ADVERTISEMENT

ವಿಶ್ವಕಪ್ ಶೂಟಿಂಗ್‌: ಭಾರತದ ಮಡಿಲಿಗೆ 15 ಪದಕ

ಕೊನೆಯ ದಿನ ಬೆಳ್ಳಿ ಜಯಿಸಿದ ಪುರುಷರ ತಂಡ: ಟೂರ್ನಿಯಲ್ಲಿ ಅಗ್ರಸ್ಥಾನ

ಪಿಟಿಐ
Published 20 ಜುಲೈ 2022, 12:10 IST
Last Updated 20 ಜುಲೈ 2022, 12:10 IST
ಬೆಳ್ಳಿ ಪದಕ ಜಯಿಸಿದ ಸಮೀರ್‌, ಅನೀಶ್ ಭಾನ್ವಾಲ ಮತ್ತು ವಿಜಯವೀರ್ ಸಿಧು ಸಂಭ್ರಮ– ಪಿಟಿಐ ಚಿತ್ರ
ಬೆಳ್ಳಿ ಪದಕ ಜಯಿಸಿದ ಸಮೀರ್‌, ಅನೀಶ್ ಭಾನ್ವಾಲ ಮತ್ತು ವಿಜಯವೀರ್ ಸಿಧು ಸಂಭ್ರಮ– ಪಿಟಿಐ ಚಿತ್ರ   

ಚಾಂಗ್ವಾನ್‌, ದಕ್ಷಿಣ ಕೊರಿಯಾ: ನಿಖರ ಗುರಿಯಿಂದ ಗಮನಸೆಳೆದ ಭಾರತದ ಶೂಟರ್‌ಗಳು ಈ ಬಾರಿ ಐಎಸ್‌ಎಸ್‌ಎಫ್‌ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 15 ಪದಕಗಳನ್ನು ಬಾಚಿಕೊಂಡರು. ಇದರೊಂದಿಗೆ ಪದಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದರು.

ಇಲ್ಲಿ ನಡೆದ ಟೂರ್ನಿಯ ಕೊನೆಯ ದಿನವಾದ ಬುಧವಾರ ಅನೀಶ್ ಭಾನ್ವಾಲ, ವಿಜಯವೀರ್ ಸಿಧು ಮತ್ತು ಸಮೀರ್ ಅವರಿದ್ದ ತಂಡ ಪುರುಷರ 25 ಮೀಟರ್ಸ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿತು. ಇದರೊಂದಿಗೆ ಭಾರತ ಒಟ್ಟು ಐದು ಚಿನ್ನ, ಆರು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿತು.

ಫೈನಲ್‌ನಲ್ಲಿ ಜೆಕ್‌ ಗಣರಾಜ್ಯದ ಮಾರ್ಟಿನ್ ಪೊದರಸ್ಕಿ, ಥಾಮಸ್‌ ಟೆಹಾನ್‌ ಮತ್ತು ಮಟೆಜ್‌ ರಂಪುಲಾ ಎದುರು ಸ್ಪರ್ಧಿಸಿದ್ದ ಶೂಟರ್‌ಗಳು ಒಂದು ಹಂತದಲ್ಲಿ 10–2ರಿಂದ ಮುನ್ನಡೆ ಸಾಧಿಸಿ ಚಿನ್ನದ ಪದಕದತ್ತ ದಾಪುಗಾಲಿಟ್ಟಿದ್ದರು. ಆದರೆ ಬಳಿಕ ಲಯ ಕಳೆದುಕೊಂಡು 15–17ರಿಂದ ಸೋಲು ಅನುಭವಿಸಿದರು.

ಸ್ಕೀಟ್‌ ಮಿಶ್ರ ತಂಡ ವಿಭಾಗದಲ್ಲಿ ಭಾರತದ ಮೈರಾಜ್ ಅಹ್ಮದ್‌ ಖಾನ್‌, ಮುಫದ್ದಾಲ್‌ ದೀಸ್ವಾಲಾ ಒಂಬತ್ತನೇ ಸ್ಥಾನ ಗಳಿಸಿದರು. 17 ತಂಡಗಳಿದ್ದ ಸ್ಪರ್ಧೆಯಲ್ಲಿ ಭಾರತದ ಶೂಟರ್‌ಗಳು 150ರ ಪೈಕಿ 138 ಪಾಯಿಂಟ್ಸ್ ಕಲೆಹಾಕಿದರು.

ಭಾರತ ತಂಡವು 2019ರಲ್ಲಿ ನಡೆದ ವಿಶ್ವಕಪ್‌ ಎಲ್ಲ ಹಂತದ ಟೂರ್ನಿಗಳಲ್ಲೂ ಅಗ್ರಸ್ಥಾನ ಗಳಿಸಿತ್ತು. 2021ರಲ್ಲಿ ಒಂದು ಬಾರಿ ಮತ್ತು ಈ ವರ್ಷ ಮಾರ್ಚ್‌ನಲ್ಲಿ ಕೈರೊದಲ್ಲಿ ನಡೆದ ವಿಶ್ವಕಪ್ ಸ್ಟೇಜ್ ಒನ್‌ ಟೂರ್ನಿಯಲ್ಲೂ ತಂಡಕ್ಕೆ ಅಗ್ರಸ್ಥಾನ ಒಲಿದಿತ್ತು.

ಈ ವರ್ಷ ಅಕ್ಟೋಬರ್‌ನಲ್ಲಿ ಕೈರೊದಲ್ಲಿ ವಿಶ್ವ ಚಾಂಪಿಯನ್‌ಷಿಪ್ ನಿಗದಿಯಾಗಿದ್ದು, ಭಾರತದ ಶೂಟರ್‌ಗಳು ಸಜ್ಜುಗೊಳ್ಳಬೇಕಿದೆ. ಇಲ್ಲಿ ಉತ್ತಮ ಸಾಮರ್ಥ್ಯ ತೋರಿದರೆ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಟಿಕೆಟ್‌ ಗಿಟ್ಟಿಸುವ ಅವಕಾಶ ಸಿಗಲಿದೆ.

ಶಾಟ್‌ಗನ್ ತಂಡವು ಕ್ರೊವೇಷ್ಯಾದ ಒಸಿಜೆಕ್‌ನಲ್ಲಿ ಸೆಪ್ಟೆಂಬರ್‌ನಲ್ಲಿ ನಿಗದಿಯಾಗಿರುವ ಶಾಟ್‌ಗನ್‌ ವಿಶ್ವಕಪ್‌ನಲ್ಲಿ ಸ್ಪರ್ಧಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.