ADVERTISEMENT

ದಕ್ಷಿಣ ಏಷ್ಯ ಕ್ರೀಡೆ: ಪದಕಗಳ ಅರ್ಧ ಶತಕ ಬಾರಿಸಿದ ಭಾರತ

ವುಶು, ಈಜು ಸ್ಪರ್ಧೆಗಳಲ್ಲಿ ಸಿಂಹಪಾಲು ಚಿನ್ನ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 20:00 IST
Last Updated 5 ಡಿಸೆಂಬರ್ 2019, 20:00 IST
ಎಸ್‌.ಪಿ.ಲಿಖಿತ್‌
ಎಸ್‌.ಪಿ.ಲಿಖಿತ್‌   

ಕಠ್ಮಂಡು: ಈಜು, ವುಶು, ವೇಟ್‌ಲಿಫ್ಟಿಂಗ್‌ ಸ್ಪರ್ಧೆಗಳಲ್ಲಿ ಸಿಂಹಪಾಲು ಪದಕಗಳನ್ನು ಬಾಚಿಕೊಳ್ಳುವುದರೊಂದಿಗೆ ಭಾರತ, ದಕ್ಷಿಣ ಏಷ್ಯ ಕ್ರೀಡೆಗಳ ನಾಲ್ಕನೇ ದಿನವೂ ಪಾರಮ್ಯ ಮುಂದುವರಿದಿದೆ. ಗುರುವಾರ ಒಂದೇ ದಿನ ಭಾರತದ ಕ್ರೀಡಾಪಟುಗಳು 50ಕ್ಕಿಂತ ಹೆಚ್ಚು ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಭಾರತ ಈ ಕ್ರೀಡೆಗಳಲ್ಲಿ ಗೆದ್ದಿರುವ ಪದಕಗಳ ಸಂಖ್ಯೆ ನೂರರ ಗಡಿ ದಾಟಿತು. ಇದುವರೆಗೆ, ಭಾರತ 58 ಚಿನ್ನ, 41 ರಜತ ಮತ್ತು 19 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದು, ಆತಿಥೇಯ ನೇಪಾಳವನ್ನುಪದಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತಳ್ಳಿದೆ. ನೇಪಾಳದ ಕ್ರೀಡಾಪಟುಗಳು 36 ಬಂಗಾರ, 26 ಬೆಳ್ಳಿ ಮತ್ತು 34 ಕಂಚಿನ ಪದಕ (ಒಟ್ಟು 96) ಜಯಿಸಿದ್ದಾರೆ. ಶ್ರೀಲಂಕಾ (16 ಚಿನ್ನ ಸೇರಿ ಒಟ್ಟು 99 ಪದಕ) ಮೂರನೇ ಸ್ಥಾನದಲ್ಲಿದೆ.

ಭಾರತದ ಕ್ರೀಡಾಪಟುಗಳು ಗುರುವಾರ ಒಂದೇ ದಿನ 26 ಚಿನ್ನ, 18 ಬೆಳ್ಳಿ ಮತ್ತು ಆರು ಕಂಚಿನ ಪದಕಗಳನ್ನು ಕೊರಳಿಗೆ ಹಾಕಿಕೊಂಡಿದ್ದಾರೆ.

ADVERTISEMENT

ವುಶು ಕ್ರೀಡೆಯಲ್ಲಿ ಪಣಕ್ಕಿದ್ದ ಏಳೂ ಚಿನ್ನಗಳನ್ನು ಭಾರತದ ಸ್ಪರ್ಧಿಗಳೇ ಜಯಿಸಿದ್ದಾರೆ. ಸೂರಜ್‌ ಸಿಂಗ್ (ಪುರುಷರ ಗುನ್‌ಶು ಆಲ್‌ರೌಂಡ್‌ ವಿಭಾಗ), ವೈ.ಸಂತೋಯಿ ದೇವಿ (ಸನ್‌ಸೌ 52 ಕೆ.ಜಿ), ಪೂನಂ (75 ಕೆ.ಜಿ ವಿಭಾಗ), ಸುಶೀಲಾ (65 ಕೆ.ಜಿ), ರೋಶಿಬಿನಾ ದೇವಿ (60 ಕೆ.ಜಿ) ಮತ್ತು ಸುನೀಲ್‌ ಸಿಂಗ್ (ಪುರುಷರ 52 ಕೆ.ಜಿ ವಿಭಾಗ) ತಮ್ಮ ವಿಭಾಗಗಳಲ್ಲಿ ಅಗ್ರಸ್ಥಾನ ಗಳಿಸಿದರು.

