ADVERTISEMENT

ಬ್ಯಾಸ್ಕೆಟ್‌ಬಾಲ್‌ | ಕಾಡಿದ ಕಷ್ಟಗಳ ಹಿಮ್ಮೆಟ್ಟಿಸಿದ ಮಂಗಳೂರಿನ ಶಶಾಂಕ್‌

ಸಾಬಾ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡ ಪ್ರತಿನಿಧಿಸಿದ ಮಂಗಳೂರಿನ ಮೊದಲ ಆಟಗಾರ

ಜಿ.ಶಿವಕುಮಾರ
Published 22 ನವೆಂಬರ್ 2021, 20:00 IST
Last Updated 22 ನವೆಂಬರ್ 2021, 20:00 IST
ಸಾಬಾ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದ ಚಿನ್ನದ ಪದಕದೊಂದಿಗೆ ಶಶಾಂಕ್‌ ರೈ ಸಂಭ್ರಮ 
ಸಾಬಾ ಚಾಂಪಿಯನ್‌ಷಿಪ್‌ನಲ್ಲಿ ಗೆದ್ದ ಚಿನ್ನದ ಪದಕದೊಂದಿಗೆ ಶಶಾಂಕ್‌ ರೈ ಸಂಭ್ರಮ    

ಬೆಂಗಳೂರು: ದೇಶದ ಕ್ರೀಡಾಪ್ರೇಮಿಗಳೆಲ್ಲಾ ಚುಟುಕು ಕ್ರಿಕೆಟ್‌ನ ಗುಂಗಿನಲ್ಲಿರುವ ಹೊತ್ತಿನಲ್ಲೇ ಅತ್ತ ಢಾಕಾದಲ್ಲಿ ಭಾರತ ಸೀನಿಯರ್‌ ಪುರುಷರ ಬ್ಯಾಸ್ಕೆಟ್‌ಬಾಲ್‌ ತಂಡ ಮೈಲಿಗಲ್ಲೊಂದನ್ನು ಸ್ಥಾಪಿಸಿತ್ತು.

ದಕ್ಷಿಣ ಏಷ್ಯಾ ಬ್ಯಾಸ್ಕೆಟ್‌ಬಾಲ್‌ ಅಸೋಸಿಯೇಷನ್‌ನ (ಸಾಬಾ) ಚಾಂಪಿಯನ್‌ಷಿಪ್‌ನಲ್ಲಿ ತಂಡ ಆರನೇ ಬಾರಿ ಪ್ರಶಸ್ತಿ ಗೆದ್ದಿತ್ತು. ಸದ್ದಿಲ್ಲದೇ ಮೂಡಿಬಂದ ಈ ಸಾಧನೆಯಲ್ಲಿ ‘ಕುಡ್ಲ’ದ ಆಟಗಾರನ ಕಾಣಿಕೆಯೂ ಇತ್ತು. ಶಶಾಂಕ್‌ ಜಯಶಂಕರ್‌ ರೈ ಆ ಆಟಗಾರ.

ಗಾಯದ ಸಮಸ್ಯೆ, ರಾಷ್ಟ್ರೀಯ ತಂಡದಿಂದ ಸ್ಥಾನ ಕೈತಪ್ಪಿದ ಬೇಸರ ಕಾಡುತ್ತಿದ್ದರೂ ಶಶಾಂಕ್‌ ವಿಚಲಿತರಾಗಲಿಲ್ಲ. ರಾಷ್ಟ್ರೀಯ ತಂಡದಲ್ಲಿ ಆಡಲೇಬೇಕೆಂಬ ಛಲದೊಂದಿಗೆ ನೋವು ಸಹಿಸಿಕೊಂಡೇ ಅಭ್ಯಾಸ ನಡೆಸಿದರು. ದೇಹತೂಕ ಇಳಿಸಿಕೊಂಡರು. ಇದೆಲ್ಲದರ ಫಲವಾಗಿ ಸಾಧನೆಯ ಹಾದಿಯಲ್ಲಿ ಮೊದಲ ಮೆಟ್ಟಿಲು ಏರಿದ್ದಾರೆ.‌

ADVERTISEMENT

ತಂಡದ ಸ್ಮರಣೀಯ ಸಾಧನೆ ಹಾಗೂ ಕ್ರೀಡಾ ಬದುಕಿನ ಪಯಣದ ಕುರಿತು ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

*ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಕನಸು ಕೈಗೂಡಿದೆ. ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಂಡು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದೀರಿ. ಈ ಬಗ್ಗೆ ಹೇಳಿ:

ಸಾಬಾ ಚಾಂಪಿಯನ್‌ಷಿಪ್‌ಗೂ ಮುನ್ನ ಬೆಂಗಳೂರಿನಲ್ಲಿ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿದ್ದ ಅನುಭವಿ ಆಟಗಾರರು ಹೊಸ ಕೌಶಲಗಳನ್ನು ಹೇಳಿಕೊಟ್ಟರು. ರಕ್ಷಣಾ ವಿಭಾಗ ಬಲಪಡಿಸಲೂ ಒತ್ತು ನೀಡಲಾಗಿತ್ತು. ಹೀಗಾಗಿ ಚಾಂಪಿಯನ್‌ಷಿಪ್‌ನಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ದೊಡ್ಡ ಅಂತರದ ಗೆಲುವು ದಾಖಲಿಸಲು ಸಾಧ್ಯವಾಯಿತು. ಈ ಸಾಧನೆ ಖುಷಿ ನೀಡಿದೆ. ಜವಾಬ್ದಾರಿ ಹೆಚ್ಚಿಸಿದೆ.

*ಹಾಕಿ, ಕ್ರಿಕೆಟ್‌ನತ್ತ ಒಲವು ಹೊಂದಿದ್ದವರು ಬ್ಯಾಸ್ಕೆಟ್‌ಬಾಲ್‌ನತ್ತ ಹೊರಳಿದ್ದು ಹೇಗೆ?

ಚಿಕ್ಕಂದಿನಿಂದಲೇ ಹಾಕಿ ಮತ್ತು ಕ್ರಿಕೆಟ್‌ನತ್ತ ಒಲವು ಇತ್ತು. ಪ್ರೌಢಶಾಲೆಗೆ ಸೇರಿದಾಗಲೇ ಆರು ಅಡಿ ಎತ್ತರವಿದ್ದೆ. ಹೀಗಾಗಿ ಸೇಂಟ್‌ ಅಲೋಷಿಯಸ್‌ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಬ್ಯಾಸ್ಕೆಟ್‌ಬಾಲ್‌ನಲ್ಲಿ ತೊಡಗಿಕೊಳ್ಳುವಂತೆ ಸಲಹೆ ನೀಡಿದರು. ಅಲ್ಲಿಂದ ಶುರುವಾದ ಪಯಣ ಹಲವು ಏಳು ಬೀಳುಗಳೊಂದಿಗೆ ಸಾಗುತ್ತಿದೆ.

*ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಕನ್ನಡಿಗರ ಸಂಖ್ಯೆ ಕಡಿಮೆಯಲ್ಲವೇ?

ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಉದ್ಯೋಗಾವಕಾಶಗಳು ಸಿಗುತ್ತಿಲ್ಲ. ಹೀಗಾಗಿ ಬಹುಪಾಲು ಮಂದಿ ಸ್ನಾತಕೋತ್ತರ ಪದವಿ ಹಂತವನ್ನೇರಿದ ಕೂಡಲೇ ಕ್ರೀಡೆಯಿಂದ ವಿಮುಖರಾಗಿಬಿಡುತ್ತಾರೆ. ಹೀಗಾಗಿ ರಾಜ್ಯದಲ್ಲಿ ಪ್ರತಿಭೆ ಕುಂಠಿತಗೊಳ್ಳುತ್ತಿದೆ. ಬಲಿಷ್ಠ ತಂಡ ಕಟ್ಟುವ ಆಶಯಕ್ಕೂ ಇದು ತೊಡಕಾಗಿದೆ.

*ಎಂ.ಬಿ.ಸಿ. ಜೊತೆಗಿನ ಪಯಣದ ಬಗ್ಗೆ?

