ADVERTISEMENT

ಜ.19ರಿಂದ ರಾಷ್ಟ್ರೀಯ ಮಹಿಳಾ ಹಾಕಿ ತರಬೇತಿ ಶಿಬಿರ: ತಂಡವನ್ನು ಸೇರಿಕೊಂಡ ಮರಾಯ್ನೆ

ಪಿಟಿಐ
Published 14 ಜನವರಿ 2026, 15:30 IST
Last Updated 14 ಜನವರಿ 2026, 15:30 IST
<div class="paragraphs"><p>ಭಾರತ ಮಹಿಳಾ ಹಾಕಿ ತಂಡಕ್ಕೆ ಮುಖ್ಯ ಕೋಚ್‌ ಆಗಿ ಮರು ನೇಮಕಗೊಂಡ ನೆದರ್ಲೆಂಡ್ಸ್‌ನ&nbsp;ಶ್ಯೂರ್ಡ್‌ ಮರಾಯ್ನೆ ಅವರನ್ನು ಬುಧವಾರ ನವದೆಹಲಿಯಲ್ಲಿ&nbsp;ಕ್ರೀಡಾ ಅಧಿಕಾರಿಗಳು ಸ್ವಾಗತಿಸಿದರು</p></div>

ಭಾರತ ಮಹಿಳಾ ಹಾಕಿ ತಂಡಕ್ಕೆ ಮುಖ್ಯ ಕೋಚ್‌ ಆಗಿ ಮರು ನೇಮಕಗೊಂಡ ನೆದರ್ಲೆಂಡ್ಸ್‌ನ ಶ್ಯೂರ್ಡ್‌ ಮರಾಯ್ನೆ ಅವರನ್ನು ಬುಧವಾರ ನವದೆಹಲಿಯಲ್ಲಿ ಕ್ರೀಡಾ ಅಧಿಕಾರಿಗಳು ಸ್ವಾಗತಿಸಿದರು

   

ನವದೆಹಲಿ: ಭಾರತ ಮಹಿಳಾ ಹಾಕಿ ತಂಡದ ಮುಖ್ಯ ಕೋಚ್‌ ಆಗಿ ಮರು ನೇಮಕಗೊಂಡಿರುವ ನೆದರ್ಲೆಂಡ್ಸ್‌ನ ಶ್ಯೂರ್ಡ್‌ ಮರಾಯ್ನೆ ಅವರು ಬುಧವಾರ ಔಪಚಾರಿಕವಾಗಿ ತಂಡವನ್ನು ಸೇರಿಕೊಂಡರು.

51 ವರ್ಷದ ಮರಾಯ್ನೆ ಅವರು 2017ರಿಂದ 2021ರವರೆಗೆ ಭಾರತ ಮಹಿಳಾ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು. ಅವರ ಗರಡಿಯಲ್ಲಿ ಪಳಗಿದ್ದ ತಂಡವು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಾರಿತ್ರಿಕ ನಾಲ್ಕನೇ ಸ್ಥಾನ ಗಳಿಸಿತ್ತು. ಹಾಕಿ ಇಂಡಿಯಾ ಎರಡು ವಾರಗಳ ಹಿಂದೆ ಅವರನ್ನು ಕೋಚ್‌ ಹುದ್ದೆಗೆ ಮರು ನೇಮಕ ಮಾಡಿತ್ತು. 

ADVERTISEMENT

ಉನ್ನತ ಕ್ರೀಡಾ ಅಧಿಕಾರಿ ಮತ್ತು ಫೆಡರೇಷನ್‌ನ ಆಡಳಿತಾಧಿಕಾರಿಗಳು ಮರಾಯ್ನೆ ಅವರನ್ನು ಸ್ವಾಗತಿಸುತ್ತಿರುವ ಫೋಟೋವನ್ನು ಹಾಕಿ ಇಂಡಿಯಾ ಪೋಸ್ಟ್ ಮಾಡಿದೆ. ಮರಾಯ್ನೆ ಅವರ ತಂಡದಲ್ಲಿ ವಿಶ್ಲೇಷಣಾತ್ಮಕ ಕೋಚ್‌ ಮಟಿಯಾಸ್ ವಿಲಾ ಕೂಡ ಇದ್ದಾರೆ. 

ಕಳಪೆ ಫಲಿತಾಂಶದ ಕಾರಣಕ್ಕೆ ಕಳೆದ ಡಿಸೆಂಬರ್‌ನಲ್ಲಿ ರಾಜೀನಾಮೆ ನೀಡಿದ ಕೋಚ್‌ ಹರೇಂದ್ರ ಸಿಂಗ್ ಅವರ ಉತ್ತರಾಧಿಕಾರಿಯಾಗಿ ಮರಾಯ್ನೆ ಕಾರ್ಯ ನಿರ್ವಹಿಸುವರು. ಮಾರ್ಚ್ 8ರಿಂದ 14ರವರೆಗೆ ಹೈದರಾಬಾದ್‌ನಲ್ಲಿ ನಡೆಯಲಿರುವ ಮಹಿಳಾ ವಿಶ್ವಕಪ್ ಅರ್ಹತಾ ಪಂದ್ಯಗಳು ನಡೆಯಲಿದ್ದು, ಇದು ಮರಾಯ್ನೆ ಅವರ ಮುಂದಿರುವ ದೊಡ್ಡ ಸವಾಲಾಗಿದೆ. 

ಮರಾಯ್ನೆ ಅವರ ಮಾರ್ಗದರ್ಶನದಲ್ಲಿ ಭಾರತ ಮಹಿಳಾ ತಂಡವು 2017ರಲ್ಲಿ ವಿಶ್ವ ಲೀಗ್ ಸೆಮಿಫೈನಲ್‌ ಪ್ರವೇಶ ಪಡೆದಿತ್ತು. 2018ರ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿತ್ತು. 

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಡೆದ ಕಂಚಿನ ಪದಕದ ಪ್ಲೇಆಫ್ ಪಂದ್ಯದಲ್ಲಿ ಭಾರತ ತಂಡವು ಬ್ರಿಟನ್ ವಿರುದ್ಧ ಸೋತ ನಂತರ ಮರಾಯ್ನೆ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ್ದರು.

ನೂತನ ಕೋಚ್‌ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ತರಬೇತಿ ಶಿಬಿರವು ಇದೇ 19ರಂದು ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ಪ್ರಾರಂಭವಾಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.