ADVERTISEMENT

ಅರ್ಜುನ ಪ್ರಶಸ್ತಿಗೆ ಅದಿತಿ ಹೆಸರು ಶಿಫಾರಸು

ಪಿಟಿಐ
Published 4 ಜೂನ್ 2020, 19:45 IST
Last Updated 4 ಜೂನ್ 2020, 19:45 IST
ಅದಿತಿ ಅಶೋಕ್‌
ಅದಿತಿ ಅಶೋಕ್‌   

ನವದೆಹಲಿ: ಇಂಡಿಯನ್‌ ಗಾಲ್ಫ್‌ ಯೂನಿಯನ್‌ (ಐಜಿಯು) ಕರ್ನಾಟಕದ ಭರವಸೆಯ ಗಾಲ್ಫರ್‌ ಅದಿತಿ ಅಶೋಕ್‌, ರಶೀದ್‌ ಖಾನ್‌ ಹಾಗೂ ದೀಕ್ಷಾ ದಾಗರ್‌ ಅವರ ಹೆಸರನ್ನು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ.

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ 22 ವರ್ಷ ವಯಸ್ಸಿನ ಅದಿತಿ, ಮಹಿಳಾ ಯುರೋಪಿಯನ್‌ ಟೂರ್‌ನಲ್ಲಿ ಮೂರು ಪ್ರಶಸ್ತಿಗಳನ್ನು ಗೆದ್ದ ಹಿರಿಮೆ ಹೊಂದಿದ್ದಾರೆ.

ಭಾರತದ ಅಗ್ರ ಕ್ರಮಾಂಕದ ಗಾಲ್ಫರ್ ಆಗಿರುವ ರಶೀದ್‌, 2010ರಲ್ಲಿ ಗುವಾಂಗ್‌ಜೌನಲ್ಲಿ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ ತಂಡವು ಬೆಳ್ಳಿಯ ಪದಕ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. 29 ವರ್ಷ ವಯಸ್ಸಿನ ರಶೀದ್‌, 2014ರಲ್ಲಿ ಏಷ್ಯನ್‌ ಟೂರ್‌ನಲ್ಲಿ ಎರಡು ಟ್ರೋಫಿಗಳನ್ನು ಗೆದ್ದಿದ್ದರು.

ADVERTISEMENT

19 ವರ್ಷ ವಯಸ್ಸಿನ ದೀಕ್ಷಾ, 2017ರಲ್ಲಿ ನಡೆದಿದ್ದ ಡೆಫಲಿಂಪಿಕ್ಸ್‌ನಲ್ಲಿ‌ (ಕಿವುಡರ) ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದರು.

ಹೋದ ವರ್ಷ ನಡೆದಿದ್ದದಕ್ಷಿಣ ಆಫ್ರಿಕಾ ಓಪನ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದ ಅವರು ಮಹಿಳಾ ಯುರೋಪಿಯನ್‌ ಟೂರ್‌ನಲ್ಲಿ ಚಾಂಪಿಯನ್‌ ಆದ ಭಾರತದ ಅತೀ ಕಿರಿಯ ಗಾಲ್ಫರ್‌ ಎಂಬ ದಾಖಲೆ ನಿರ್ಮಿಸಿದ್ದರು.

ಇದುವರೆಗೂ ಒಟ್ಟು 17 ಮಂದಿ ಗಾಲ್ಫರ್‌ಗಳು ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪಟ್ಟಿಯಲ್ಲಿ ಮೂರು ಮಂದಿ ಮಹಿಳೆಯರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.