ನನ್ನೆಲ್ಲಾ ಸಾಧನೆಯಲ್ಲಿ ಮಂಗಳೂರು ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ನ (ಎಂಬಿಸಿ) ಕೊಡುಗೆ ಅಪಾರ. ಚೆನ್ನೈನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವೇಳೆ ಬೇರೊಂದು ತಂಡದ ಪರ ಆಡಬೇಕಾದ ಅನಿವಾರ್ಯತೆ ಇತ್ತು. ಆ ಸಮಯದಲ್ಲೂ ಎಂಬಿಸಿ ಕೋಚ್‌ ಆದಿತ್ಯ ಮಹಾಲೆ ಅವರು ಅನೇಕ ಸಲಹೆಗಳನ್ನು ನೀಡುತ್ತಿದ್ದರು. ಕ್ಲಬ್‌ನ ಅಧ್ಯಕ್ಷರಾದ ನವೀನ್‌ ಶೆಟ್ಟಿ ಅವರ ಸಹಕಾರವನ್ನೂ ಮರೆಯುವಂತಿಲ್ಲ.ಭಾರತ ಬ್ಯಾಸ್ಕೆಟ್‌ಬಾಲ್‌ ಫೆಡರೇಷನ್‌ನ ಅಧ್ಯಕ್ಷರಾದ ಕೆ.ಗೋವಿಂದರಾಜ್‌, ತಂಡದ ಕೋಚ್‌ ವಸೆಲಿನ್‌ ಮ್ಯಾಟಿಚ್‌ ಅವರೂ ಎಲ್ಲಾ ಹಂತಗಳಲ್ಲೂ ಬೆಂಬಲವಾಗಿ ನಿಂತಿದ್ದಾರೆ. ಅಪ್ಪ, ಅಮ್ಮನ ತ್ಯಾಗವೂ ಅಪಾರ.

ಮಂಗಳೂರಿನ ಮೊದಲ ಆಟಗಾರ

ಜಯಶಂಕರ್‌ ರೈ ಹಾಗೂ ಬಬಿತಾ ರೈ ಅವರ ಮಗನಾಗಿರುವ 28 ವರ್ಷದ ಶಶಾಂಕ್‌,ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಪುರುಷರ ತಂಡವನ್ನು ಪ್ರತಿನಿಧಿಸಿದ ಮಂಗಳೂರಿನ ಮೊದಲ ಆಟಗಾರ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ.

ಮಂಗಳೂರಿನ ಸೇಂಟ್‌ ಅಲೋಷಿಯಸ್‌ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣ ಪೂರೈಸಿದ್ದ ಅವರು ಚೆನ್ನೈನ ಜೆಪಿಆರ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಹಾಗೂ ಎಸ್‌ಆರ್‌ಎಂ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಪೂರ್ಣಗೊಳಿಸಿದ್ದಾರೆ.

ಫಿಬಾ ವಿಶ್ವ 3X3 ಬ್ಯಾಸ್ಕೆಟ್‌ಬಾಲ್‌ ಲೀಗ್‌, ರಾಜ್ಯ ಸೀನಿಯರ್‌, ಜೂನಿಯರ್‌ ತಂಡಗಳಲ್ಲಿ ಆಡಿರುವ ಅವರು ಹಲವು ವರ್ಷಗಳಿಂದ ‘ಎ’ ಡಿವಿಷನ್‌ ಲೀಗ್‌ನಲ್ಲಿ ಮಂಗಳೂರು ಬ್ಯಾಸ್ಕೆಟ್‌ಬಾಲ್‌ ತಂಡವನ್ನು‍ಪ್ರತಿನಿಧಿಸುತ್ತಿದ್ದಾರೆ.

ಭಾರತದ ಮುಡಿಗೆ 6ನೇ ಕಿರೀಟ

ಢಾಕಾದಲ್ಲಿ ಹೋದ ವಾರ ನಡೆದಿದ್ದ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ ವಿಶೇಷ್‌ ಭೃಗುವಂಶಿ ಬಳಗವು 88–31 ಪಾಯಿಂಟ್ಸ್‌ನಿಂದ ಮಾಲ್ಡೀವ್ಸ್‌ ತಂಡವನ್ನು ಮಣಿಸಿತ್ತು. ನಂತರ 114–48ರಿಂದ ಹಿಂದಿನ ಚಾಂಪಿಯನ್‌ ಶ್ರೀಲಂಕಾ ವಿರುದ್ಧ ಗೆದ್ದಿತ್ತು. ಅಂತಿಮ ಪಂದ್ಯದಲ್ಲಿ ತಂಡ ಆತಿಥೇಯ ಬಾಂಗ್ಲಾದೇಶವನ್ನು 106–41ರಿಂದ ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. ತಂಡ2002, 2014, 2015, 2016 ಮತ್ತು 2017ರಲ್ಲೂ ಚಾಂಪಿಯನ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.