ರಾಷ್ಟ್ರೀಯ ಕ್ರೀಡಾಕೂಟ 2025
ಡೆಹ್ರಾಡೂನ್: ಒಡಿಶಾದ ಉದಯೋನ್ಮುಖ ಓಟಗಾರ ಅನಿಮೇಶ್ ಕುಜೂರ್, ರಾಷ್ಟ್ರೀಯ ಕ್ರೀಡೆಗಳ ಅಥ್ಲೆಟಿಕ್ಸ್ ಸ್ಪರ್ಧೆಗಳ ಮೊದಲ ದಿನವಾದ ಶನಿವಾರ ತೀವ್ರ ಪೈಪೋಟಿಯಿಂದ ಕೂಡಿದ್ದ 100 ಮೀ. ಓಟವನ್ನು 10.28 ಸೆಕೆಂಡುಗಳಲ್ಲಿ ಕ್ರಮಿಸಿ ಸ್ವರ್ಣ ಗೆದ್ದರಲ್ಲದೇ, ಆ ಹಾದಿಯಲ್ಲಿ ಕೂಟದಾಖಲೆಯನ್ನು ಸರಿಗಟ್ಟಿದರು.
ಅಥ್ಲೆಟಿಕ್ಸ್‌ನಲ್ಲಿ ಮೊದಲ ದಿನ ಪಣಕ್ಕಿದ್ದ 10 ಚಿನ್ನದ ಪದಕಗಳಲ್ಲಿ ಮಹಾರಾಷ್ಟ್ರ ಮತ್ತು ಸರ್ವಿಸಸ್ ತಲಾ ಎರಡು ಗೆದ್ದವು.
21 ವರ್ಷ ವಯಸ್ಸಿನ ಕುಜೂರ್ ಅವರ ವೈಯಕ್ತಿಕ ಶ್ರೇಷ್ಠ ಸಾಧನೆ 10.27 ಸೆ. ಅವರು, 2022ರ ಗುಜರಾತ್ ಕ್ರೀಡೆಗಳಲ್ಲಿ ಅಸ್ಸಾಮಿನ ಆಮ್ಲನ್ ಬೊರ್ಗೊಹೈನ್ ಅವರು ಸ್ಥಾಪಿಸಿದ್ದ 10.28 ಸೆ.ಗಳ ದಾಖಲೆಯನ್ನು ಇಲ್ಲಿ ಸರಿಗಟ್ಟಿದರು. ಫೆಡರೇಷನ್ ಕಪ್ ಮತ್ತು ಅಂತರರಾಜ್ಯ ಚಾಂಪಿಯನ್‌ಷಿಪ್‌ಗಳಲ್ಲಿ ಕುಜೂರ್ ಬೆಳ್ಳಿ ಗೆದ್ದಿದ್ದರು.
ಮಹಾರಾಷ್ಟ್ರದ ಪ್ರಣವ್ ಗುರವ್ (10.32 ಸೆ.) ಅಚ್ಚರಿಯ ರೀತಿ ಬೆಳ್ಳಿ ಗೆದ್ದರೆ, ಅನುಭವಿ ಬೊರ್ಗೊಹೈನ್ (10.43 ಸೆ.) ಮೂರನೇ ಸ್ಥಾನಕ್ಕೆ ಸರಿದರು. ರಾಷ್ಟ್ರೀಯ ದಾಖಲೆವೀರ ಮಣಿಕಂಠ ಹೋಬಳಿದಾರ (ಸರ್ವಿಸಸ್) ಐದನೇ ಸ್ಥಾನವನ್ನಷ್ಟೇ (10.46ಸೆ.) ಗಳಿಸಿದರು. ಮಣಿಕಂಠ 2023ರಲ್ಲಿ 10.23 ಸೆ.ಗಳಲ್ಲಿ ಓಡಿದ್ದು ರಾಷ್ಟ್ರೀಯ ದಾಖಲೆಯಾಗಿದೆ.
