ADVERTISEMENT

ಕ್ರೀಡಾ ಗಾಯಕ್ಕೆ ತಂತ್ರಜ್ಞಾನದ ಮದ್ದು

ಕ್ರೀಡಾ ಇಲಾಖೆ ಮತ್ತು ಪೀಪಲ್ ಟ್ರೀ ಆಸ್ಪತ್ರೆ ಸಹಯೋಗದ ಕ್ರೀಡಾ ವಿಜ್ಞಾನ ಕೇಂದ್ರ

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 19:30 IST
Last Updated 31 ಜನವರಿ 2020, 19:30 IST
   

ಬೆಂಗಳೂರು: ಆಟದ ಸಂದರ್ಭದಲ್ಲಿ ಆಗುವ ಗಾಯಕ್ಕೆ ಚಿಕಿತ್ಸೆ, ಕ್ರೀಡಾಪಟುವಿನ ಸ್ಟ್ರೆಂತ್ ಆ್ಯಂಡ್ ಕಂಡೀಷನಿಂಗ್‌ ಮಟ್ಟ ತಿಳಿದುಕೊಳ್ಳಲು ಮಾಡಬೇಕಾದ ಪರೀಕ್ಷೆ, ಪೋಷಕ ಆಹಾರದ ಕುರಿತ ಮಾಹಿತಿ ಮತ್ತು ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಅನುಸರಿಸಬೇಕಾದ ಮಾರ್ಗ...

ಇದೆಲ್ಲವನ್ನೂ ಒಂದೇ ಸೂರಿನಡಿ ಒದಗಿಸಲು ಸಜ್ಜಾಗಿದೆ ಕ್ರೀಡಾ ವಿಜ್ಞಾನ ಕೇಂದ್ರ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪೀಪಲ್ ಟ್ರೀ ಆಸ್ಪತ್ರೆಯ ಸಹಯೋಗದಲ್ಲಿ ಸಿದ್ಧಪಡಿಸಿರುವ ಈ ಕೇಂದ್ರವನ್ನು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ಉದ್ಘಾಟಿಸಲಾಯಿತು. ಕ್ರೀಡಾಪಟುಗಳ ಫಿಟ್‌ನೆಸ್ ಸಮಸ್ಯೆಗಳ ಪರಿಹಾರಕ್ಕೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿರುವುದು ಕೇಂದ್ರದ ವೈಶಿಷ್ಟ್ಯ.

ಕ್ರೀಡಾ ಔಷಧಿ, ಫಿಜಿಯಾಲಜಿ, ಶಸ್ತ್ರಚಿಕಿತ್ಸೆ, ಶ್ವಾಸಕೋಶದ ಸಾಮರ್ಥ್ಯವನ್ನು ತಿಳಿಯಲು ಮೌಲ್ಯಮಾಪನ, ಎಲ್ಲ ಆಯಾಮಗಳಲ್ಲಿ ದೈಹಿಕ ಚಲನೆಯನ್ನು ತಿಳಿಯುವ ವಿಧಾನ, ಲೇಸರ್ ಥೆರಪಿ, ಗೆಲಿಲಿಯೊ ಫಿಟ್‌ನೆಸ್‌ ತರಬೇತಿ, ಕ್ರೀಡಾ ಮನೋವಿಜ್ಞಾನ ಮುಂತಾದ ಸೇವೆಗಳು ಇಲ್ಲಿ ಲಭ್ಯವಿವೆ.

ADVERTISEMENT

‘ಕ್ರೀಡಾಪಟುಗಳ ಪೈಕಿ ಹೆಚ್ಚಿನವರು ದೇಹದಲ್ಲಿ ಕಾಣಿಸಿಕೊಳ್ಳುವ ಗಾಯ ಅಥವಾ ನೋವಿಗೆ ಮಾತ್ರ ಚಿಕಿತ್ಸೆ ಪಡೆಯುತ್ತಾರೆ. ಮಾನಸಿಕವಾಗಿಯೂ ಚಿಕಿತ್ಸೆಯ ಅಗತ್ಯವಿದೆ ಎಂಬುದನ್ನು ಕಡೆಗಣಿಸುತ್ತಾರೆ. ಕೇಂದ್ರದಲ್ಲಿರುವ ತಂಡ ಕ್ರೀಡಾಪಟುವಿನ ಮಾನಸಿಕ ದೃಢತೆಗೆ ಅಗತ್ಯ ಚಿಕಿತ್ಸೆ ನೀಡಲು ಮತ್ತು ಸಮಾಲೋಚನೆ ನಡೆಸಲು ಸಿದ್ಧವಿದೆ’ ಎಂದು ಪೀಪಲ್ ಟ್ರೀ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಜ್ಯೋತಿ ನೀರಜಾ ತಿಳಿಸಿದರು.

‘ಮೌಲ್ಯಮಾಪನ, ಸ್ಟ್ರೆಂತ್ ಆ್ಯಂಡ್ ಕಂಡೀಷನಿಂಗ್, ಪೋಷಕ ಆಹಾರ ಮತ್ತು ಮಾನಸಿಕ ಆರೋಗ್ಯ ಕ್ರೀಡಾಜೀವನದಲ್ಲಿ ಅತಿಮುಖ್ಯ. ಇದೆಲ್ಲದಕ್ಕೂ ಇಲ್ಲಿ ಆಧುನಿಕ ಉಪಕರಣ ಮತ್ತು ತಜ್ಞರನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದು ಕೇಂದ್ರದ ತಜ್ಞ ಡಾ.ಶ್ರೀಧರ್ ತಿಳಿಸಿದರು.

‘ದೈಹಿಕ ಸಾಮರ್ಥ್ಯ, ಕ್ರೀಡಾ ನೈಪುಣ್ಯ ಮತ್ತು ಮಾನಸಿಕ ದೃಢತೆಯನ್ನು ಅಳೆಯಲು ವಿಶೇಷ ತಂತ್ರಜ್ಞಾನವಿದೆ. ಫೋರ್ಸ್ ಪ್ಲೇಟ್ ಎಂಬ ಉಪಕರಣದ ಮೂಲಕಸ್ಟ್ರೆಂತ್ ಆ್ಯಂಡ್ ಕಂಡೀಷನಿಂಗ್ ಮಟ್ಟವನ್ನು ಅಳೆಯಲಾಗುತ್ತದೆ. ಯಾವ ಕ್ರೀಡೆಯಲ್ಲಿ ತೊಡಗಿರುವವರು ಯಾವ ಆಹಾರ–ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದನ್ನು ಬಿಎಂಆರ್ ಮೂಲಕ ತಿಳಿಸಲಾಗುವುದು’ ಎಂದು ಅವರು ವಿವರಿಸಿದರು.

ಹಿರಿಯ ಕಬಡ್ಡಿ ಆಟಗಾರ ಬಿ.ಸಿ.ರಮೇಶ್‌, ರಾಜ್ಯ 14 ವರ್ಷದೊಳಗಿನವರ ಕ್ರಿಕೆಟ್ ತಂಡದ ಆ‌ಯ್ಕೆ ಸಮಿತಿಯ ರಘೋತ್ತಮ ನವಲಿ ಮತ್ತಿತರರು ಉದ್ಘಾಟನಾ ಸಮಾರಂಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.