ಕ್ವಾಲಾಲಂಪುರ: ಮಲೇಷ್ಯಾ ಓಪನ್ 1000 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರ ಸ್ಫೂರ್ತಿಯುತ ಓಟ ಸೆಮಿಫೈನಲ್‌ನಲ್ಲಿ ಅಂತ್ಯಗೊಂಡಿತು. ಭಾರತದ ಈ ಜೋಡಿ ಶನಿವಾರ ನಡೆದ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಜೋಡಿಗೆ ನೇರ ಗೇಮ್‌ಗಳಿಂದ ಮಣಿಯಿತು.
ಕಿಮ್ ವಾನ್ ಹೊ– ಸಿಯೊ ಸಿಯುಂಗ್ ಜೇ ಜೋಡಿ ನಾಲ್ಕರ ಘಟ್ಟದ ಪಂದ್ಯದಲ್ಲಿ 21–10, 21–15 ರಿಂದ ಏಳನೇ ಶ್ರೇಯಾಂಕದ ಸಾತ್ವಿಕ್– ಚಿರಾಗ್ ಜೋಡಿಯನ್ನು ಮಣಿಸಿತು.
‘ಅವರಿಬ್ಬರು ಅತ್ಯುತ್ತಮವಾಗಿ ಆಡಿದರು. ನಾವು ಆಟದ ಕಾರ್ಯತಂತ್ರವನ್ನು ಇನ್ನೂ ಉತ್ತಮವಾಗಿ ರೂಪಿಸಬೇಕಿತ್ತು. ನಾವು ಸ್ಥಿರವಾಗಿ ಆಡಲು ವಿಫಲರಾದೆವು’ ಎಂದು 40 ನಿಮಿಷಗಳ ಪಂದ್ಯದ ನಂತರ ಸಾತ್ವಿಕ್ ಸುದ್ದಿಗಾರರಿಗೆ ತಿಳಿಸಿದರು.
ಏಷ್ಯನ್ ಗೇಮ್ಸ್ ಚಾಂಪಿಯನ್ನರಾದ ಭಾರತದ ಆಟಗಾರರು ಉತ್ತಮ ಆರಂಭ ಕಂಡುಕೊಳ್ಳಲು ಪರದಾಡಿದರು. ಒಂದು ಹಂತದಲ್ಲಿ 6–11ರಲ್ಲಿ ಹಿಂದೆಬಿದ್ದ ನಂತರ ಪುನರಾಗಮನ ಮಾಡುವುದು ಕಷ್ಟವಾಯಿತು. ಕಿಮ್– ಸಿಯೊ ಜೋಡಿ 19 ನಿಮಿಷಗಳಲ್ಲಿ ಮೊದಲ ಗೇಮ್ ತನ್ನದಾಗಿಸಿಕೊಂಡಿತು. ವಿರಾಮದ ನಂತರ ಸಾತ್ವಿಕ್– ಚಿರಾಗ್ ಜೋಡಿ ಒಂದಿಷ್ಟು ಲಯಕಂಡುಕೊಂಡಂತೆ ಕಾಣಿಸಿತು. ಒಂದು ಹಂತದಲ್ಲಿ 11–8ರಲ್ಲಿ ಮುನ್ನಡೆಯನ್ನೂ ಸಾಧಿಸಿತ್ತು. ಆದರೆ ಅದೇ ಬಿರುಸನ್ನು ಉಳಿಸಿಕೊಳ್ಳಲಾಗಲಿಲ್ಲ. ಕೊರಿಯಾದ ಆಟಗಾರರು ಸಕಾಲದಲ್ಲಿ ಚೇತರಿಸಿಕೊಡು ಗೇಮ್ ಹಾಗೂ ಪಂದ್ಯ ಗೆದ್ದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.