ಎಲ್ಲ ರೀತಿಯ  ಪ್ರಯತ್ನಗಳನ್ನು ಮಾಡಿಕೊಂಡಿವೆ. ಬಹಳಷ್ಟು ಸಿದ್ಧತೆಗಳನ್ನೂ ಮಾಡಿಕೊಂಡಿವೆ. ಅದರಿಂದಾಗಿ ಟೂರ್ನಿಯ ಪ್ರತಿಯೊಂದು ಪಂದ್ಯವೂ ನಮಗೆ ಪರೀಕ್ಷೆಯೊಡ್ಡುವುದು ಖಚಿತ. ಈ ಬಾರಿಯ ಟೂರ್ನಿಯು ಬಹಳ ಕುತೂಹಲಕಾರಿಯಾಗುವ ನಿರೀಕ್ಷೆ ಇದೆ’ ಎಂದು ತೆಲುಗು ಟೈಟನ್ಸ್ ನಾಯಕ ವಿಜಯ್ ಮಲಿಕ್ ಹೇಳಿದ್ದಾರೆ. 

‘ತಾರಾ ವರ್ಚಸ್ಸಿನ ರೈಡರ್’ ಪವನ್ ಶೇರಾವತ್ ಅವರು ಈ ಬಾರಿ ತಮಿಳ್ ತಲೈವಾಸ್ ತಂಡವನ್ನು ಮುನ್ನಡೆಸಲಿದ್ದಾರೆ.  

‘ಸ್ಥಳೀಯ ತಂಡಕ್ಕೆ ಇಲ್ಲಿಯ ಅಭಿಮಾನಿಗಳ ಬೆಂಬಲ ಹೆಚ್ಚಿದೆ ಎಂಬುದರ ಅರಿವು ನಮಗಿದೆ. ಅದಕ್ಕಾಗಿಯೇ ನಾವು ಕೂಡ ಮತ್ತಷ್ಟು ಕಠಿಣ ಪರಿಶ್ರಮದಿಂದ ಸಿದ್ಧತೆ ಮಾಡಿಕೊಳ್ಳಲೂ ಕೂಡ ಅದೇ ಅಂಶ ಕಾರಣವಾಗುತ್ತದೆ. ಇಂತಹ ಪಂದ್ಯಗಳು ಇಡೀ ಋತುವಿಗೆ ಒಂದು ಅಮೋಘವಾದ ಮುನ್ನುಡಿಯನ್ನು ಬರೆಯುವ ಸಾಧ್ಯತೆ ಇರುತ್ತದೆ. ಕಬಡ್ಡಿ ಅಭಿಮಾನಿಗಳಿಗೆ ಶ್ರೇಷ್ಠವಾದ ಮನರಂಜನೆ ನೀಡಲು ನಾವು ಸರ್ವರೀತಿಯಿಂದಲೂ ಪ್ರಯತ್ನಿಸುತ್ತೇವೆ’ ಎಂದು ಪವನ್ ಹೇಳಿದ್ದಾರೆ. 

ಯೋಧರಿಗೆ ಗೌರವ: ಟೂರ್ನಿಯ ಆರಂಭಕ್ಕೂ ಮುನ್ನ ಭಾರತೀಯ ಸಶಸ್ತ್ರ ಪಡೆಗೆ ಗೌರವ ಸಲ್ಲಿಸಲಾಯಿತು.  1971ರ ಭಾರತ –ಪಾಕಿಸ್ತಾನ ಯುದ್ಧದಲ್ಲಿ ಕಾರ್ಯನಿರ್ವಹಿಸಿದ್ದ ‘ಐಎನ್‌ಎಸ್ ಕುರ್ಸುರಾ ಸಬ್‌ಮರೀನ್’ ಇರುವ ಸಂಗ್ರಾಹಾಲಯಕ್ಕೆ  12 ಕಬಡ್ಡಿ ತಂಡಗಳ ನಾಯಕರೂ ಭೇಟಿ ನೀಡಿ ಗೌರವ ಸಲ್ಲಿಸಿದರು. 

ವಿಶಾಖಪಟ್ಟಣ (ಅ.29 ರಿಂದ ಸೆ.11) ನಂತರ ಜೈಪುರ (ಸೆ 12 ರಿಂದ 28), ಚೆನ್ನೈ (ಸೆ 29 ರಿಂದ ಅ.10) ಮತ್ತು ನವದೆಹಲಿ (ಅ.11 ರಿಂದ ಅ.23) ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಪ್ಲೇ ಆಫ್‌ ಮತ್ತು ಫೈನಲ್ ಪಂದ್ಯಗಳ ಆಯೋಜನೆಯ ಸ್ಥಳಗಳನ್ನು ಲೀಗ್ ನಂತರ ನಿರ್ಧರಿಸಲಾಗುವುದು.

ನಾವು ಇಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನೂ ಆಚರಿಸಲಿದ್ದೇವೆ. ಈ ಸಂದರ್ಭದಲ್ಲಿ ಶ್ರೇಷ್ಠ ಅಥ್ಲೀಟ್‌ಗಳನ್ನು ಗೌರವಿಸಲಾಗುವುದು. ಈ ದಿನದಂದೇ ನಮ್ಮ ಟೂರ್ನಿ ಆರಂಭವಾಗುತ್ತಿರುವುದು ಬಹಳ ಅರ್ಥಪೂರ್ಣವಾಗಿದೆ.
–ಅನುಪಮ್ ಗೋಸ್ವಾಮಿ ಲೀಗ್ ಚೇರ್ಮನ್

ಇಂದಿನ ಪಂದ್ಯಗಳು

ತೆಲುಗು ಟೈಟನ್ಸ್–ತಮಿಳ್ ತಲೈವಾಸ್ (ರಾತ್ರಿ 8ರಿಂದ)

ಬೆಂಗಳೂರು ಬುಲ್ಸ್‌–ಪುಣೇರಿ ಪಲ್ಟನ್‌ (ರಾತ್ರಿ 9ರಿಂದ)

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಜಿಯೊಸ್ಟಾರ್ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.