ADVERTISEMENT

ರಾಜ್ಯಮಟ್ಟದ ಕಬಡ್ಡಿ ಟೂರ್ನಿ: ಸೆಮಿಗೆ ಧಾರವಾಡ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 20:01 IST
Last Updated 12 ಅಕ್ಟೋಬರ್ 2019, 20:01 IST
ಧಾರವಾಡದಲ್ಲಿ ನಡೆಯುತ್ತಿರುವ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕಬಡ್ಡಿ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಹಾಸನ ತಂಡದ ರೈಡರ್‌ನನ್ನು ಕಟ್ಟಿಹಾಕುವ ಯತ್ನದಲ್ಲಿ ಧಾರವಾಡದ ಬಾಲಕರು –ಪ್ರಜಾವಾಣಿ ಚಿತ್ರ
ಧಾರವಾಡದಲ್ಲಿ ನಡೆಯುತ್ತಿರುವ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕಬಡ್ಡಿ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಹಾಸನ ತಂಡದ ರೈಡರ್‌ನನ್ನು ಕಟ್ಟಿಹಾಕುವ ಯತ್ನದಲ್ಲಿ ಧಾರವಾಡದ ಬಾಲಕರು –ಪ್ರಜಾವಾಣಿ ಚಿತ್ರ   

ಧಾರವಾಡ: ಆಕ್ರಮಣಶಾಲಿ ಆಟದ ಮೂಲಕ ಪ್ರೇಕ್ಷಕರ ಅಪಾರ ಮೆಚ್ಚುಗೆ ಗಳಿಸಿದ ಧಾರವಾಡದ ಬಾಲಕರ ತಂಡದವರು ಇಲ್ಲಿನ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪದವಿಪೂರ್ವ ಕಾಲೇಜುಗಳು ರಾಜ್ಯಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಧಾರವಾಡ ಜಿಲ್ಲೆಯ ಬಾಲಕರು 46–14 ಅಂಕಗಳಿಂದ ಹಾಸನ ತಂಡವನ್ನು ಮಣಿಸಿದರು. ಹಾಸನ ತಂಡದವರು ನಾಲ್ಕು ಬಾರಿ ಆಲೌಟ್‌ ಆದರು.

ಇನ್ನಷ್ಟು ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಮಂಗಳೂರು 29–13ರಲ್ಲಿ ದಾವಣಗೆರೆ ಮೇಲೂ, ಬೆಂಗಳೂರು ದಕ್ಷಿಣ ತಂಡ 50–23ರಲ್ಲಿ ಬಾಗಲಕೋಟೆ ವಿರುದ್ಧವೂ ಗೆಲುವು ಪಡೆದವು. ತುಮಕೂರು ತಂಡ ಬೆಂಗಳೂರು ಉತ್ತರ ತಂಡವನ್ನು ಮಣಿಸಿತು.

ADVERTISEMENT

ಬಾಲಕಿಯರ ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಧಾರವಾಡ ತಂಡ 28–25ರಲ್ಲಿ ಚಿಕ್ಕೋಡಿ ತಂಡವನ್ನು ಮಣಿಸಿ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿತು. ಇದೇ ವಿಭಾಗದ ಇನ್ನಷ್ಟು ಪಂದ್ಯಗಳಲ್ಲಿ ಉಡುಪಿ 29–27ರಲ್ಲಿ ಬೆಳಗಾವಿ ಮೇಲೂ, ಮಂಗಳೂರು 44–42ರಲ್ಲಿ ರಾಮನಗರ ವಿರುದ್ಧವೂ ಗೆಲುವು ಪಡೆದವು. ಮಂಡ್ಯ ತಂಡ ಬೆಂಗಳೂರು ಉತ್ತರವನ್ನು ಸೋಲಿಸಿತು.

ಭಾನುವಾರ ನಡೆಯುವ ಪುರುಷರ ವಿಭಾಗದ ಸೆಮಿಫೈನಲ್‌ ಪಂದ್ಯಗಳಲ್ಲಿ ಧಾರವಾಡ-ಮಂಗಳೂರು, ಬೆಂಗಳೂರು ಉತ್ತರ–ಬೆಂಗಳೂರು ದಕ್ಷಿಣ, ಬಾಲಕಿಯರ ವಿಭಾಗದಲ್ಲಿ ಧಾರವಾಡ– ಮಂಡ್ಯ, ಉಡುಪಿ-ಮಂಗಳೂರು ತಂಡಗಳು ಪೈಪೋಟಿ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.