ನಾನ್‌ಜಿಂಗ್, ಚೀನಾ: ಭಾರತದ ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್ ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ಮುನ್ನುಡಿ ಬರೆದಿದ್ದಾರೆ.
ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೆ ಸುತ್ತಿನ ಪೈಪೋಟಿಯಲ್ಲಿ ಸೈನಾ 21–17, 21–8ರಲ್ಲಿ ಟರ್ಕಿಯ ಅಲಿಯೆ ಡೆಮಿರ್ಬಗ್ ಅವರನ್ನು ಸೋಲಿಸಿದರು. ಮೊದಲ ಸುತ್ತಿನಲ್ಲಿ ಸೈನಾಗೆ ‘ಬೈ’ ಲಭಿಸಿತ್ತು.
ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸೈನಾ, ಥಾಯ್ಲೆಂಡ್‌ನ ರಚಾನೊಕ್ ಇಂಟನಾನ್ ವಿರುದ್ಧ ಸೆಣಸಲಿದ್ದಾರೆ.
ಮೊದಲ ಗೇಮ್‌ನ ಆರಂಭದಿಂದಲೇ ಸೈನಾ ಮತ್ತು ಅಲಿಯೆ ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಹೀಗಾಗಿ 5–5, 6–6, 9–9 ಮತ್ತು 10–10ರ ಸಮಬಲ ಕಂಡುಬಂತು.
ವಿರಾಮದ ನಂತರ ಭಾರತದ ಆಟಗಾರ್ತಿ ಮೇಲುಗೈ ಸಾಧಿಸಿದರು. ಚುರುಕಿನ ಸರ್ವ್ ಮತ್ತು ಆಕರ್ಷಕ ಡ್ರಾಪ್‌ಗಳ ಮೂಲಕ ಪಾಯಿಂಟ್ಸ್ ಕಲೆಹಾಕಿದ ಸೈನಾ 15–11ರ ಮುನ್ನಡೆ ಗಳಿಸಿದರು. ಇದರಿಂದ ಎದೆಗುಂದದ ಅಲಿಯೆ ಪರಿಣಾಮಕಾರಿ ಆಟ ಆಡಿ ಹಿನ್ನಡೆಯನ್ನು 15–17ಕ್ಕೆ ತಗ್ಗಿಸಿಕೊಂಡರು. ಬಳಿಕ ಸೈನಾ ಒತ್ತಡದ ಪರಿಸ್ಥಿತಿಯಲ್ಲಿ ದಿಟ್ಟ ಆಟ ಆಡಿ ಗೆಲುವಿನ ತೋರಣ ಕಟ್ಟಿದರು.
ಎರಡನೆ ಗೇಮ್‌ನಲ್ಲಿ ಸೈನಾ ಆಟ ರಂಗೇರಿತು. ಕ್ರಾಸ್‌ಕೋರ್ಟ್ ಸ್ಮ್ಯಾಷ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಅವರು ದೀರ್ಘ ರ‍್ಯಾಲಿಗಳನ್ನು ಆಡಿ ಪಾಯಿಂಟ್ಸ್ ಸಂಗ್ರಹಿಸಿದರು. ಈ ಮೂಲಕ ಏಕಪಕ್ಷೀಯವಾಗಿ ಪಂದ್ಯ ಗೆದ್ದರು.
ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪೈಪೋಟಿಯಲ್ಲಿ ಐದನೆ ಶ್ರೇಯಾಂಕದ ಆಟಗಾರ ಶ್ರೀಕಾಂತ್ 21–15, 21–16ರಲ್ಲಿ ಐರ್ಲೆಂಡ್‌ನ ನಾಟ್ ಜುಯೆನ್ ಅವರನ್ನು ಪರಾಭವಗೊಳಿಸಿದರು.
ಮುಂದಿನ ಸುತ್ತಿನಲ್ಲಿ ಶ್ರೀಕಾಂತ್‌ಗೆ ಸ್ಪೇನ್‌ನ ಪ್ಯಾಬ್ಲೊ ಅಬಿಯನ್ ಸವಾಲು ಎದುರಾಗಲಿದೆ.
