ADVERTISEMENT

ಪ್ರೊ ಕಬಡ್ಡಿ ಲೀಗ್: ಮುತ್ತಿನ ನಗರಿಯಲ್ಲಿ ‘ಪ್ಲೇಆಫ್’ ಗಮ್ಮತ್ತು

10ನೇ ಆವೃತ್ತಿಯ ಅಂತಿಮ ಹಂತದ ಪಂದ್ಯಗಳಿಗೆ ಹೈದರಾಬಾದ್‌ ಆತಿಥ್ಯ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 16:14 IST
Last Updated 24 ಫೆಬ್ರುವರಿ 2024, 16:14 IST
<div class="paragraphs"><p>ಪ್ರೊ ಕಬಡ್ಡಿ ಲೀಗ್ ಪ್ಲೇ ಆಫ್‌ ಪಂದ್ಯಗಳ ಹಿನ್ನೆಲೆಯಲ್ಲಿ ಶನಿವಾರ ಸಂವಾದ ಕಾರ್ಯಕ್ರಮ&nbsp;ನಡೆಯಿತು</p></div>

ಪ್ರೊ ಕಬಡ್ಡಿ ಲೀಗ್ ಪ್ಲೇ ಆಫ್‌ ಪಂದ್ಯಗಳ ಹಿನ್ನೆಲೆಯಲ್ಲಿ ಶನಿವಾರ ಸಂವಾದ ಕಾರ್ಯಕ್ರಮ ನಡೆಯಿತು

   

ಹೈದರಾಬಾದ್‌: ದಶಕದ ಸಂಭ್ರಮದಲ್ಲಿರುವ ಪ್ರೊ ಕಬಡ್ಡಿ ಲೀಗ್‌ ಅಂತಿಮ ಘಟ್ಟ ತಲುಪಿದ್ದು ಇದೇ 26ರಿಂದ ನಡೆಯಲಿರುವ ಪ್ಲೇ ಆಫ್‌ ಹಣಾಹಣಿಗಾಗಿ ಕಬಡ್ಡಿಪ್ರಿಯರು ಕಾತರಗೊಂಡಿದ್ದಾರೆ. ತವರಿನ ತಂಡ ತೆಲುಗು ಟೈಟನ್ಸ್‌ ನಾಕೌಟ್‌ ಹಂತದಲ್ಲಿ ಇಲ್ಲದಿದ್ದರೂ ಇಲ್ಲಿನ ಕ್ರೀಡಾಪ್ರಿಯರು ಕೊನೆಯ ಐದು ಪಂದ್ಯಗಳನ್ನು ವೀಕ್ಷಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಗಚ್ಚಿಬೌಳಿಯ ಜಿ.ಎಂ.ಸಿ ಬಾಲಯೋಗಿ ಕ್ರೀಡಾ ಸಂಕಿರ್ಣವು ಎಲಿಮಿನೇಟರ್‌, ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯಗಳ ಆತಿಥ್ಯ ವಹಿಸಲಿದೆ. ನಾಲ್ಕನೇ ಆವೃತ್ತಿಯ ನಂತರ ಇದೇ ಮೊದಲ ಸಲ ನಾಕೌಟ್ ಕುತೂಹಲಕ್ಕೆ ನಗರ ಸಾಕ್ಷಿಯಾಗಲಿದೆ.

ADVERTISEMENT

ಸೆಮಿಫೈನಲ್ ಪ್ರವೇಶಿಸಿರುವ ಜೈಪುರ್ ಪಿಂಕ್ ಪ್ಯಾಂಥರ್ಸ್‌, ಎಲಿಮಿನೇಟರ್ ಪಂದ್ಯಗಳನ್ನು ಅಡಲಿರುವ ದಬಂಗ್ ಡೆಲ್ಲಿ ಮತ್ತು ಪಟ್ನಾ ಪೈರೇಟ್ಸ್‌ ಈಗಾಗಲೇ ಕನಿಷ್ಠ ಒಂದು ಬಾರಿಯಾದರೂ ಚಾಂಪಿಯನ್‌ ಪಟ್ಟ ಅಲಂಕರಿಸಿವೆ.

