ADVERTISEMENT

ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಸುಮಿತ್‌, ಗೋವಿಂದ್‌ಗೆ ಕಂಚು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 16:36 IST
Last Updated 10 ನವೆಂಬರ್ 2022, 16:36 IST
ಗೋವಿಂದ್‌ಕುಮಾರ್‌
ಗೋವಿಂದ್‌ಕುಮಾರ್‌   

ನವದೆಹಲಿ: ಭಾರತದ ಸುಮಿತ್‌ ಮತ್ತು ಗೋವಿಂದ್‌ಕುಮಾರ್‌ ಸಹಾನಿ ಅವರು ಜೋರ್ಡಾನ್‌ನ ಅಮ್ಮಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲಿ ಸೋತು, ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಗುರುವಾರ ನಡೆದ 48 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಗೋವಿಂದ್‌ ಅವರು 0–4 ರಲ್ಲಿ ಕಜಕಸ್ತಾನದ ಸಂಜಾರ್‌ ತಾಷ್ಕೆನ್‌ಬೆ ಕೈಯಲ್ಲಿ ಪರಾಭವಗೊಂಡರು.

ಥಾಯ್ಲೆಂಡ್‌ ಓಪನ್‌ ಚಾಂಪಿಯನ್‌ ಆಗಿರುವ ಗೋವಿಂದ್‌ ರಕ್ಷಣೆಗೆ ಒತ್ತು ನೀಡಿ, ಅವಕಾಶ ಸಿಕ್ಕಾಗ ಎದುರಾಳಿಗೆ ಪಂಚ್‌ ನೀಡಿದರು. ಆದರೆ 2021ರ ವಿಶ್ವ ಯೂತ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿರುವ ಸಂಜಾರ್‌ ಅವರು ಆಕ್ರಮಣಕಾರಿ ಪ್ರದರ್ಶನ ನೀಡಿದರು. ಕೊನೆಯ ಎರಡು ಸುತ್ತುಗಳಲ್ಲಿ ಮೇಲುಗೈ ಸಾಧಿಸಿ ಫೈನಲ್‌ ಪ್ರವೇಶಿಸಿದರು.

ADVERTISEMENT

ಸುಮಿತ್‌ ಅವರು 75 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ 0–5 ರಲ್ಲಿ ಉಜ್ಬೆಕಿಸ್ತಾನದ ಜಫರೊವ್ ಸೈದ್‌ಜಮ್‌ಶಿದ್‌ ಎದುರು ಸೋತರು. ಹಾಲಿ ಏಷ್ಯನ್‌ ಚಾಂಪಿಯನ್‌ ಆಗಿರುವ ಜಫರೊವ್‌ಗೆ ತಕ್ಕ ಪೈಪೋಟಿ ನೀಡಲು ಭಾರತದ ಬಾಕ್ಸರ್‌ ವಿಫಲರಾದರು.

ಭಾರತದ ಶಿವ ಥಾಪಾ (63.5 ಕೆ.ಜಿ), ಮೊಹಮ್ಮದ್‌ ಹುಸಾಮುದ್ದೀನ್ (57 ಕೆ.ಜಿ) ಮತ್ತು ನರೇಂದರ್‌ (92+ ಕೆ.ಜಿ) ಅವರೂ ಸೆಮಿಫೈನಲ್‌ನಲ್ಲಿ ಪೈಪೋಟಿ ನಡೆಸಲಿದ್ದಾರೆ.

ಮಹಿಳೆಯರ ವಿಭಾಗದ ಫೈನಲ್‌ ಇಂದು: ಮಹಿಳೆಯರ ವಿಭಾಗದ ಫೈನಲ್‌ ಶುಕ್ರವಾರ ನಡೆಯಲಿದ್ದು, ಭಾರತದ ಐವರು ಬಾಕ್ಸರ್‌ಗಳು ಚಿನ್ನದ ಪದಕಕ್ಕಾಗಿ ತಮ್ಮ ಎದುರಾಳಿಗಳ ಜತೆ ಪೈಪೋಟಿ ನಡೆಸಲಿದ್ದಾರೆ.

ಲವ್ಲಿನಾ ಬೊರ್ಗೊಹೈನ್‌ (75 ಕೆ.ಜಿ), ಪರ್ವೀನ್‌ (63 ಕೆ.ಜಿ), ಆಫಿಯಾ ಪಠಾಣ್‌ (81+ ಕೆ.ಜಿ), ಸ್ವೀಟಿ (81 ಕೆ.ಜಿ) ಮತ್ತು ಮೀನಾಕ್ಷಿ (52 ಕೆ.ಜಿ) ಅವರು ಫೈನಲ್‌ ಪ್ರವೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.