ADVERTISEMENT

ಆಗಸ್ಟ್‌ನಲ್ಲಿ ಶೂಟಿಂಗ್‌ ಶಿಬಿರ ಆರಂಭ?

ಪಿಟಿಐ
Published 30 ಜೂನ್ 2020, 13:02 IST
Last Updated 30 ಜೂನ್ 2020, 13:02 IST
ಭಾರತದ ಶೂಟರ್‌ಗಳು –ಸಂಗ್ರಹ ಚಿತ್ರ 
ಭಾರತದ ಶೂಟರ್‌ಗಳು –ಸಂಗ್ರಹ ಚಿತ್ರ    

ನವದೆಹಲಿ: ಈ ವರ್ಷದ ಆಗಸ್ಟ್‌ ತಿಂಗಳ ಮಧ್ಯಂತರದಲ್ಲಿ ಶೂಟಿಂಗ್‌ ಶಿಬಿರಗಳನ್ನು ಪುನರಾರಂಭಿಸಲು ಭಾರತ ರಾಷ್ಟ್ರೀಯ ರೈಫಲ್‌ ಸಂಸ್ಥೆಯು (ಎನ್‌ಆರ್‌ಎಐ) ಚಿಂತಿಸಿದೆ.

ಜುಲೈ 15ರಂದು ನಡೆಯುವ ಸಭೆಯಲ್ಲಿ ಈ ಸಂಬಂಧ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.

ಮುಂದಿನ ವರ್ಷ ನಿಗದಿಯಾಗಿರುವಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಹಾಗೂ ಅರ್ಹತೆಯ ಮೇಲೆ ಕಣ್ಣಿಟ್ಟಿರುವ 34 ಶೂಟರ್‌ಗಳ ಪಟ್ಟಿಯನ್ನು ಎನ್‌ಆರ್‌ಎಐ ಇತ್ತೀಚೆಗೆ ಬಿಡುಗಡೆ ಮಾಡಿತ್ತು.

ADVERTISEMENT

‘ಜುಲೈ 15ರಂದು ನಿಗದಿಯಾಗಿರುವ ಸಭೆಯಲ್ಲಿ ಶಿಬಿರ ಪುನರಾರಂಭಿಸಲು ಇರುವ ಮಾರ್ಗಗಳ ಬಗ್ಗೆ ಚರ್ಚಿಸಲಾಗುತ್ತದೆ’ ಎಂದು ಎನ್‌ಆರ್‌ಎಐನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಜುಲೈ ಮಧ್ಯಂತರದಿಂದಲೇ ಶಿಬಿರಗಳನ್ನು ಆರಂಭಿಸಲು ಚಿಂತಿಸಲಾಗಿತ್ತು. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಆ ಯೋಜನೆಯನ್ನು ಕೈಬಿಡಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯ (ಆಗಸ್ಟ್‌ 15) ಬಳಿಕ ಶಿಬಿರಗಳನ್ನು ನಡೆಸುವ ಆಲೋಚನೆ ಇದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಹಾಗೂಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್‌) ತೀರ್ಮಾನವೇ ಅಂತಿಮವಾಗಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಒಲಿಂಪಿಕ್ಸ್‌ಗೆ ಈಗಾಗಲೇ ಅರ್ಹತೆ ಗಳಿಸಿರುವ ಹಾಗೂ ಅರ್ಹತೆಯ ಮೇಲೆ ಕಣ್ಣಿಟ್ಟಿರುವ ಶೂಟರ್‌ಗಳನ್ನು ಗಮನದಲ್ಲಿಟ್ಟುಕೊಂಡು ಶಿಬಿರ ಆಯೋಜಿಸಲು ನಿರ್ಧರಿಸಲಾಗಿದೆ. ಶೂಟರ್‌ಗಳು, ಕೋಚ್‌ಗಳು ಹಾಗೂ ಇತರ ಅಧಿಕಾರಿಗಳ ಸುರಕ್ಷತೆಯೂ ನಮ್ಮ ಆದ್ಯತೆಯಾಗಿದೆ’ ಎಂದಿದ್ದಾರೆ.

‘ನವದೆಹಲಿಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿವೆ. ಹೀಗಾಗಿ ಡಾ.ಕರ್ಣಿ ಸಿಂಗ್‌ ಶೂಟಿಂಗ್‌ ರೇಂಜ್‌ನಲ್ಲಿ ಶಿಬಿರ ನಡೆಸುವುದು ತುಂಬಾ ಕಷ್ಟ’ ಎಂದು ಅನುಭವಿ ಶೂಟರ್‌ ಅಭಿಷೇಕ್‌ ವರ್ಮಾ ಸೋಮವಾರ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.