
ರೂರ್ಕೆಲಾ: ಭಾರತ ಪುರುಷರ ಹಾಕಿ ತಂಡ 2025ರ ಎಫ್‌ಐಎಚ್ ಪ್ರೊ ಲೀಗ್‌ನಲ್ಲಿ ಎಂಟನೇ ಸ್ಥಾನ ಗಳಿಸಿ ನಿರಾಸೆ ಮೂಡಿಸಿತ್ತು. ಬುಧವಾರ ಆರಂಭವಾಗುವ ಈ ಋತುವಿನ ಪ್ರೊ ಲೀಗ್‌ನ ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದೆ.
ಬುಧವಾರ ಪ್ರಬಲ ಬೆಲ್ಜಿಯಂ ತಂಡವನ್ನು ಎದುರಿಸುವ ಮೂಲಕ ಭಾರತ ತಂಡ ಅಭಿಯಾನ ಆರಂಭಿಸಲಿದೆ. ಆತಿಥೇಯರು ಮರುದಿನ ಅರ್ಜೆಂಟೀನಾ ತಂಡದ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಶನಿವಾರ ಬೆಲ್ಜಿಯಂ ತಂಡದ ವಿರುದ್ಧ ಮರುಪಂದ್ಯ ಆಡಲಿರುವ ಭಾರತ ತಂಡವು, ಭಾನುವಾರ ಅರ್ಜೆಂಟೀನಾ ತಂಡವನ್ನು ಮತ್ತೊಮ್ಮೆ ಎದುರಿಸಲಿದೆ.
ಅನುಭವಿ ಮತ್ತು ಉದಯೋನ್ಮುಖ ಆಟಗಾರರ ಹದವಾದ ಮಿಶ್ರಣ ಹೊಂದಿರುವ ಭಾರತ ತಂಡವು, ಪ್ರಬಲ ಎದುರಾಳಿಗಳ ವಿರುದ್ಧ ತವರಿನಂಗಳದಲ್ಲಿ ಆಡುವ ಪರಿಸ್ಥಿತಿಯ ಲಾಭ ಪಡೆಯಲು ಯೋಚನೆಯಲ್ಲಿದೆ.
ಭಾರತ ಈ ಬಾರಿಯ ಲೀಗ್‌ನಲ್ಲಿ ಆಡಲು ಕಾತರದಿಂದ ಕಾಯುತ್ತಿದ್ದರೆ, ಅರ್ಜೆಂಟೀನಾ ಮತ್ತು ಬೆಲ್ಜಿಯಂ– ಈ ಎರಡೂ ತಂಡಗಳು ಈಗಾಗಲೇ ಕೆಲವು ಪಂದ್ಯಗಳನ್ನು ಆಡಿದ್ದು ಉತ್ತಮ ಆರಂಭ ಮಾಡಿವೆ. ಅರ್ಜೆಂಟೀನಾ ನಾಲ್ಕು ಪಂದ್ಯಗಳನ್ನು ಆಡಿದ್ದು 11 ಅಂಕಗಳೊಡನೆ ಎರಡನೇ ಸ್ಥಾನದಲ್ಲಿದೆ. ಮೂರು ಪಂದ್ಯಗಳನ್ನು ನಿಗದಿ ಅವಧಿಯಲ್ಲಿ ಗೆದ್ದು, ಒಂದನ್ನು ಶೂಟೌಟ್‌ನಲ್ಲಿ ಜಯಿಸಿದೆ.
ಬೆಲ್ಜಿಯಂ ಸಹ ನಾಲ್ಕು ಪಂದ್ಯಗಳನ್ನು ಆಡಿದ್ದು, 10 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಮೂರು ಪಂದ್ಯಗಳನ್ನು ಗೆದ್ದು, ಒಂದನ್ನು ಶೂಟೌಟ್‌ನಲ್ಲಿ ಸೋತಿದೆ.
ಇತಿಹಾಸ ಗಮನಿಸಿದರೆ, ಭಾರತ ವಿರುದ್ಧ ಈವರೆಗಿನ ಮುಖಾಮುಖಿಯಲ್ಲಿ ಬೆಲ್ಜಿಯಂ ಮೇಲುಗೈ ಸಾಧಿಸಿದೆ. 2013 ರಿಂದ ಈಚೆಗೆ ಉಭಯ ತಂಡಗಳು 34 ಸಲ ಮುಖಾಮುಖಿಯಾಗಿದ್ದು, ಯುರೋಪಿನ ತಂಡ 22 ಸಲ, ಭಾರತ 11 ಸಲ ಗೆದ್ದಿವೆ. ಎರಡು ಪಂದ್ಯಗಳು ಡ್ರಾ ಆಗಿವೆ.
ಅರ್ಜೆಂಟೀನಾ ವಿರುದ್ಧ ಭಾರತದ ದಾಖಲೆ ಉತ್ತಮವಾಗಿದೆ.2013ರ ನಂತರ ಆಡಿರುವ 19 ಪಂದ್ಯಗಳಲ್ಲಿ 10ರಲ್ಲಿ ಗೆದ್ದಿದೆ. ಅರ್ಜೆಂಟೀನಾ ಏಳರಲ್ಲಿ ವಿಜಯಿಯಾಗಿದೆ.
‘ತಂಡದಲ್ಲಿ ಯುವ ಆಟಗಾರರಾದ ಅಮನದೀಪ್ ಲಾಕ್ರಾ, ಮನ್ಮೀತ್ ಸಿಂಗ್, ರೋಷನ್ ಕುಜೂರ್ ಅವರು ತಂಡದಲ್ಲಿ ಅವಕಾಶ ಪಡೆದಿರುವುದು ಸಂತಸ ಮೂಡಿಸಿದೆ. ಇತ್ತೀಚೆಗೆ ನಡೆದ ಹೀರೊ ಹಾಕಿ ಇಂಡಿಯಾ ಲೀಗ್‌ನಲ್ಲಿ ಈ ಯುವ ಆಟಗಾರರು ಅಮೋಘವಾಗಿ ಆಡಿದ್ದು, ತಮ್ಮಲ್ಲಿರುವ ಸಾಮರ್ಥ್ಯದ ಪರಿಚಯ ನೀಡಿದ್ದಾರೆ’ ಎಂದು ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಹೇಳಿದರು.
‘ಅಂತರರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಲು ಅವರಿಎ ಇದು ಸಕಾಲ. ಅವರೆಲ್ಲಾ ಅವಕಾಶ ಬಳಸಿಕೊಳ್ಳುವ ವಿಶ್ವಾಸವಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.