ADVERTISEMENT

11ನೇ ಏಷ್ಯನ್ ಈಜು ಚಾಂಪಿಯನ್‌ಷಿಪ್‌: ದಾಖಲೆಯ 7 ಪದಕ ಗೆದ್ದ ಶ್ರೀಹರಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 16:11 IST
Last Updated 2 ಅಕ್ಟೋಬರ್ 2025, 16:11 IST
ಕೂಟದಲ್ಲಿ ಏಳು ಪದಕ ಗೆದ್ದ ಕರ್ನಾಟಕ ಶ್ರೀಹರಿ ನಟರಾಜ್‌
ಕೂಟದಲ್ಲಿ ಏಳು ಪದಕ ಗೆದ್ದ ಕರ್ನಾಟಕ ಶ್ರೀಹರಿ ನಟರಾಜ್‌   

ಅಹಮದಾಬಾದ್‌: ಭಾರತದ ಈಜುಪಟುಗಳು ಬುಧವಾರ ಮುಕ್ತಾಯಗೊಂಡ 11ನೇ ಏಷ್ಯನ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 13 ಪದಕಗಳನ್ನು ಗೆಲ್ಲುವುದರೊಂದಿಗೆ ಯಶಸ್ವಿಯಾಗಿ ಅಭಿಯಾನ ಮುಗಿಸಿದರು. ಕರ್ನಾಟಕದ ಈಜುತಾರೆ ಶ್ರೀಹರಿ ನಟರಾಜ್‌ ಅವರು ದಾಖಲೆಯ ಏಳು ಪದಕ ಜಯಿಸಿದರು.

24 ವರ್ಷ ವಯಸ್ಸಿನ ಶ್ರೀಹರಿ ಅವರು 100 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಅದರೊಂದಿಗೆ ಟೂರ್ನಿಯ ಇತಿಹಾಸದಲ್ಲಿ ಹೆಚ್ಚು (7) ಪದಕ ಗೆದ್ದ ಭಾರತದ ಈಜುಪಟು ಎಂಬ ಗೌರವಕ್ಕೂ ಭಾಜನರಾದರು. ಅವರು 55.23 ಸೆಕೆಂಡುಗಳಲ್ಲಿ ಗುರಿ ತಲುಪಿದರು. 

ಚೀನಾದ ಗುಕೈಲೈ ವಾಂಗ್‌ (54.27 ಸೆ.) ಮತ್ತು ತೈವಾನ್‌ನ ಲು ಲುನ್‌ ಶುವಾಂಗ್‌ (54.45 ಸೆ.) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದರು. ಸ್ಪರ್ಧೆಯಲ್ಲಿದ್ದ ಭಾರತದ ಮತ್ತೊಬ್ಬ ಈಜುಪಟು ರಿಷಭ್‌ ದಾಸ್‌ ನಾಲ್ಕನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.

ADVERTISEMENT

ಪುರುಷರ 4x100 ಮೀ. ಫ್ರೀಸ್ಟೈಲ್‌ ರಿಲೆ ಸ್ಪರ್ಧೆಯಲ್ಲಿ ಶ್ರೀಹರಿ, ಆಕಾಶ್‌ ಮಣಿ, ಥಾಮಸ್‌ ದೊರೈ ಹಾಗೂ ರೋಹಿತ್‌ ಬೆನೆಡಿಕ್ಟನ್‌ ಅವರನ್ನೊಳಗೊಂಡ ಭಾರತ ತಂಡವು (3ನಿ.21.49ಸೆ.) ಕಂಚು ಜಯಿಸಿತು. ಚೀನಾ (3ನಿ.20.24ಸೆ.) ಚಿನ್ನ ಗೆದ್ದರೆ, ಬೆಳ್ಳಿ ಪದಕವು ತೈವಾನ್‌ (3ನಿ.20.59ಸೆ.) ಪಾಲಾಯಿತು.

ಮಹಿಳೆಯರ 400 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಭವ್ಯಾ ಸಚದೇವ ಅವರು (4ನಿ. 26.89ಸೆ.) ಕಂಚಿನ ಪದಕ ಜಯಿಸಿದರು. ಇದು ಮಹಿಳೆಯರ ವಿಭಾಗದಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕ. ಜಪಾನ್‌ನ ಹರುನೊ ತನಿಮೊಟೊ (4ನಿ.16.39ಸೆ.) ಚಿನ್ನ ಗೆದ್ದರೆ, ವಿಯೆಟ್ನಾಂನ ಖಾ ನಿ ಗುಯೆನ್‌ (4ನಿ. 25.50ಸೆ.) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಪುರುಷರ 200 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಸಜನ್‌ ಪ್ರಕಾಶ್‌ (1ನಿ.57.90ಸೆ.) ಅವರು ಕಂಚಿನ ಪದಕಕ್ಕೆ ಮುತ್ತಿಕ್ಕಿದರು.

ಕೂಟದಲ್ಲಿ 4 ಬೆಳ್ಳಿ ಹಾಗೂ 9 ಕಂಚು ಗೆದ್ದ ಭಾರತ, ಪದಕ ಪಟ್ಟಿಯಲ್ಲಿ 9ನೇ ಸ್ಥಾನ ಪಡೆಯಿತು. 38 ಚಿನ್ನ ಸೇರಿ ಒಟ್ಟು 49 ಪದಕಗಳನ್ನು ಗೆದ್ದ ಚೀನಾ ಅಗ್ರಸ್ಥಾನ ತನ್ನದಾಗಿಸಿಕೊಂಡಿತು.

ಮಹಿಳೆಯರ 400 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಕಂಚು ಗೆದ್ದ ಭವ್ಯಾ ಸಚ್‌ದೇವ
ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ಕಂಚು ಗೆದ್ದ ಕರ್ನಾಟಕ ಶ್ರೀಹರಿ ನಟರಾಜ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.