ಮಂಗಳೂರು: ಆರಂಭದಿಂದಲೇ ಚಾಣಾಕ್ಷ ನಡೆಗಳೊಂದಿಗೆ ಮುನ್ನಡೆದ ದಕ್ಷಿಣ ಕನ್ನಡದ ಧನುಷ್ ರಾಮ್ ಮತ್ತು ಗೋವಾದ ಚೈತನ್ಯ ವಿ.ಗಾಂವ್ಕರ್, ನಗರದ ಕಿಂಗ್ಸ್ ಚೆಸ್ ಅಕಾಡೆಮಿ ಆಯೋಜಿಸಿರುವ ರಾಷ್ಟ್ರಮಟ್ಟದ ಕೆಸಿಎ ಟ್ರೋಫಿ ರ‍್ಯಾಪಿಡ್ ಚೆಸ್ ಟೂರ್ನಿಯ ಮೊದಲ ದಿನವಾದ ಶನಿವಾರ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.
ಶರವು ದೇವಸ್ಥಾನ ಸಮೀಪದ ಬಾಳಂಭಟ್ ಸಭಾಂಗಣದಲ್ಲಿ ನಡೆಯುತ್ತಿರುವ, ಒಟ್ಟು 2 ಲಕ್ಷ ಬಹುಮಾನ ಮೊತ್ತದ ಟೂರ್ನಿಯ 7 ಸುತ್ತುಗಳ ಮುಕ್ತಾಯಕ್ಕೆ ಧನುಷ್ ಮತ್ತು ಚೈತನ್ಯ ತಲಾ 7 ಪಾಯಿಂಟ್ ಗಳಿಸಿದ್ದಾರೆ. ದಕ್ಷಿಣ ಕನ್ನಡದ ಆರುಷ್ ಭಟ್ 6.5 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ದೃಷ್ಟಿ ಘೋಷ್, ಅರುಳ್ ಆನಂದ್, ಸುದರ್ಶನ್, ಲಕ್ಷಿತ್ ಸಾಲ್ಯಾನ್, ಸಾತ್ವಿಕ್ ಆಚಾರ್ಯ, ಗಣೇಶ್ ಕಾಮತ್, ಪ್ರಹ್ಲಾದ್ ಸೇನ್ ಮತ್ತು ಸಂಗಮೇಶ್ ಸುಗಂಧಿ ತಲಾ 6 ಪಾಯಿಂಟ್ ಗಳಿಸಿದ್ದಾರೆ.
1924 ರೇಟಿಂಗ್ ಹೊಂದಿರುವ ಧನುಷ್ ರಾಮ್ 7ನೇ ಸುತ್ತಿನಲ್ಲಿ 1994 ರೇಟಿಂಗ್‌ನ ಸನ್ನಿಧಿ ರಾಮಕೃಷ್ಣ ವಿರುದ್ಧ ಜಯಭೇರಿ ಮೊಳಗಿಸಿದರು. ಇದಕ್ಕೂ ಮೊದಲು ತಮಗಿಂತ ಕಡಿಮೆ ರೇಟಿಂಗ್‌ನ ಆದಿತ್ಯ ಕಾರ್ತಿಕೇಯ, ಆರುಷ್ ಮೆಂಡಿಸ್, ನಿಖಿಲ್ ವಿಕ್ರಂ, ದಿಶಾ ಯು.ಎ, ಶರತ್ ರಾವ್ ಮತ್ತು ಸ್ವರಲಕ್ಷ್ಮಿ ನಾಯರ್ ವಿರುದ್ಧ ಗೆದ್ದರು. 1898 ರೇಟಿಂಗ್‌ನ ಚೈತನ್ಯ ಎಲ್ಲ ಸುತ್ತುಗಳಲ್ಲೂ ತಮಗಿಂತ ಕಡಿಮೆ ರೇಟಿಂಗ್‌ನ ಆಟಗಾರರನ್ನು ಸೋಲಿಸಿದರು. 8ನೇ ಸುತ್ತಿನಲ್ಲಿ ಧನುಷ್ ಮತ್ತು ಚೈತನ್ಯ ನಡುವಿನ ಪಂದ್ಯ ಕುತೂಹಲ ಕೆರಳಿಸಿದೆ.
ಐದನೇ ಸುತ್ತಿನ ವರೆಗೆ ಗೆಲುವಿನ ಓಟ ಮುಂದುವರಿಸಿ ಅಗ್ರ ಸ್ಥಾನ ಹಂಚಿಕೊಂಡಿದ್ದ ಆರುಷ್ ಭಟ್ ಆರನೇ ಸುತ್ತಿನಲ್ಲಿ ಮಹಾರಾಷ್ಟ್ರದ ಸನ್ನಿಧಿ ರಾಮಕೃಷ್ಣ ಜೊತೆ ಡ್ರಾ ಮಾಡಿಕೊಂಡರು. 7ನೇ ಸುತ್ತಿನಲ್ಲಿ ದಕ್ಷಿಣ ಕನ್ನಡದ ರುದ್ರ ರಾಜೀವ್ ಅವರನ್ನು ಮಣಿಸಿ ಮತ್ತೆ ಗೆಲುವಿನ ಲಯಕ್ಕೆ ಮರಳಿದರು. ಭಾನುವಾರ 2 ಸುತ್ತುಗಳು ಉಳಿದಿದ್ದು 8ನೇ ಸುತ್ತಿನಲ್ಲಿ ಸುದರ್ಶನ್ ಭಟ್ ವಿರುದ್ಧ ಆರುಷ್ ಸೆಣಸುವರು.
ಅರುಳ್ ಆನಂದ್‌ಗೆ ನಿರಾಶೆ:
2046 ಫಿಡೆ ರೇಟಿಂಗ್ ಹೊಂದಿರುವ ಕರ್ನಾಟಕದ ಅರುಳ್ ಆನಂದ್ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದಾರೆ. ಆದರೆ ಅವರು 3ನೇ ಸ್ಥಾನ ಹಂಚಿಕೊಂಡಿದ್ದಾರೆ. 5ನೇ ಸುತ್ತಿನಲ್ಲಿ 1859 ರೇಟಿಂಗ್ ಪಾಯಿಂಟ್‌ಗಳ ಆರುಷ್ ಭಟ್ ಎದುರಿನ ಸೋಲು ಅವರಿಗೆ ಮುಳುವಾಯಿತು. ಸಂಹಿತಾ ಶೆಣೈ, ಆಶಿಶ್ ಮೆಂಡಿಸ್, ವಿಹಾನ್ ಲೋಬೊ, ಸೌರಭ್ ಸೋಮವಂಶಿ, ಆದ್ಯಾ ಶೆಟ್ಟಿ ಮತ್ತು ರಿತೇಶ್ ವಿರುದ್ಧ ಅವರು ಜಯ ಸಾಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.