
ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆ ಹಾಗೂ ಮಾಜಿ ನಂ.1 ಆಟಗಾರ್ತಿ ಸೈನಾ ನೆಹ್ವಾಲ್ ಅವರು ಸ್ಪರ್ಧಾತ್ಮಕ ಆಟಕ್ಕೆ ನಿವೃತ್ತಿ ಘೋಷಿಸಿದ್ದಾರೆ.
‘ನಾನು ಎರಡು ವರ್ಷಗಳಿಂದ ಬ್ಯಾಡ್ಮಿಂಟನ್ ಆಡುತ್ತಿಲ್ಲ. ನನ್ನ ದೇಹವು, ನನ್ನ ಆಟಕ್ಕೆ ಸ್ಪಂದಿಸುತ್ತಿಲ್ಲ. ನಾನು ನನ್ನದೇ ಉದ್ದೇಶಗಳಿಂದ ಆಟವಾಡಲು ಆರಂಭಿಸಿದೆ ಹಾಗೂ ನನ್ನದೇ ಉದ್ದೇಶಗಳಿಂದ ಬ್ಯಾಡ್ಮಿಂಟನ್ ಅಂಗಳದಿಂದ ಹಿಂದೆ ಸರಿಯುತ್ತಿದ್ದೇನೆ. ಅದನ್ನು ಅಧಿಕೃತವಾಗಿ ಹೇಳುವ ಅವಶ್ಯಕತೆಯಿಲ್ಲ’ ಎಂದು ಸೈನಾ ನೆಹ್ವಾಲ್ ಅವರು ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.
ದೀರ್ಘಕಾಲದ ಮೊಣಕಾಲಿನ ನೋವಿನಿಂದ ಬಳಲುತ್ತಿರುವ ಅವರು, ಕಳೆದ ಎರಡು ವರ್ಷಗಳಿಂದ ಬ್ಯಾಡ್ಮಿಂಟನ್ ಅಂಗಳದಿಂದ ದೂರ ಉಳಿದಿದ್ದರು. ಕೊನೆಯದಾಗಿ ಅವರು 2023ರ ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಆಡಿದ್ದರು.
ಸೈನಾ ನೆಹ್ವಾಲ್ ಅವರು 2012ರ ಲಂಡನ್ ಒಲಿಂಪಿಕ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.
‘ನಿವೃತ್ತಿ ಘೋಷಿಸುವುದನ್ನು ಅಷ್ಟು ದೊಡ್ಡ ವಿಷಯವೆಂದು ನಾನು ಭಾವಿಸಿರಲಿಲ್ಲ. ಆದರೆ, ಇನ್ನುಮುಂದೆ ಆಡಲು ಸಾಧ್ಯವಿಲ್ಲ ಎಂಬುದನ್ನು ನಾನು ಅರಿತುಕೊಂಡಿದ್ದೇನೆ. ಏಕೆಂದರೆ, ನನ್ನ ಮೊಣಕಾಲುಗಳು ನನ್ನ ಆಟಕ್ಕೆ ಸ್ಪಂದಿಸುತ್ತಿಲ್ಲ’ ಎಂದು ಅವರು ಹೇಳಿದರು.
‘ಬ್ಯಾಡ್ಮಿಂಟನ್‌ನಲ್ಲಿ ವಿಶ್ವದ ಅತ್ಯುತ್ತಮ ಆಟಗಾರರಾಗಬೇಕು ಎಂದರೆ 8–9 ಗಂಟೆಗಳ ಕಾಲ ತರಬೇತಿ ಪಡೆಯಬೇಕು. ಆದರೆ, ನನ್ನ ಮೊಣಕಾಲು ಒಂದು ಅಥವಾ ಎರಡು ಗಂಟೆಗಳಲ್ಲಿ ಬಲ ಕಳೆದುಕೊಳ್ಳುತ್ತಿದೆ. ಹಾಗಾಗಿ ಇನ್ನುಮುಂದೆ ಆಟ ನಿಲ್ಲಿಸಲು ಮುಂದಾಗಿದ್ದೇನೆ’ ಎಂದು ಅವರು ಹೇಳಿದರು.
2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಸೈನಾ ಅವರು ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದರು. ಇದು ಅವರ ವೃತ್ತಿಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರಿತು. ಈ ಗಾಯದಿಂದ ಮರಳಿದ ಅವರು, 2017ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಮತ್ತು 2018ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಅವರಿಗೆ ಆಡಲು ಸಾಧ್ಯವಾಗದಿರುವುದರಿಂದ ನಿವೃತ್ತಿ ನಿರ್ಧಾರಕ್ಕೆ ಬಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.