ADVERTISEMENT

ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌: ಸೈನಾ ಒಲಿಂಪಿಕ್ಸ್‌ ಹಾದಿ ಕಠಿಣ

ಮೊದಲ ಸುತ್ತಿನಲ್ಲೇ ಸೋತ ಭಾರತದ ಆಟಗಾರ್ತಿ

ಪಿಟಿಐ
Published 12 ಮಾರ್ಚ್ 2020, 19:30 IST
Last Updated 12 ಮಾರ್ಚ್ 2020, 19:30 IST
ಸೈನಾ ನೆಹ್ವಾಲ್‌
ಸೈನಾ ನೆಹ್ವಾಲ್‌   

ಬರ್ಮಿಂಗ್‌ಹ್ಯಾಂ: ಭಾರತದ ಸೈನಾ ನೆಹ್ವಾಲ್‌, ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಸುತ್ತಿನಲ್ಲೇ ಸೋತಿದ್ದಾರೆ. ಇದರೊಂದಿಗೆ ಅವರ ಟೋಕಿಯೊ ಒಲಿಂಪಿಕ್ಸ್‌ ಹಾದಿ ಕಠಿಣವಾಗಿದೆ.

ಅರೇನಾ ಬರ್ಮಿಂಗ್‌ಹ್ಯಾಂ ಅಂಗಳದಲ್ಲಿ ಬುಧವಾರ ರಾತ್ರಿ ನಡೆದ ಮಹಿಳಾ ಸಿಂಗಲ್ಸ್‌ ವಿಭಾಗದ ಪೈಪೋಟಿಯಲ್ಲಿ ಸೈನಾ 11–21, 8–21ರಲ್ಲಿ ಜಪಾನ್‌ನ ಅಕಾನೆ ಯಮಗುಚಿ ಎದುರು ‍ಪರಾಭವಗೊಂಡರು. ಈ ಹೋರಾಟ ಕೇವಲ 28 ನಿಮಿಷಗಳಲ್ಲಿ ಮುಗಿಯಿತು.

ಟೋಕಿಯೊ ಕೂಟಕ್ಕೆ ಅರ್ಹತೆ ಗಳಿಸಲು ಏಪ್ರಿಲ್‌ 28 ಕೊನೆಯ ದಿನವಾಗಿದೆ. ಅಷ್ಟರೊಳಗೆ ಸೈನಾ, ರ‍್ಯಾಂಕಿಂಗ್‌ನಲ್ಲಿ ಅಗ್ರ 16ರೊಳಗೆ ಸ್ಥಾನ ಪಡೆಯಬೇಕು. ಒಂದೊಮ್ಮೆ ವಿಫಲರಾದರೆ ಅವರ ಒಲಿಂಪಿಕ್ಸ್‌ ಕನಸು ಭಗ್ನವಾಗಲಿದೆ.

ADVERTISEMENT

2012ರ ಲಂಡನ್‌ ಒಲಿಂ‍ಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿರುವ ಸೈನಾ, ಪ್ರಸ್ತುತ ರ‍್ಯಾಂಕಿಂಗ್‌ನಲ್ಲಿ 20ನೇ ಸ್ಥಾನ ಹೊಂದಿದ್ದಾರೆ. ಅವರ ಖಾತೆಯಲ್ಲಿ ಒಟ್ಟು 46,267 ಪಾಯಿಂಟ್ಸ್‌ ಇವೆ.

ಸೈನಾ ಅವರು ಈ ಋತುವಿನಲ್ಲಿ ಮೂರನೇ ಸಲ ಮೊದಲ ಸುತ್ತಿನಲ್ಲಿ ಸೋತಿದ್ದಾರೆ. ಯಮಗುಚಿ ವಿರುದ್ಧ 11 ಪಂದ್ಯಗಳನ್ನು ಆಡಿರುವ ಅವರು ಈ ಪೈಕಿ ಒಂಬತ್ತರಲ್ಲಿ ನಿರಾಸೆ ಕಂಡಿದ್ದಾರೆ.

ಭಾರತದ 29 ವರ್ಷ ವಯಸ್ಸಿನ ಆಟಗಾರ್ತಿ, ಸ್ವಿಸ್‌ ಓಪನ್‌ (ಮಾರ್ಚ್‌ 17–22), ಇಂಡಿಯಾ ಓಪನ್‌ (ಮಾರ್ಚ್‌ 24–29) ಹಾಗೂ ಮಲೇಷ್ಯಾ ಓಪನ್‌ (ಮಾರ್ಚ್‌ 31–ಏಪ್ರಿಲ್‌ 5) ಟೂರ್ನಿಗಳಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಕೊರೊನಾ ಭೀತಿಯಿಂದಾಗಿ ಈ ಟೂರ್ನಿಗಳನ್ನು ಮುಂದೂಡುವ ಇಲ್ಲವೇ ರದ್ದು ಮಾಡುವ ಸಾಧ್ಯತೆ ಇದೆ.

2015ರ ಆಲ್‌ ಇಂಗ್ಲೆಂಡ್‌ ಓಪನ್‌ನಲ್ಲಿ ಬೆಳ್ಳಿಯ ಪದಕ ಜಯಿಸಿದ್ದ ಸೈನಾ, ಮೊದಲ ಗೇಮ್‌ನಲ್ಲಿ ಮಂಕಾದರು. ಎರಡನೇ ಗೇಮ್‌ನಲ್ಲಿ ಅವರು ತಿರುಗೇಟು ನೀಡಬಹುದೆಂಬ ನಿರೀಕ್ಷೆಯೂ ಹುಸಿಯಾಯಿತು. ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಶ್ರೇಯಾಂಕ ಪಡೆದಿರುವ ಯಮಗುಚಿ, ಚುರುಕಿನ ಸರ್ವ್‌, ಆಕರ್ಷಕ ಡ್ರಾಪ್‌ ಮತ್ತು ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳ ಮೂಲಕ ಸುಲಭವಾಗಿ ಪಾಯಿಂಟ್ಸ್‌ ಕಲೆಹಾಕಿ ಸಂಭ್ರಮಿಸಿದರು.

ಲಕ್ಷ್ಯಗೆ ಜಯ: ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಲಕ್ಷ್ಯ ಸೇನ್‌ 17–21, 21–18, 21–17ರಲ್ಲಿ ಹಾಂಕ್‌ಕಾಂಗ್‌ನ ಚೆವುಕ್‌ ಯಿವು ಲೀ ವಿರುದ್ಧ ಗೆದ್ದರು.

ಬಿ.ಸಾಯಿ ಪ್ರಣೀತ್‌ ಅವರು ಆರಂಭಿಕ ಹಣಾಹಣಿಯಲ್ಲಿ 12–21, 12–21ರಲ್ಲಿ ಜಾವು ಜನ್‌ ಪೆಂಗ್‌ ವಿರುದ್ಧ ಪರಾಭವಗೊಂಡರು. ಈ ಹಣಾಹಣಿ 33 ನಿಮಿಷಗಳಲ್ಲಿ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.