ADVERTISEMENT

ಖ್ಯಾತ ಕುದುರೆ ರೇಸ್‌ ತರಬೇತುದಾರ ಎಸ್‌.ಪದ್ಮನಾಭನ್‌ ನಿಧನ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 14:40 IST
Last Updated 19 ಅಕ್ಟೋಬರ್ 2025, 14:40 IST
ಎಸ್‌.ಪದ್ಮನಾಭನ್‌
ಎಸ್‌.ಪದ್ಮನಾಭನ್‌   

ಬೆಂಗಳೂರು: ಕುದುರೆ ರೇಸ್‌ ತರಬೇತಿಯಲ್ಲಿ ಉನ್ನತ ಮಟ್ಟದಲ್ಲಿ ಹೆಸರು ಮಾಡಿದ್ದ ಎಸ್‌. ಪದ್ಮನಾಭನ್‌ (71) ಅವರು ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಭಾನುವಾರ ನಿಧನರಾದರು. ಅವರು ಅಭಿಮಾನಿ ವಲಯದಲ್ಲಿ ‘ಪದ್ದು’ ಎಂದೇ ಕರೆಯಿಸಿಕೊಳ್ಳುತ್ತಿದ್ದರು.

ದೇಶದಲ್ಲಿ ರೇಸ್‌ ತರಬೇತಿಯ ದಂತಕತೆಗಳಾದ ರಶೀದ್‌ ಬೈರಾಮ್ಜಿ, ಆರಿಸ್‌ ಡೇವಿಡ್‌ ಅವರ ನಂತರದ ಸ್ಥಾನ ಪದ್ಮನಾಭನ್‌ ಅವರಿಗೆ ಸಲ್ಲುತ್ತದೆ. ಅವರ ಪ್ರಮುಖ ಗುರಿ ಕ್ಲಾಸಿಕ್‌ ರೇಸ್‌ಗಳನ್ನು ಗೆಲ್ಲುವುದೇ ಆಗಿತ್ತು. ತಮ್ಮ ತರಬೇತು ಜೀವನದಲ್ಲಿ ಸುಮಾರು 1000ಕ್ಕೂ ಹೆಚ್ಚಿನ ಕುದುರೆಗಳನ್ನು ಗೆಲ್ಲಿಸಿರುತ್ತಾರೆ. 

ದೇಶದ ಅತ್ಯುತ್ತಮ ಹಾಗೂ ಶ್ರೇಷ್ಠ ರೇಸ್‌ ‘ಇಂಡಿಯನ್‌ ಇನ್ವಿಟೇಷನ್‌ ಕಪ್‌’ ಅನ್ನು ಐದು ಬಾರಿ ಹಾಗೂ ಶ್ರೀಮಂತ ರೇಸ್‌ ‘ಇಂಡಿಯನ್‌ ಡರ್ಬಿ’ ಅನ್ನು ಮೂರು ಬಾರಿ ಗೆದ್ದಿರುವುದು ಅವರ ಪ್ರಮುಖ ಸಾಧನೆ. ದೇಶದ ಎಲ್ಲಾ ರೇಸ್‌ ಕ್ಲಬ್‌ಗಳು ನಡೆಸುವ ಕ್ಲಾಸಿಕ್‌ ರೇಸ್‌ಗಳಲ್ಲಿ 113 ಜಯಶಾಲಿಯಾಗಿದ್ದಾರೆ ಮತ್ತು 200 ಗ್ರೇಡೆಡ್‌ ರೇಸ್‌ಗಳನ್ನು ಗೆದ್ದಿರುತ್ತಾರೆ.

ADVERTISEMENT

ತರಬೇತುದಾರನಾಗಿ ಅಲ್ಲದೆ ಕರ್ನಾಟಕ ಟ್ರೈನರ್ಸ್‌ ಸಂಸ್ಥೆ, ಇಂಡಿಯನ್‌ ರೇಸ್‌ಹಾರ್ಸ್‌ ಟ್ರೈನರ್ಸ್ ಸಂಸ್ಥೆ ಮತ್ತು ಕರ್ನಾಟಕ ರೇಸ್‌ಹಾರ್ಸ್‌ ಓನರ್ಸ್‌ ಸಂಸ್ಥೆಯಲ್ಲಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಟರ್ಫ್‌ ಕ್ಲಬ್‌ ಆಫ್‌ ಇಂಡಿಯಾ ಅವರನ್ನು ಕಾಯಂ ಆಹ್ವಾನಿತರನ್ನಾಗಿ ಗೌರವಿಸಿತ್ತು.

ಸೋಮವಾರ ಬೆಳಿಗ್ಗೆ 10ರಿಂದ ಸಂಜಯನಗರದ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಗೆ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.