ADVERTISEMENT

ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಷಿಪ್‌: ಸಿಂಧು, ರಾಜಾವತ್‌ ನಿರ್ಗಮನ

ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಷಿಪ್‌: ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯ

ಪಿಟಿಐ
Published 10 ಏಪ್ರಿಲ್ 2025, 13:13 IST
Last Updated 10 ಏಪ್ರಿಲ್ 2025, 13:13 IST
ಬ್ಯಾಡ್ಮಿಂಟನ್
ಬ್ಯಾಡ್ಮಿಂಟನ್   

ನಿಂಗ್ಬೊ (ಚೀನಾ): ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದಿರುವ ಪಿ.ವಿ. ಸಿಂಧು ಮತ್ತು ಉದಯೋನ್ಮುಖ ಆಟಗಾರ ಪ್ರಿಯಾಂಶು ರಾಜಾವತ್‌ ಅವರು ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಗುರುವಾರ ಸೋಲನುಭವಿಸಿದರು.

ವಿಶ್ವ ಕ್ರಮಾಂಕದಲ್ಲಿ 17ನೇ ಸ್ಥಾನ ಹೊಂದಿರುವ ಸಿಂಧು ಉತ್ತಮ ಹೋರಾಟ ಕಂಡ ಮಹಿಳೆಯರ ವಿಭಾಗದ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಜಪಾನ್‌ ಆಟಗಾರ್ತಿ ಅಕಾನೆ ಯಮಾಗುಚಿ ಅವರಿಗೆ 12–21, 21–16, 16–21 ರಲ್ಲಿ ಮಣಿದರು. ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಅಕಾನೆ 66 ನಿಮಿಷಗಳಲ್ಲಿ ಪಂದ್ಯ ಗೆದ್ದು ಎಂಟರ ಘಟ್ಟಕ್ಕೆ ಮುನ್ನಡೆದರು.

ರಾಜಾವತ್ ಅವರು ಪುರುಷರ ಸಿಂಗಲ್ಸ್‌ನಲ್ಲಿ 14–21, 17–21 ರಲ್ಲಿ ಏಳನೇ ಕ್ರಮಾಂಕದ ಕೊಡೈ ನರವೋಕಾ (ಜಪಾನ್‌) ಅವರಿಗೆ ಸೋತರು.

ADVERTISEMENT

ವಿಶ್ವದ ಐದನೇ ಕ್ರಮಾಂಕದ ಆಟಗಾರ ಕುನ್ಲಾವುತ್‌ ವಿಟಿಡ್‌ಸರ್ನ್‌ (ಥಾಯ್ಲೆಂಡ್‌) ಅವರು ಇನ್ನೊಂದು ಪಂದ್ಯದಲ್ಲಿ ಭಾರತದ ಕಿರಣ್ ಜಾರ್ಜ್ ಅವರನ್ನು 19–21, 21–13, 21–16 ರಿಂದ ಸೋಲಿಸಿದರು.

ಇದರೊಂದಿಗೆ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.

ಧ್ರುವ್‌– ತನಿಶಾ ಮುನ್ನಡೆ:

ಮಿಶ್ರ ಡಬಲ್ಸ್‌ನಲ್ಲಿ ಭಾರತದ ಧ್ರುವ್‌ ಕಪಿಲ– ತನಿಶಾ ಕ್ರಾಸ್ಟೊ ಜೋಡಿ ಎಂಟರ ಘಟ್ಟ ಪ್ರವೇಶಿಸಿತು. ಈ ಜೋಡಿ 12–21, 21–16, 21–18 ರಿಂದ ಚೀನಾ ತೈಪಿಯ ಯೆ ಹಾಂಗ್ ವೀ– ನಿಕೋಲ್ ಗೊನ್ವಾಲ್ವೆಸ್ ಅವರನ್ನು ಸೋಲಿಸಿತು.

ಕಪಿಲಾ ಮತ್ತು ಕ್ರಾಸ್ಟೊ ಕ್ವಾರ್ಟರ್‌ಫೈನಲ್‌ನಲ್ಲಿ ಹಾಂಗ್‌ಕಾಂಗ್‌ನ ಚುನ್‌ ಮನ್ ಟಾಂಗ್‌– ಯಿಂಗ್‌ ಸುಯೆತ್‌ ತ್ಸೆ ಜೋಡಿಯನ್ನು ಎದುರಿಸಲಿದೆ. ಚುನ್‌ ಮನ್‌– ಯಿಂಗ್ ಜೋಡಿ ಐದನೇ ಶ್ರೇಯಾಂಕ ಪಡೆದಿದೆ.

ಆದರೆ ಇದೇ ವಿಭಾಗದಲ್ಲಿ ಭಾರತದ ಅಶಿತ್ ಸೂರ್ಯ– ಅಮೃತಾ ಪ್ರಮುತೇಶ್‌ ಜೋಡಿ ನಿರ್ಗಮಿಸಿತು. ಇವರಿಬ್ಬರು 11–21, 14–21 ರಲ್ಲಿ ಅಗ್ರ ಶ್ರೇಯಾಂಕದ ಜಿಯಾಂಗ್‌ ಝೆನ್‌ ಬಾಂಗ್– ವೀ ಯಾ ಷಿನ್‌ (ಚೀನಾ) ಅವರಿಗೆ ಮಣಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.