ಸತೀಶ್ ಕುಮಾರ್ ಕರುಣಾಕರನ್
ಷಾಮೆನ್ (ಚೀನಾ): ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್‌ನ ಸುದೀರ್‌ಮನ್ ಕಪ್ ಫೈನಲ್ ’ಡಿ‘ ಗುಂಪಿನ ಪಂದ್ಯದಲ್ಲಿ ಭಾರತ ತಂಡ ಗುರುವಾರ 3–2 ರಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ ಸಮಾಧಾನಕರ ಗೆಲುವು ಪಡೆಯಿತು. ಈ ಎರಡೂ ತಂಡಗಳು ನಾಕೌಟ್ ಅವಕಾಶದಿಂದ ಈ ಮೊದಲೇ ಹೊರಬಿದ್ದ ಕಾರಣ ಪಂದ್ಯ ಮಹತ್ವ ಕಳೆದುಕೊಂಡಿತ್ತು.
ಭಾರತ ’ಡಿ‘ ಗುಂಪಿನಲ್ಲಿ ಇದಕ್ಕೆ ಮೊದಲು ಆಡಿದ್ದ ಎರಡೂ ಪಂದ್ಯಗಳನ್ನು ಸೋತಿದ್ದರಿಂದ ನಾಕೌಟ್ ರೇಸ್‌ನಿಂದ ಹೊರಬಿದ್ದಿತ್ತು. ಷಾಮೆನ್‌ನ ಫೆಂಗ್‌ಹುವಾಂಗ್ ಜಿಮ್ನೇಷಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಡೆನ್ಮಾರ್ಕ್ ಮತ್ತು ಎರಡನೇ ಪಂದ್ಯದಲ್ಲಿ ಇಂಡೊನೇಷ್ಯಾ ಎದುರು 1–4 ಸಮಾನ ಅಂತರದ ಸೋಲು ಅನುಭವಿಸಿತ್ತು. ಇಂಗ್ಲೆಂಡ್ ಸಹ ಗುಂಪಿನ ಎರಡೂ ಪಂದ್ಯಗಳಲ್ಲಿ ಪರಾಭವಗೊಂಡಿತ್ತು.
ವಿಶ್ವ ಕ್ರಮಾಂಕದಲ್ಲಿ 44ನೆ ಸ್ಥಾನದಲ್ಲಿರುವ ಅನುಪಮಾ ಉಪಾಧ್ಯಾಯ ಮಹಿಳಾ ಸಿಂಗಲ್ಸ್‌ನಲ್ಲಿ 21–12, 21–16ರಲ್ಲಿ ತಮಗಿಂತ ಕೆಳ ಕ್ರಮಾಂಕದ ಮಿಯು ಲಿನ್ ನುಗನ್ ಅವರನ್ನು ಸೋಲಿ ಸಿದ್ದರು. ನಂತರ ಸತೀಶ್ ಕುಮಾರ್ ಕರುಣಾಕರನ್ 18–21, 22–20, 21–13 ರಿಂದ ಹ್ಯಾರಿ ಹುವಾಂಗ್ ಅವರನ್ನು ಪ್ರಯಾಸದಿಂದ ಸೋಲಿಸಿ ಭಾರತದ ಮುನ್ನಡೆ ಹೆಚ್ಚಿಸಿದ್ದರು.
ತನಿಶಾ ಕ್ರಾಸ್ಟೊ– ಶ್ರುತಿ ಮಿಶ್ರಾ ಮಹಿಳಾ ಡಬಲ್ಸ್‌ನಲ್ಲಿ ಇಂಗ್ಲೆಂಡ್‌ನ ಲಿಝಿ ತೋಲ್ಮನ್– ಎಸ್ಟೆಲಿ ವಾನ್ ಲೀಯುವೆನ್ ಜೋಡಿಯನ್ನು 21–17, 21–17ರಲ್ಲಿ ಸೋಲಿಸಲು 42 ನಿಮಿಷ ತೆಗೆದುಕೊಂಡರು. ಮುನ್ನಡೆ 3–0 ಆಯಿತು.
ಆದರೆ ಪುರುಷರ ಡಬಲ್ಸ್‌ನಲ್ಲಿ ಹರಿಹರನ್ ಅಮ್ಸಕರುಣನ್– ರುಬನ್ ಕುಮಾರ್ ರೆತಿನಸಭಾಪತಿ ಜೋಡಿ ಇಂಗ್ಲೆಂಡ್ ಆಟಗಾರರೆದುರು ಸೋಲನು ಭವಿಸಿತು. ಔಪಚಾರಕ್ಕೆ ಸೀಮಿತವಾಗಿದ್ದ ಮಿಶ್ರ ಡಬಲ್ಸ್‌ನಲ್ಲಿ ಕರುಣಾಕರನ್– ಕ್ರಾಸ್ಟೊ ಜೋಡಿ, ಇಂಗ್ಲೆಂಡ್‌ನ ಕ್ಯಾಲಂ ಹೆಮ್ಮಿಂಗ್– ಲಿಯುವೆನ್ ಜೋಡಿಗೆ 21–11, 13–21, 22–24ರಲ್ಲಿ ಸೋಲನುಭವಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.