ADVERTISEMENT

ಜಾವೆಲಿನ್‌: ಪ್ರಶಸ್ತಿ ಉಳಿಸಿಕೊಂಡ ಸುಂದರ್‌

ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌: ಅಜೀತ್‌ಗೆ ಕಂಚು

ಪಿಟಿಐ
Published 11 ನವೆಂಬರ್ 2019, 19:30 IST
Last Updated 11 ನವೆಂಬರ್ 2019, 19:30 IST
ಚಿನ್ನದ ಪದಕ ಗೆದ್ದ ಸುಂದರ್‌ ಸಿಂಗ್‌ ಗುರ್ಜರ್‌ ಜಾವೆಲಿನ್‌ ಎಸೆದ ಪರಿ–ರಾಯಿಟರ್ಸ್ ಚಿತ್ರ
ಚಿನ್ನದ ಪದಕ ಗೆದ್ದ ಸುಂದರ್‌ ಸಿಂಗ್‌ ಗುರ್ಜರ್‌ ಜಾವೆಲಿನ್‌ ಎಸೆದ ಪರಿ–ರಾಯಿಟರ್ಸ್ ಚಿತ್ರ   

ದುಬೈ: ಭುಜದ ನೋವಿನ ಮಧ್ಯೆಯೂ ಭಾರತದ ಸುಂದರ್‌ ಸಿಂಗ್‌ ಗುರ್ಜರ್‌ ಉತ್ತಮ ಸಾಮರ್ಥ್ಯ ತೋರಿದರು. ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಎಫ್‌46 ಜಾವೆಲಿನ್‌ ಎಸೆತ ವಿಭಾಗದಲ್ಲಿ ಚಿನ್ನಕ್ಕೆ ಕೊರಳೊಡ್ಡಿದರು. ಅಲ್ಲದೆ ಕಂಚು ಗೆದ್ದ ಅಜೀತ್‌ ಸಿಂಗ್‌ ಮತ್ತು ರಿಂಕು ಜೊತೆಗೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ ಗೇಮ್ಸ್‌ಗೆ ಟಿಕೆಟ್‌ ಗಿಟ್ಟಿಸಿದರು.

ಸುಂದರ್‌ ಅವರು 61.22 ಮೀಟರ್‌ ದೂರ ಜಾವೆಲಿನ್‌ ಎಸೆದು ಅಗ್ರಸ್ಥಾನ ಗಳಿಸಿದರು. ಈ ಋತುವಿನಲ್ಲಿ ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆ. ಶ್ರೀಲಂಕಾದ ದಿನೇಶ್‌ ಪಿ ಹೆರಾತ್‌ ಮುಡಿಯನ್‌ಸೆಲಗೆ (60.59 ಮೀ.) ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಭಾರತದ ಅಜೀತ್‌ (59.46 ಮೀಟರ್‌) ಕಂಚಿನ ಪದಕ ಗೆದ್ದರು. ಈ ವಿಭಾಗದಲ್ಲಿ ರಿಂಕು ನಾಲ್ಕನೇ ಸ್ಥಾನ ಪಡೆದರು.

ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್‌ ಸಮಿತಿಯ ನಿಯಮಗಳನ್ವಯ 2019ರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ವೈಯಕ್ತಿಕ ಸ್ಪರ್ಧೆಯಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಗಳಿಸಿದವರು (ಮ್ಯಾರಥಾನ್‌ ಹೊರತುಪಡಿಸಿ) ಟೋಕಿಯೊ ಗೇಮ್ಸ್‌ಗೆ ಅರ್ಹತೆ ಪಡೆಯುತ್ತಾರೆ.

ADVERTISEMENT

23 ವರ್ಷದ ಗುರ್ಜರ್‌, 2017ರ ಲಂಡನ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು. ದೇವೇಂದ್ರ ಜಜಾರಿಯಾ ಬಳಿಕ ಎರಡು ವಿಶ್ವ ಚಾಂಪಿಯನ್‌ಷಿಪ್‌ ಪದಕಗಳನ್ನು ಗೆದ್ದ ಭಾರತದ ಎರಡನೇ ಜಾವೆಲಿನ್‌ ಪಟು ಎನಿಸಿದರು. ಜಜಾರಿಯಾ ಅವರು 2013ರಲ್ಲಿ ಲಿಯಾನ್‌ ಹಾಗೂ ದೋಹಾ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದಿದ್ದರು.

ದೋಹಾ ಚಾಂಪಿಯನ್‌ಷಿಪ್‌ನಲ್ಲಿಭಾರತ ಇದುವರೆಗೆ ಎರಡು ಚಿನ್ನ, ತಲಾ ಒಂದು ಬೆಳ್ಳಿ ಹಾಗೂ ಕಂಚು ಗೆದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.