ದೇಶದ ಅಗ್ರ ಸ್ಪ್ರಿಂಟರ್‌ಗಳಲ್ಲಿ ಒಬ್ಬರಾದ ಗುರಿಂದರ್‌ವೀರ್ ಸಿಂಗ್ ಎರಡನೇ ಹೀಟ್‌ನಲ್ಲಿ ಮೂರನೇ ಸ್ಥಾನ (10.96ಸೆ.) ಗಳಿಸಿದ್ದರಿಂದ ಫೈನಲ್‌ಗೆ ಅರ್ಹತೆ ಪಡೆಯಲಾಗಲಿಲ್ಲ. ಗುರಿಂದರ್‌ವೀರ್ ಕಳೆದ ವರ್ಷ ಫೆಡರೇಷನ್ ಕಪ್ ಮತ್ತು ಅಂತರರಾಜ್ಯ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು. ಅವರ ಶ್ರೇಷ್ಠ ಸಾಧನೆ 10.27 ಸೆ.ಗಳಾಗಿದೆ.
ಮಹಾರಾಷ್ಟ್ರದ ಸುದೇಷ್ಣಾ ಶಿವಣಕರ್ ಅವರು ಮಹಿಳೆಯರ ವಿಭಾಗದಲ್ಲಿ ವೇಗದ ರಾಣಿ ಎನಿಸಿದರು. ಅವರು 11.76 ಸೆ.ಗಳಲ್ಲಿ ದೂರ ಕ್ರಮಿಸಿದರೆ, ತೀವ್ರ ಪೈಪೋಟಿ ನೀಡಿದ ತೆಲಂಗಾಣದ ನಿತ್ಯಾ ಗಂಧೆ (11.79ಸೆ.) ಬೆಳ್ಳಿ ಮತ್ತು ತಮಿಳುನಾಡಿನ ಗಿರಿಧಾರಿನಿ ರವಿಕುಮಾರ್ (11.88ಸೆ.) ಕಂಚಿನ ಪದಕ ಗೆದ್ದರು.
ಮಹಿಳೆಯರ 10,000 ಮೀ. ಓಟದಲ್ಲಿ, ಪ್ಯಾರಿಸ್ ಒಲಿಂಪಿಯನ್ ಅಂಕಿತಾ ಧ್ಯಾನಿ ಎರಡನೇ ಸ್ಥಾನ ಪಡೆಯಬೇಕಾಯಿತು. ಅನುಭವಿ ಸಂಜೀವನಿ ಜಾಧವ್ (ಮಹಾರಾಷ್ಟ್ರ) ಅವರು 33ನಿ.33.47 ಸೆ.ಗಳಲ್ಲಿ ಓಡಿ ಚಿನ್ನ ಗೆದ್ದರು.
ಮಹಿಳೆಯರ 1,500 ಮೀ. ಓಟದಲ್ಲಿ 2022ರ ಆವೃತ್ತಿಯ ಚಾಂಪಿಯನ್ ಕೆ.ಎಂ.ಚಂದಾ ಅವರು 4ನಿ.17.74 ಸೆ.ಗಳಲ್ಲಿ ದೂರ ಕ್ರಮಿಸಿ, ರಾಷ್ಟ್ರೀಯ ದಾಖಲೆ ಹೊಂದಿರುವ ಮಧ್ಯಪ್ರದೇಶದ ಕೆ.ಎಂ.ದೀಕ್ಷಾ ಅವರನ್ನು ಹಿಂದೆ ಹಾಕಿದರು. ದೀಕ್ಷಾ 4ನಿ.21.92 ಸೆ. ತೆಗೆದುಕೊಂಡು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಫಲಿತಾಂಶಗಳು:
