ADVERTISEMENT

ಅಭ್ಯಾಸದ ಅಂಗಣಕ್ಕೆ ಮರಳಿದ ಸೈನಾ

ಎರಡು ವಾರಗಳ ಬಳಿಕ ಸಾಯ್‌ ಶಿಬಿರ ಪ್ರವೇಶ ಸಾಧ್ಯತೆ

ಪಿಟಿಐ
Published 9 ಆಗಸ್ಟ್ 2020, 13:51 IST
Last Updated 9 ಆಗಸ್ಟ್ 2020, 13:51 IST
ಸೈನಾ ನೆಹ್ವಾಲ್‌–ಪಿಟಿಐ ಚಿತ್ರ
ಸೈನಾ ನೆಹ್ವಾಲ್‌–ಪಿಟಿಐ ಚಿತ್ರ   

ನವದೆಹಲಿ: ಲಂಡನ್‌ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌ ಅವರು ಭಾನುವಾರ ಅಭ್ಯಾಸದ ಅಂಗಣಕ್ಕೆ ಮರಳಿದ್ದಾರೆ. ಕೊರೊನಾ ವೈರಸ್‌ ಉಪಟಳದ ಹಿನ್ನೆಲೆಯಲ್ಲಿ ದೀರ್ಘಕಾಲದ ಬಿಡುವಿನ ಬಳಿಕ ಹೈದರಾಬಾದ್‌ನಲ್ಲಿ ಪ್ರತ್ಯೇಕವಾಗಿ ಅವರು ತಾಲೀಮು ನಡೆಸಿದ್ದು, ಭಾರತ ಕ್ರೀಡಾ ಪ್ರಾಧಿಕಾರದಲ್ಲಿ (ಸಾಯ್‌) ನಡೆಯುತ್ತಿರುವ ರಾಷ್ಟ್ರೀಯ ಶಿಬಿರವನ್ನು ಎರಡು ವಾರಗಳ ಬಳಿಕ ಸೇರಿಕೊಳ್ಳುವ ಸಾಧ್ಯತೆಯಿದೆ.

ರಾಷ್ಟ್ರೀಯ ತರಬೇತಿ ಶಿಬಿರ ನಡೆಸಲು ತೆಲಂಗಾಣ ಸರ್ಕಾರ ಆಗಸ್ಟ್‌ 1ರಂದು ಅನುಮತಿ ನೀಡಿದೆ. ಹಾಗಾಗಿ ಇಲ್ಲಿನ ಸಾಯ್‌ ಪುಲ್ಲೇಲ ಗೋ‍ಪಿಚಂದ್‌ ಅಕಾಡೆಮಿಯಲ್ಲಿ ಇದೇ ಏಳರಂದು ಶಿಬಿರ ಆರಂಭಿಸಲಾಗಿದೆ. ಒಲಿಂಪಿಕ್ಸ್‌ ಟಿಕೆಟ್‌ ಗಿಟ್ಟಿಸುವ ವಿಶ್ವಾಸ ಮೂಡಿಸಿರುವ ಅಥ್ಲೀಟುಗಳಲ್ಲಿ ಒಬ್ಬರಾಗಿರುವ ಸೈನಾ ಅವರಿಗೂ ಶಿಬಿರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

ಈ ಹಿಂದೆ ವಿಶ್ವದ ಅಗ್ರ ಕ್ರಮಾಂಕ ಅಲಂಕರಿಸಿದ್ದ ಆಟಗಾರ್ತಿ ಸೈನಾ ಅವರು ಸದ್ಯ ತಮ್ಮ ಪತಿ, ಬ್ಯಾಡ್ಮಿಂಟನ್‌ ಪಟು ಪರುಪಳ್ಳಿ ಕಶ್ಯಪ್‌ ಹಾಗೂ 2014ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತ ಆರ್‌.ಎಂ.ವಿ. ಗುರುಸಾಯಿದತ್ತ ಅವರ ಜೊತೆ ಸೇರಿ ಪ್ರತ್ಯೇಕ ಕೇಂದ್ರದಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