ಈಜು–ಲಿಖಿತ್‌ಗೆ ಚಿನ್ನ:ಭಾರತದ ಸ್ಪರ್ಧಿಗಳುಈಜುಕೊಳದಿಂದ ನಾಲ್ಕು ಚಿನ್ನ, ಆರು ಬೆಳ್ಳಿ, ಒಂದು ಕಂಚಿನ ಪದಕ ಎತ್ತಿದರು.

ಕರ್ನಾಟಕದ ಲಿಖಿತ್‌ ಎಸ್‌.ಪಿ. ಪುರುಷರ 200 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ (2 ನಿ. 14.76 ಸೆ.) ಚಿನ್ನ ಗೆದ್ದರೆ, ಎಸ್‌.ಧನುಷ್‌ (2:19.27 ಸೆ.) ಬೆಳ್ಳಿಯ ಪದಕ ಜಯಿಸಿದರು.

ಮಹಿಳೆಯರ 200 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಮಹಾರಾಷ್ಟ್ರದ ಅಪೇಕ್ಷಾ ಫರ್ನಾಂಡಿಸ್‌ (2 ನಿ. 38.05 ಸೆ.) ಕೊಳದಿಂದ ಚಿನ್ನ ಎತ್ತಿದರು. 100 ಮೀಟರ್ಸ್‌ ಬಟರ್‌ಫ್ಲೈಯಲ್ಲಿ ದಿವ್ಯಾ ಸತಿಜಾ (1 ನಿ. 02.78 ಸೆ.) ಮೊದಲಿಗರಾದರೆ, ಅಪೇಕ್ಷಾ (1ನಿ.03.80ಸೆ.) ಎರಡನೇ ಸ್ಥಾನದಲ್ಲಿ ಸ್ಪರ್ಧೆ ಪೂರೈಸಿದರು.

ಪುರುಷರ ವಿಭಾಗದ200 ಮೀಟರ್ಸ್‌ ಫ್ರೀಸ್ಟೈಲ್‌ ಕುಶಾಗ್ರ ರಾವತ್‌ (1:49.64ಸೆ.), ಮಹಿಳಾ ವಿಭಾಗದಲ್ಲಿ ಶಿವಾಂಗಿ ಶರ್ಮಾ (2:07.19 ಸೆ.) ಅವರು ಬೆಳ್ಳಿಯ ಪದಕಗಳನ್ನು ಪಡೆದರು. ಪುರುಷರ ವಿಭಾಗದಲ್ಲಿ ಎ.ಎಸ್‌.ಆನಂದ್‌ (1:51.55ಸೆ.) ಕಂಚಿನ ಪದಕ ಕೊರಳಿಗೇರಿಸಿಕೊಂಡರು.

4X100 ಮೀಟರ್ಸ್‌ ಫ್ರೀ ಸ್ಟೈಲ್ ರಿಲೇ ಸ್ಪರ್ಧೆಯಲ್ಲಿ ಮಹಿಳಾ ತಂಡ (3:55.17ಸೆ.) ಚಿನ್ನದ ಪದಕ ಗೆದ್ದರೆ, ಪುರುಷರ ತಂಡ (3:20.50ಸೆ.) ಬೆಳ್ಳಿಯ ಪದಕ ಪಡೆಯಿತು.

ಮೇಲುಗೈ: ಭಾರತವು, ಟೇಕ್ವಾಂಡೊ ಸ್ಪರ್ಧೆಯಲ್ಲೂ ಗಮನ ಸೆಳೆದು ಮೂರು ಚಿನ್ನ, ಎರಡು ಬೆಳ್ಳಿ ಸಹಿತ ಆರು ಪದಕಗಳನ್ನು ಮಡಿಲಿಗೆ ಹಾಕಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.