ವಿಶಾಖಪಟ್ಟಣ: ಆಲ್‌ರೌಂಡರ್ ಭರತ್ ಮತ್ತು ವಿಜಯ್ ಮಲೀಕ್ ಅವರ ಅಮೋಘ ಆಟದ ಬಲದಿಂದ ತೆಲುಗು ಟೈಟನ್ಸ್ ತಂಡವು ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಜಯಿಸಿತು.
ಭಾನುವಾರ ನಡೆದ ಪಂದ್ಯದಲ್ಲಿ ಟೈಟನ್ಸ್ ತಂಡವು 44–34ರಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ಗೆದ್ದಿತು.
ವಿಶ್ವನಾಥ್ ಸ್ಪೋರ್ಟ್ಸ್ ಕ್ಲಬ್ ಒಳಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭರತ್ ಅವರು ‘ಸೂಪರ್ ಟೆನ್’ ಸಾಧನೆ ಮಾಡಿದರು. ಅವರ ಭರ್ಜರಿ ದಾಳಿ ಮತ್ತು ರಕ್ಷಣಾತ್ಮಕ ತಂತ್ರಗಳು ರಂಗೇರಿದವು. ಅವರು ಒಟ್ಟು 12 ಅಂಕಗಳನ್ನು ಗಳಿಸಿದರು. ಅದರಲ್ಲಿ 11 ಟಚ್ ಹಾಗೂ 1 ಟ್ಯಾಕಲ್ ಪಾಯಿಂಟ್ ಗಳಿಸಿದರು. ಅವರು ಒಟ್ಟು 17 ದಾಳಿಗಳನ್ನು ಮಾಡಿದರು.
ಅವರಿಗೆ ಉತ್ತಮ ಜೊತೆ ನೀಡಿದ ನಾಯಕ ವಿಜಯ್ 11 ಅಂಕಗಳನ್ನು ಗಳಿಸಿದರು. ಅದರಲ್ಲಿ 7 ಅಂಕಗಳು ದಾಳಿಯಲ್ಲಿ ಲಭಿಸಿದರೆ, 3 ಬೋನಸ್ ಮತ್ತು 1 ಟ್ಯಾಕಲ್‌ನಲ್ಲಿ ಒಲಿದವು. ರೇಡರ್ ಚೇತನ್ ಕೂಡ 5 ಅಂಕ ಗಳಿಸಿ ತಂಡದ ಮುನ್ನಡೆಗೆ ಕಾಣಿಕೆ ನೀಡಿದರು.
ಬೆಂಗಾಲ್ ತಂಡವು ಆರಂಭದಿಂದಲೇ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಲಿಲ್ಲ. ಮೊದಲಾರ್ಧದಲ್ಲಿ ಟೈಟನ್ಸ್ ತಂಡವು 23–14ರಿಂದ ಮುಂದಿತ್ತು. ವಿರಾಮದ ನಂತರದ ಅವಧಿಯಲ್ಲಿ ಬೆಂಗಾಲ್ ತಂಡ ಗಳಿಸಿದ್ದು ಕೇವಲ 7 ಅಂಕಗಳನ್ನು ಮಾತ್ರ. ಟೈಟನ್ಸ್ 15 ಪಾಯಿಂಟ್ಸ್ ಗಳಿಸಿತು.
ಬೆಂಗಾಲ್ ತಂಡದ ನಾಯಕ ದೇವಾಂಕ್ ಅವರು ದಿಟ್ಟ ಹೋರಾಟ ನಡೆಸಿದರು. 13 ಅಂಕಗಳನ್ನು ಕಲೆಹಾಕಿದರು. ಒಟ್ಟು 20 ಬಾರಿ ಎದುರಾಳಿ ಅಂಕಣಕ್ಕೆ ನುಗ್ಗಿದ ಅವರು 8 ಸಲ ಮಾತ್ರ ಪಾಯಿಂಟ್ ಗಳಿಸುವಲ್ಲಿ ಯಶಸ್ವಿಯಾದರು. ಆದರೆ ಐದು ಬೋನಸ್ ಅಂಕ ಹೆಕ್ಕಿ ತಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.