ADVERTISEMENT

‘ಒಂದು ವಾರದಿಂದ ನಾವು ಗೋಪಿಚಂದ್‌ ಅಕಾಡೆಮಿ ಸನಿಹದ ತರಬೇತಿ ಕೆಂದ್ರದಲ್ಲಿ ಅಭ್ಯಾಸ ನಡೆಸಿದ್ದೇವೆ. ಇಲ್ಲಿ ಸೀಮಿತ ಸೌಲಭ್ಯಗಳಿವೆ. ಸೈನಾ ಅವರು ಈಗಷ್ಟೇ ನಮ್ಮನ್ನು ಸೇರಿಕೊಂಡಿದ್ದಾರೆ. ಎರಡು ವಾರಗಳ ಬಳಿಕ ಗೋಪಿಚಂದ್‌ ಅಕಾಡೆಮಿಗೆ ತೆರಳಬಹುದು. ಇದಕ್ಕಾಗಿ ನಾವು ಗೋಪಿಚಂದ್‌ ಅವರ ಅನುಮತಿ ಕೇಳಿದ್ದೇವೆ. ಈ ಕುರಿತು ಇನ್ನೊಬ್ಬ ಕೋಚ್‌ ಇಂಡೊನೇಷ್ಯಾ ಮೂಲದ ಅಗುಸ್‌ ಡ್ವಿ ಸ್ಯಾಂಟೊಸೊ ಅವರೊಂದಿಗೆ ಚರ್ಚಿಸಿದ್ದೇವೆ‘ ಎಂದು ಕಶ್ಯಪ್‌ ಹೇಳಿದರು.

‘ಗೋಪಿಚಂದ್‌ ಅಕಾಡೆಮಿಯಲ್ಲಿ ಇನ್ನೂ ಕೆಲವು ಆಟಗಾರರು ಅಭ್ಯಾಸ ನಡೆಸಲು ಅಂಗಣಗಳಿವೆ. ಸಾಯ್‌ ಸೂಚಿಸಿರುವ ಮಾರ್ಗಸೂಚಿಗಳ ಅನ್ವಯ ಅಂತರ ಕಾಪಾಡಿಕೊಂಡು ಅಲ್ಲಿ ಅಭ್ಯಾಸ ನಡೆಸಬಹುದು‘ ಎಂದು ವಿಶ್ವ ಕ್ರಮಾಂಕದಲ್ಲಿ 24ನೇ ಸ್ಥಾನದಲ್ಲಿರುವ ಕಶ್ಯಪ್‌ ನುಡಿದರು.

ವಿಶ್ವ ಚಾಂಪಿಯನ್‌ ಪಿ.ವಿ.ಸಿಂಧು, ಬಿ.ಸಾಯಿ ಪ್ರಣೀತ್‌ ಹಾಗೂ ಎನ್‌.ಸಿಕ್ಕಿ ರೆಡ್ಡಿ ಅವರು ಶುಕ್ರವಾರ ಗೋಪಿಚಂದ್‌ ಅಕಾಡೆಮಿಯಲ್ಲಿ ಅಭ್ಯಾಸದ ಅಂಗಣಕ್ಕೆ ಇಳಿದಿದ್ದರು.

ಪುರುಷರ ಡಬಲ್ಸ್‌ ಜೋಡಿ ಚಿರಾಗ್‌ಶೆಟ್ಟಿ ಹಾಗೂ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಅವರು ಸದ್ಯ ಕ್ರಮವಾಗಿ ಮುಂಬೈ ಹಾಗೂ ಅಮಲಾಪುರಂನಲ್ಲಿದ್ದು(ಆಂಧ್ರ ಪ್ರದೇಶ), ಕೋವಿಡ್‌ ಭಯದ ಕಾರಣ ಎರಡು ವಾರಗಳ ಬಳಿಕ ಶಿಬಿರ ಸೇರುವುದನ್ನು ನಿರ್ಧರಿಸಲಿದ್ದಾರೆ.

ಮಹಿಳಾ ಡಬಲ್ಸ್‌ನಲ್ಲಿ ಸಿಕ್ಕಿ ರೆಡ್ಡಿ ಅವರಿಗೆ ಜೋಡಿಯಾಗಿರುವ ಕನ್ನಡತಿ ಅಶ್ವಿನಿ ಪೊನ್ನಪ್ಪ , ಅಂತರರಾಷ್ಟ್ರೀಯ ಟೂರ್ನಿಗಳ ವೇಳಾಪಟ್ಟಿ ಕುರಿತು ಸ್ಪಷ್ಟತೆ ಸಿಕ್ಕ ಬಳಿಕ ಶಿಬಿರ ಸೇರಲು ನಿರ್ಧರಿಸಿದ್ದಾರೆ. ಪ್ರಸ್ತುತ ಅವರು ಬೆಂಗಳೂರಿನ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಗುಂಟೂರು ಮೂಲದ ಕಿದಂಬಿ ಶ್ರೀಕಾಂತ್‌ ಅವರು, ಈ ವಾರ ತರಬೇತಿ ಆರಂಭಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.