ADVERTISEMENT

ರಾಷ್ಟ್ರೀಯ ಜೂನಿಯರ್ ಈಜು: ಕರ್ನಾಟಕದ ಪ್ರಾಬಲ್ಯ

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 15:42 IST
Last Updated 19 ಜುಲೈ 2022, 15:42 IST
ನೀನಾ ವೆಂಕಟೇಶ್
ನೀನಾ ವೆಂಕಟೇಶ್   

ಬೆಂಗಳೂರು: ಕರ್ನಾಟಕದ ನೀನಾ ವೆಂಕಟೇಶ್, ಮಾನವಿ ವರ್ಮಾ ಮತ್ತು ಧೀನಿಧಿ ದೇಸಿಂಗು ಅವರು ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು.

ಮಂಗಳವಾರ ನಡೆದ ಬಾಲಕಿಯರ 15 ರಿಂದ 17 ವರ್ಷದೊಳಗಿನವರ ವಿಭಾಗದ 50 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ನೀನಾ 28.27 ಸೆ.ಗಳಲ್ಲಿ ಗುರಿ ತಲುಪಿದರು. ಕಳೆದ ವರ್ಷ ತಾವೇ ಸ್ಥಾಪಿಸಿದ್ದ ಕೂಟದಾಖಲೆ (28.51 ಸೆ.) ಉತ್ತಮಪಡಿಸಿಕೊಂಡರು.

ಬಾಲಕಿಯರ 12–14 ವರ್ಷದೊಳಗಿನವರ 200 ಮೀ. ಮೆಡ್ಲೆಯಲ್ಲಿ ಮಾನವಿ ವರ್ಮಾ 2 ನಿ.26.99 ಸೆ.ಗಳೊಂದಿಗೆ ಹೊಸ ಕೂಟ ದಾಖಲೆ ನಿರ್ಮಿಸಿದರು. ಅಪೇಕ್ಷಾ ಫೆರ್ನಾಂಡಿಸ್‌ 2019 ರಲ್ಲಿ ಸ್ಥಾಪಿಸಿದ್ದ ದಾಖಲೆಯನ್ನು (2 ನಿ. 27.09 ಸೆ.) ಮುರಿದರು. ಈ ಸ್ಪರ್ಧೆಯಲ್ಲಿ ಕರ್ನಾಟಕದ ವಿಹಿತಾ ನಯನಾ ಬೆಳ್ಳಿ ಪಡೆದರು.

ADVERTISEMENT

ಉತ್ತಮ ಪ್ರದರ್ಶನ ಮುಂದುವರಿಸಿದ ಧೀನಿಧಿ ದೇಸಿಂಗು ಇದೇ ವಯೋವರ್ಗದಲ್ಲಿ ಬಾಲಕಿಯರ 50 ಮೀ. ಬಟರ್‌ಫ್ಲೈನಲ್ಲಿ 28.93 ಸೆ.ಗಳೊಂದಿಗೆ ಅಗ್ರಸ್ಥಾನ ಗಳಿಸಿದರು. ತನಿಷಿ ಗುಪ್ತಾ (29.30 ಸೆ.) ಎರಡನೇ ಸ್ಥಾನ ಪಡೆದರು. ಧೀನಿಧಿ ಅವರು ತನಿಷಿ ಹೆಸರಿನಲ್ಲಿದ್ದ ಕೂಟ ದಾಖಲೆ (29.45 ಸೆ.) ಮುರಿದರು.

ನಯನ್‌ಗೆ ಚಿನ್ನ: ನಯನ್‌ ವಿಘ್ನೇಶ್‌ ಬಾಲಕರ 15–17 ವರ್ಷದೊಳಗಿನವರ ವಿಭಾಗದ 200 ಮೀ. ಮೆಡ್ಲೆಯಲ್ಲಿ ಚಿನ್ನ ಗೆದ್ದರು. ಅವರು 2 ನಿ. 10.02 ಸೆ.ಗಳಲ್ಲಿ ಗುರಿ ತಲುಪಿದರು.

200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಉತ್ಕರ್ಷ್‌ ಸಂತೋಷ್‌ ಪಾಟೀಲ್ 2 ನಿ. 6.77 ಸೆ.ಗಳೊಂದಿಗೆ ಮೊದಲ ಸ್ಥಾನ ಗಳಿಸಿದರು.

ಇದೇ ವಯೋವರ್ಗದ ಬಾಲಕಿಯರ 200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ರಿಧಿಮಾ ವೀರೇಂದ್ರಕುಮಾರ್ 2 ನಿ.24.25 ಸೆ.ಗಳಲ್ಲಿ ಮೊದಲಿಗರಾಗಿ ಗುರಿ ತಲುಪಿದರು. 200 ಮೀ. ಮೆಡ್ಲೆಯಲ್ಲಿ ಎ.ಜೆದೀದಾ ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು.

ಮೀನಾಕ್ಷಿಗೆ ಅಗ್ರಸ್ಥಾನ: ಬಾಲಕಿಯರ 12–14 ವರ್ಷದೊಳಗಿನವರ 1,500 ಮೀ. ಫ್ರೀಸ್ಟೈಲ್‌ನಲ್ಲಿ ಮೀನಾಕ್ಷಿ ಮೆನನ್‌ 18 ನಿ. 40.94 ಸೆ.ಗಳೊಂದಿಗೆ ಮೊದಲ ಸ್ಥಾನ ಪಡೆದರು.

ಇದೇ ವಯೋವರ್ಗದ ಬಾಲಕರ 200 ಮೀ. ಮೆಡ್ಲೆಯಲ್ಲಿ ಆರ್‌.ನವನೀತ್‌ ಗೌಡ 2 ನಿ.17.57 ಸೆ. ಸಾಧನೆಯೊಂದಿಗೆ ಚಿನ್ನ ಜಯಿಸಿದರು.

12–14 ವರ್ಷದೊಳಗಿನವರ ಬಾಲಕರ 50 ಮೀ. ಬಟರ್‌ಫ್ಲೈನಲ್ಲಿ ಇಶಾನ್‌ ಮೆಹ್ರಾ, 200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಕೆ.ಕುಶಾಲ್‌ ಕಂಚು ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.