ನಾಲ್ಕರ ಘಟ್ಟ ತಲುಪಿರುವ ಪುಣೇರಿ ಪಲ್ಟನ್‌, ಎಲಿಮಿನೇಷನ್‌ ಪಂದ್ಯಗಳಿಗೆ ಸಜ್ಜಾಗಿರುವ ಗುಜರಾತ್ ಜೈಂಟ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ಮೊದಲ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿವೆ. ಹೀಗಾಗಿ ಅಂತಿಮ ಘಟ್ಟದ ಹಣಾಹಣಿ ರೋಚಕವಾಗುವ ನಿರೀಕ್ಷೆಯಿದೆ.

‘ಪ್ರೊ ಕಬಡ್ಡಿ ಆರಂಭವಾದಾಗಿನಿಂದ ಬಹುತೇಕ ಎಲ್ಲ ಪಂದ್ಯಗಳನ್ನು ವೀಕ್ಷಿಸುತ್ತಿದ್ದೇನೆ. ಈ ಬಾರಿ ನಮ್ಮ ನಗರದಲ್ಲೇ ನಾಕೌಟ್ ಪಂದ್ಯಗಳು ನಡೆಯುತ್ತಿರುವುದು ಖುಷಿಯ ವಿಷಯ’ ಎಂದು ಟ್ಯಾಕ್ಸಿ ಚಾಲಕ ಅಬ್ದುಲ್ ರಜಾಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಬಡ್ಡಿಯಲ್ಲಿ ಕ್ರೀಡೆಯ ನೈಜ ತಾಕತ್ತು ಇದೆ. ಹೀಗಾಗಿ ನನ್ನ ಮಕ್ಕಳಿಗೆ ಪ್ರೊ ಕಬಡ್ಡಿ ಪಂದ್ಯಗಳನ್ನು ವೀಕ್ಷಿಸುವಂತೆ ಪ್ರೇರೇಪಿಸುತ್ತಿದ್ದೇನೆ’ ಎನ್ನುತ್ತಾರೆ ಹೈಟೆಕ್ ಸಿಟಿಯಲ್ಲಿ ಮಳಿಗೆ ನಡೆಸುತ್ತಿರುವ ಮೊಹಮ್ಮದ್ ಇಸ್ಮಾಯಿಲ್.

‘ಹುಸೇನ್ ಸಾಗರ’ ಸಮೀಪದ ಹೋಟೆಲ್ ಮ್ಯಾರಿಯಟ್‌ನಲ್ಲಿ ಶನಿವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಎಲಿಮಿನೇಷನ್‌ ಮತ್ತು ಸೆಮಿಫೈನಲ್‌ ಪ್ರವೇಶಿಸಿರುವ ತಂಡಗಳ ನಾಯಕರು ‘ಮಾಡು–ಮಡಿ’ ಹಣಾಹಣಿಯಲ್ಲಿ ಶ್ರೇಷ್ಠ ಪ್ರದರ್ಶನ ತೋರುವ ಭರವಸೆ ನೀಡಿದರು. 

ಪ್ರೊ ಕಬಡ್ಡಿ ಲೀಗ್ 10 ಆವೃತ್ತಿಗಳನ್ನು ಕಂಡಿರುವುದು ಮಹತ್ವದ ಮೈಲಿಗಲ್ಲು. ಕಬಡ್ಡಿ ಈಗ ವಿಶ್ವವಿಖ್ಯಾತವಾಗಿದ್ದು ಈ ಯಶಸ್ಸು 25 ಆವೃತ್ತಿಗಳ ಕನಸು ಕಾಣುವಂತೆ ಮಾಡಿದೆ.
–ಅನುಪಮ್ ಗೋಸ್ವಾಮಿ, ಲೀಗ್ ಕಮಿಷನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.