ADVERTISEMENT

ಸಿಂಗಪುರ ಓಪನ್‌ ಬ್ಯಾಡ್ಮಿಂಟನ್‌: ಸೆಮಿಗೆ ಲಗ್ಗೆ ಇಟ್ಟ ಸಿಂಧು

ಸೈನಾ, ಶ್ರೀಕಾಂತ್ ಹೋರಾಟ ಅಂತ್ಯ

ಪಿಟಿಐ
Published 12 ಏಪ್ರಿಲ್ 2019, 20:15 IST
Last Updated 12 ಏಪ್ರಿಲ್ 2019, 20:15 IST
ಯನ್ಯಾನ್‌ ಎದುರಿನ ಹೋರಾಟದಲ್ಲಿ ಭಾರತದ ಸಿಂಧು ಷಟಲ್‌ ಹಿಂತಿರುಗಿಸಲು ಪ್ರಯತ್ನಿಸಿದರು –ಎಎಫ್‌ಪಿ ಚಿತ್ರ
ಯನ್ಯಾನ್‌ ಎದುರಿನ ಹೋರಾಟದಲ್ಲಿ ಭಾರತದ ಸಿಂಧು ಷಟಲ್‌ ಹಿಂತಿರುಗಿಸಲು ಪ್ರಯತ್ನಿಸಿದರು –ಎಎಫ್‌ಪಿ ಚಿತ್ರ   

ಸಿಂಗಪುರ: ಸಿಂಗಪುರ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಪಿ.ವಿ.ಸಿಂಧು ಅವರ ಗೆಲುವಿನ ಓಟ ಮುಂದುವರಿದಿದೆ. ಆದರೆ ಸೈನಾ ನೆಹ್ವಾಲ್‌, ಕಿದಂಬಿ ಶ್ರೀಕಾಂತ್‌ ಮತ್ತು ಸಮೀರ್‌ ವರ್ಮಾ ಅವರು ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ.

ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಸಿಂಧು 21–13, 17–21, 21–14ರಲ್ಲಿ ಚೀನಾದ ಕಿಯಾ ಯನ್ಯಾನ್‌ ಅವರನ್ನು ಮಣಿಸಿದರು.

ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕ ಗೆದ್ದ ಸಾಧನೆ ಮಾಡಿರುವ ಸಿಂಧು ಮೊದಲ ಗೇಮ್‌ನಲ್ಲಿ ನಿರಾಯಾಸವಾಗಿ ಎದುರಾಳಿಯ ಸವಾಲು ಮೀರಿದರು.

ADVERTISEMENT

ಇದರಿಂದ ಚೀನಾದ ಆಟಗಾರ್ತಿ ಎದೆಗುಂದಲಿಲ್ಲ. ವಿಶ್ವ ರ‍್ಯಾಂಕಿಂಗ್‌ನಲ್ಲಿ 18ನೇ ಸ್ಥಾನದಲ್ಲಿರುವ ಯನ್ಯಾನ್‌ ಎರಡನೇ ಗೇಮ್‌ನಲ್ಲಿ ಭಾರತದ ಆಟಗಾರ್ತಿಗೆ ತಿರುಗೇಟು ನೀಡಿದರು. ಹೀಗಾಗಿ 1–1 ಸಮಬಲ ಕಂಡುಬಂತು.

ನಿರ್ಣಾಯಕ ಎನಿಸಿದ್ದ ಮೂರನೇ ಗೇಮ್‌ನ ಶುರುವಿನಲ್ಲಿ ಉಭಯ ಆಟಗಾರ್ತಿಯರು ಜಿದ್ದಾಜಿದ್ದಿನಿಂದ ಹೋರಾಡಿದರು. ಹೀಗಾಗಿ ಆಟದ ರೋಚಕತೆ ಹೆಚ್ಚಿತ್ತು. ದ್ವಿತೀಯಾರ್ಧದಲ್ಲಿ ಸಿಂಧು ಪ್ರಾಬಲ್ಯ ಮೆರೆದರು. ಚುರುಕಿನ ಸರ್ವ್‌ ಮತ್ತು ಆಕರ್ಷಕ ಡ್ರಾಪ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಅವರು ಗೆಲುವಿನ ತೋರಣ ಕಟ್ಟಿದರು.

ಮುಂದಿನ ಸುತ್ತಿನಲ್ಲಿ ಸಿಂಧು, ನೊಜೊಮಿ ಒಕುಹರಾ ಎದುರು ಸೆಣಸಲಿದ್ದಾರೆ.

ಎಂಟರ ಘಟ್ಟದ ಇನ್ನೊಂದು ಹೋರಾಟದಲ್ಲಿ ಜಪಾನ್‌ನ ಒಕುಹರಾ 21–8, 21–13 ನೇರ ಗೇಮ್‌ಗಳಿಂದ ಭಾರತದ ಸೈನಾ ನೆಹ್ವಾಲ್‌ ಅವರನ್ನು ಪರಾಭವಗೊಳಿಸಿದರು.

ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಶ್ರೀಕಾಂತ್‌ 18–21, 21–19, 9–21ರಲ್ಲಿ ಜಪಾನ್‌ನ ಕೆಂಟೊ ಮೊಮೊಟಾ ಎದುರು ಮಣಿದರು.ಈ ಹೋರಾಟ 66 ನಿಮಿಷ ನಡೆಯಿತು.

ಶ್ರೀಕಾಂತ್‌ ಅವರು ಮೊಮೊಟಾ ಎದುರು ಸೋತ ಸತತ ಒಂಬತ್ತನೇ ಪಂದ್ಯ ಇದಾಗಿದೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 16ನೇ ಸ್ಥಾನ ಹೊಂದಿರುವ ಸಮೀರ್‌ ವರ್ಮಾ 10–21, 21–15, 15–21ರಲ್ಲಿ ಚೀನಾ ತೈಪೆಯ ಎರಡನೇ ಶ್ರೇಯಾಂಕದ ಆಟಗಾರ ಚೊವು ತಿಯೆನ್‌ ಚೆನ್‌ ಎದುರು ಶರಣಾದರು.

ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಪ್ರಣವ್‌ ಜೆರಿ ಚೋಪ್ರಾ ಮತ್ತು ಎನ್‌.ಸಿಕ್ಕಿ ರೆಡ್ಡಿ ಅವರೂ ನಿರಾಸೆ ಕಂಡರು.

ಪ್ರಣವ್‌ ಮತ್ತು ಸಿಕ್ಕಿ 14–21, 16–21ರಲ್ಲಿ ಥಾಯ್ಲೆಂಡ್‌ನ ದೆಚಾಪೊಲ್‌ ಪುವವಾರ್ನುಕ್ರೊಹ್‌ ಮತ್ತು ಸಪ್ಸಿರೀ ತಯೆರಾತನ್‌ಚಾಯ್‌ ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.