ಪುರುಷರ ಸಿಂಗಲ್ಸ್ ವಿಭಾಗದ ಮತ್ತೊಂದು ಪಂದ್ಯದಲ್ಲಿ ಬಿ.ಸಾಯಿ ಪ್ರಣೀತ್ ಮತ್ತು ಸನ್ ವಾನ್ ಹೊ ಪೈಪೋಟಿ ನಡೆಸಬೇಕಿತ್ತು. ವಾನ್ ಪಂದ್ಯದಿಂದ ಹಿಂದೆ ಸರಿದ ಕಾರಣ ಪ್ರಣೀತ್‌ಗೆ ‘ಬೈ’ ಲಭಿಸಿತು.
ಎರಡನೆ ಸುತ್ತಿನಲ್ಲಿ ಪ್ರಣೀತ್, ಸ್ಪೇನ್‌ನ ಲೂಯಿಸ್ ಎನ್ರಿಕ್ ಪೆನಾಲ್ವರ್ ವಿರುದ್ಧ ಆಡಲಿದ್ದಾರೆ.
ಪ್ರಿ ಕ್ವಾರ್ಟರ್‌ಗೆ ಅಶ್ವಿನಿ–ಸಾತ್ವಿಕ್: ಮಿಶ್ರ ಡಬಲ್ಸ್ ವಿಭಾಗದಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಆಂಧ್ರಪ್ರದೇಶದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಅವರು ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಎರಡನೆ ಸುತ್ತಿನ ಪಂದ್ಯದಲ್ಲಿ ಅಶ್ವಿನಿ ಮತ್ತು ಸಾತ್ವಿಕ್ 10–21, 21–17, 21–18ರಲ್ಲಿ ಜರ್ಮನಿಯ ಮಾರ್ಕ್ ಲ್ಯಾಮ್ಸ್‌ಫಸ್ ಮತ್ತು ಇಸಾಬೆಲ್ ಹರ್ಟ್‌ರಿಚ್ ಅವರನ್ನು ಸೋಲಿಸಿದರು.
ಮುಂದಿನ ಸುತ್ತಿನಲ್ಲಿ ಭಾರತದ ಜೋಡಿಗೆ ಮಲೇಷ್ಯಾದ ಗೊಹ್ ಸೂನ್ ಹುವಾತ್ ಮತ್ತು ಶೆವೊನ್ ಜೆಮಿ ಲಾಯ್ ಸವಾಲು ಎದುರಾಗಲಿದೆ.
ಎರಡನೆ ಸುತ್ತಿನ ಇನ್ನೊಂದು ಪಂದ್ಯದಲ್ಲಿ ರೋಹನ್ ಕಪೂರ್ ಮತ್ತು ಕುಹೂ ಗಾರ್ಗ್ 12–21, 12–21ರಲ್ಲಿ ಕ್ರಿಸ್ ಮತ್ತು ಗೇಬ್ರಿಯಲ್ ಅಡ್‌ಕಾಕ್ ವಿರುದ್ಧ ಸೋತರು.
ಪ್ರಣವ್ ಜೆರ‍್ರಿ ಚೋಪ್ರಾ ಮತ್ತು ಎನ್.ಸಿಕ್ಕಿ ರೆಡ್ಡಿ 16–21, 4–21ರಲ್ಲಿ ಇಂಡೊನೇಷ್ಯಾದ ಹಫೀಜ್ ಫೈಜಲ್ ಮತ್ತು ಗ್ಲೋರಿಯಾ ಎಮಾನುಯೆಲ್ ಎದುರು ಮಣಿದರು.
ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಎಂ.ಆರ್.ಅರ್ಜುನ್ ಮತ್ತು ರಾಮಚಂದ್ರನ್ ಶ್ಲೋಕ್ 14–21, 15–21ರಲ್ಲಿ ಮಲೇಷ್ಯಾದ ಒಂಗ್ ಯೆವ್ ಸಿನ್ ಮತ್ತು ಟಿಯೊ ಯೀ ವಿರುದ್ಧ ಪರಾಭವಗೊಂಡರು.
ಇನ್ನೊಂದು ಪಂದ್ಯದಲ್ಲಿ ತರುಣ್ ಕೋನ ಮತ್ತು ಸೌರಭ್ ಶರ್ಮಾ 20–22, 21–18, 17–21ರಲ್ಲಿ ಹಾಂಕಾಂಗ್‌ನ ಚಿನ್ ಚುಂಗ್ ಮತ್ತು ಟಾಂಗ್ ಚುನ್ ಮಾನ್ ಎದುರು ನಿರಾಸೆ ಕಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.