ADVERTISEMENT

ಕೊರೊನಾ ಹಾವಳಿ | ಸ್ಕ್ವಾಷ್ ಅಭ್ಯಾಸಕ್ಕೆ ಅವಸರವಿಲ್ಲ

ಪಿಟಿಐ
Published 31 ಮೇ 2020, 19:30 IST
Last Updated 31 ಮೇ 2020, 19:30 IST
   

ಚೆನ್ನೈ: ಕೊರೊನಾ ವೈರಸ್ ಹಾವಳಿಯಿಂದಾಗಿ ಸ್ಥಗಿತೊಂಡಿರುವ ಸ್ಕ್ವಾಷ್ ಕ್ರೀಡೆಯ ಚಟುವಟಿಕೆ ಆರಂಭಿಸಲು ವಿಶ್ವ ಸ್ಕ್ವಾಷ್ ಫೆಡರೇಷನ್ ಯೋಜನೆ ಸಿದ್ಧಪಡಿಸುತ್ತಿದೆ. ಆದರೆ ಭಾರತ ಸ್ಕ್ವಾಷ್ ಮತ್ತು ರ್‍ಯಾಕೆಟ್ ಫೆಡರೇಷನ್ (ಎಸ್‌ಆರ್‌ಎಫ್‌ಐ) ಕಾದು ನೋಡುವ ತಂತ್ರವನ್ನು ಅನುಸರಿಸಲು ನಿರ್ಧರಿಸಿದೆ.

ವಿಶ್ವ ಫೆಡರೇಷನ್ ಹಂತಹಂತವಾಗಿ ಕ್ರೀಡಾ ಚಟುವಟಿಕೆ ಆರಂಭಿಸಲು ಮುಂದಾಗಿದೆ. ಮೊದಲ ಹಂತದಲ್ಲಿ ಒಬ್ಬರೇ ಕ್ರೀಡಾಪಟು ಅಂಗಣಕ್ಕೆ ಪ್ರವೇಶಿಸಲು, ಕ್ರೀಡಾಂಗಣದ ಒಳಗೆ ಹೋಗಲು ಮತ್ತು ಹೊರಗೆ ಬರಲು ಪ್ರತ್ಯೇಕ ದಾರಿಗಳನ್ನು ನಿಗದಿ ಮಾಡಲು ಮತ್ತು ಸ್ಪರ್ಧೆಗಳ ಮೇಲೆ ನಿರ್ಬಂಧ ಹೇರಲು ನಿರ್ಧರಿಸಲಾಗಿದೆ.

‘ಈ ನಿರ್ಬಂಧಗಳನ್ನು ಎಲ್ಲ ದೇಶಗಳಲ್ಲಿ ಜಾರಿಗೆ ತರಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಗಳಿಗಳಿಗಾಗಿ ಕಾಯುತ್ತಿದ್ದೇವೆ. ಅದರ ಆಧಾರದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದುಎಸ್‌ಆರ್‌ಎಫ್‌ಐ ಕಾರ್ಯದರ್ಶಿ ಸೈರಸ್ ಪೊಂಚಾ ಭಾನುವಾರ ವೆಬಿನಾರ್‌ನಲ್ಲಿ ವಿವರಿಸಿದರು.

ADVERTISEMENT

ಸರ್ಕಾರವು ದೇಶದಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡದೆ ಕ್ರೀಡಾ ಚಟುವಟಿಕೆ ನಡೆಸಲು ಅನುಮತಿ ನೀಡಿದೆ. ಹೀಗಾಗಿ ಬಹುತೇಕ ವಿಭಾಗಗಳಲ್ಲಿ ಅಭ್ಯಾಸ ಆರಂಭಗೊಂಡಿದೆ. ಆದರೂ ಸ್ಕ್ವಾಷ್ ಪಟುಗಳು ಇನ್ನೂ ಅಂಗಣಕ್ಕೆ ವಾಪಸಾಗಲಿಲ್ಲ.

‘ಅಭ್ಯಾಸ ನಡೆಯದಿದ್ದರೂ ಅಕ್ಟೋಬರ್‌ 31ರಿಂದ ನವೆಂಬರ್ ಆರರ ವರೆಗೆ ಮುಂಬೈಯಲ್ಲಿ ನಡೆಯಲಿರುವ ಜೂನಿಯರ್ ಮತ್ತು ಸಬ್ ಜೂನಿಯರ್ ವಿಭಾಗದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ದಿನಾಂಕಗಳಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಪೊಂಚಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.