ADVERTISEMENT

ಪ್ರೊ ಕಬಡ್ಡಿ ಲೀಗ್‌: ಬೆಂಗಳೂರು ಬುಲ್ಸ್‌ ಜಯದ ಓಟಕ್ಕೆ ತಡೆ

ತಮಿಳು ತಲೈವಾಸ್‌ ಗೆಲುವಿನಲ್ಲಿ ಮಿಂಚಿದ ಅರ್ಜುನ್‌

ಪ್ರದೀಶ್ ಎಚ್.ಮರೋಡಿ
Published 17 ಸೆಪ್ಟೆಂಬರ್ 2025, 0:30 IST
Last Updated 17 ಸೆಪ್ಟೆಂಬರ್ 2025, 0:30 IST
ತಮಿಳು ತಲೈವಾಸ್‌ ತಂಡದ ಅರ್ಜುನ್‌ ದೇಶ್ವಾಲ್‌ ರೇಡಿಂಗ್‌ ವೈಖರಿ
ತಮಿಳು ತಲೈವಾಸ್‌ ತಂಡದ ಅರ್ಜುನ್‌ ದೇಶ್ವಾಲ್‌ ರೇಡಿಂಗ್‌ ವೈಖರಿ   

ಜೈಪುರ: ಬೆಂಗಳೂರು ಬುಲ್ಸ್‌ ತಂಡದ ಗೆಲುವಿನ ಓಟಕ್ಕೆ ತಮಿಳು ತಲೈವಾಸ್‌ ತಂಡವು ಮಂಗಳವಾರ ತಡೆಯೊಡ್ಡಿತು. ಬುಲ್ಸ್‌ ತಂಡವು 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸತತ ನಾಲ್ಕನೇ ಗೆಲುವಿನ ನಂತರ ಆರು ಅಂಕಗಳಿಂದ ಸೋಲನುಭವಿಸಿತು.

ಸವಾಯಿ ಮಾನ್‌ ಸಿಂಗ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರೈವಲ್ರಿ ವಾರದ ದಕ್ಷಿಣ ಡರ್ಬಿಯ ಮುಖಾಮುಖಿಯಲ್ಲಿ ತಲೈವಾಸ್‌ ತಂಡವು 35–29ರಿಂದ ಬುಲ್ಸ್‌ ತಂಡವನ್ನು ಮಣಿಸಿ, ಈ ಆವೃತ್ತಿಯಲ್ಲಿ ಮೂರನೇ ಗೆಲುವು ದಾಖಲಿಸಿತು. 

ಮೊದಲಾರ್ಧದಲ್ಲಿ ರೇಡಿಂಗ್‌ ಮತ್ತು ಟ್ಯಾಕಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಬುಲ್ಸ್‌ ತಂಡವು ಆರು ಅಂಕಗಳಿಂದ(20–14) ಮುನ್ನಡೆ ಸಾಧಿಸಿ, ದ್ವಿತೀಯಾರ್ಧದಲ್ಲಿ ಅದನ್ನು ವಿಸ್ತರಿಸುವ ಪ್ರಯತ್ನದಲ್ಲಿತ್ತು. ಆದರೆ, ಬುಲ್ಸ್‌ ರಕ್ಷಣಾ ಕೋಟೆಯನ್ನು ಭೇದಿಸಿದ ತಲೈವಾಸ್‌ನ ಅನುಭವಿ ರೇಡರ್‌ ಅರ್ಜುನ್‌ ದೇಶ್ವಾಲ್‌ (13 ಅಂಕ) ತಮ್ಮ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು.

ADVERTISEMENT

ಪಂದ್ಯದ ಬಹುತೇಕ ಅವಧಿಯಲ್ಲಿ ಹಿಡಿತ ಸಾಧಿಸಿದ್ದ ಬುಲ್ಸ್‌ ತಂಡವನ್ನು 30ನೇ ನಿಮಿಷದಲ್ಲಿ ಎದುರಾಳಿ ಆಟಗಾರರು ಆಲೌಟ್‌ ಬಲೆಗೆ ಕೆಡವಿ, ಮಹತ್ವದ ಮುನ್ನಡೆ (23–26) ಗಳಿಸಿದರು. ನಂತರದಲ್ಲೂ ಆಕ್ರಮಣಕಾರಿ ಆಟಕ್ಕೆ ಇಳಿದ ತಲೈವಾಸ್‌ ತಂಡವು ಅಂತರವನ್ನು ಹಿಗ್ಗಿಸುತ್ತಾ ಸಾಗಿತು. ಈ ಹಿಂದಿನ ಪಂದ್ಯಗಳಲ್ಲಿ ಗೆಲುವಿಗೆ ಉಪಯುಕ್ತ ಕೊಡುಗೆ ನೀಡಿದ್ದ ಬುಲ್ಸ್‌ನ ಡಿಫೆಂಡರ್‌ಗಳು ಪದೇ ಪದೇ ಎಡವಿದರು.

ಬುಲ್ಸ್‌ ಪರ ಅಲಿರೆಜಾ ಮಿರ್ಜೈಯನ್ (10) ಈ ಆವೃತ್ತಿಯಲ್ಲಿ ಐದನೇ ಬಾರಿ ಸೂಪರ್‌ ಟೆನ್‌ ಸಾಧನೆ ಮಾಡಿದರು. ಅವರಿಗೆ ಉಳಿದ ಆಟಗಾರರಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ತೆಲುಗು ಟೈಟನ್ಸ್‌ ವಿರುದ್ಧದ ಗೆಲುವಿನಲ್ಲಿ ಮಿಂಚಿದ್ದ ಕನ್ನಡಿಗ ಗಣೇಶ ಹಣಮಂತಗೋಳ 4 ಅಂಕ ಗಳಿಸಲಷ್ಟೇ ಶಕ್ತವಾದರು. ಬುಲ್ಸ್‌ ತಂಡವು ಎಂಟು ಪಂದ್ಯಗಳಲ್ಲಿ ನಾಲ್ಕು ಜಯ, ನಾಲ್ಕು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.