ಪುರುಷರು: 100 ಮೀ. ಓಟ: ಅನಿಮೇಶ್ ಕುಜೂರ್ (ಒಡಿಶಾ)–1, ಪ್ರಣವ್ ಗುರವ್ (ಮಹಾರಾಷ್ಟ್ರ)–2, ಆಮ್ಲನ್ ಬೊರ್ಗೊಹೈನ್ (ಅಸ್ಸಾಮ್)–3, ಕಾಲ: 10.28 ಸೆ.; 1,500 ಮೀ ಓಟ: ಯೂನುಸ್ ಶಾ (ಸರ್ವಿಸಸ್)–1, ರಿತೇಶ್ ಒಹ್ರೆ (ಮಧ್ಯಪ್ರದೇಶ)–2, ರಾಮ್ ಸಿಂಗ್ (ಉತ್ತರಾಖಂಡ)–3, ಕಾಲ: 3ನಿ.46.48 ಸೆ.; 10000 ಮೀ. ಓಟ: ಸಾವನ್ ಭರ್ವಾಲ್ (ಹಿಮಾಚಲ ಪ್ರದೇಶ)–1, ಕಿರಣ್ ಮ್ಹಾತ್ರೆ (ಮಹಾರಾಷ್ಟ್ರ)–2, ವಿನೋದ್ ಸಿಂಗ್ (ಮಧ್ಯಪ್ರದೇಶ)–3, ಕಾಲ: 28ನಿ.49.93 ಸೆ.; ಲಾಂಗ್‌ಜಂಪ್: ಶಾನವಾಝ್ ಖಾನ್ (ಉತ್ತರ ಪ್ರದೇಶ)–1, ವಿ.ಶ್ರೀರಾಮ್ (ತಮಿಳುನಾಡು)–2, ಅನುರಾಗ್ ಸಿ.ವಿ. (ಕೇರಳ)–3, ದೂರ: 7.70 ಮೀ.; ಡಿಸ್ಕಸ್ ಥ್ರೊ: ಗಗನ್‌ದೀಪ್ ಸಿಂಗ್ (ಸರ್ವಿಸಸ್)–1, ನಿರ್ಭಯ್ ಸಿಂಗ್ (ಹರಿಯಾಣ)–2, ಅಲೆಕ್ಸ್ ಥಂಕಚ್ಚನ್ (ಕೇರಳ)–3, ದೂರ: 55.01 ಮೀ.
ಮಹಿಳೆಯರು: 100 ಮೀ. ಓಟ: ಸುದೇಷ್ಣಾ ಶಿವಣಕರ್ (ಮಹಾರಾಷ್ಟ್ರ, 11.76 ಸೆ)–1, ನಿತ್ಯಾ ಗಂಧೆ (ತೆಲಂಗಾಣ, 11.79ಸೆ.)–2, ಗಿರಿಧಾರಿಣಿ ರವಿಕುಮಾರ್ (ತಮಿಳುನಾಡು, 11.88ಸೆ.)–3; 1,500 ಮೀ. ಓಟ: ಚಂದಾ ಕೆ.ಎಂ. (ದೆಹಲಿ)–1, ದೀಕ್ಷಾ (ಮಧ್ಯಪ್ರದೇಶ)–2, ಅಮನದೀಪ್ ಕೌರ್ (ಪಂಜಾಬ್)–3, ಕಾಲ: 4ನಿ.17.74 ಸೆ.; 10,000 ಮೀ ಓಟ: ಸಂಜೀವನಿ ಜಾಧವ್ (ಮಹಾರಾಷ್ಟ್ರ)–1, ಅಂಕಿತಾ ಧ್ಯಾನಿ (ಉತ್ತರಾಖಂಡ)–2, ಸೋನಿಯಾ (ಉತ್ತರಾಖಂಡ)–3, ಕಾಲ: 33ನಿ.33.47 ಸೆ.; ಲಾಂಗ್‌ಜಂಪ್: ಪೋಲ್‌ವಾಲ್ಟ್: ಪವಿತ್ರಾ ವೆಂಕಟೇಶ್ (ತಮಿಳುನಾಡು)–1, ಬರನಿಕಾ ಇಳಂಗೋವನ್ (ತಮಿಳುನಾಡು)–2, ಮರಿಯಾ ಜೈಸನ್ (ಕೇರಳ)–3, ಎತ್ತರ: 3.95 ಮೀ.; ಡಿಸ್ಕಸ್ ಥ್ರೊ: ಸೀಮಾ (ಹರಿಯಾಣ)–1, ಭಾವನಾ ಯಾದವ್ (ದೆಹಲಿ)–2, ಅಮಾನತ್ ಕಾಂಬೋಜ್ (ಪಂಜಾಬ್)–3, ದೂರ: 52.70 ಮೀ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.