ADVERTISEMENT

ಈಜು | ರುಜುಲಾ ರಾಷ್ಟ್ರೀಯ ದಾಖಲೆ

ರಾಷ್ಟ್ರೀಯ ಈಜು: ಕರ್ನಾಟಕದ ಶ್ರೀಹರಿ ನಟರಾಜ್‌, ವಿಹಿತಾ ನಯನಾಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 16:23 IST
Last Updated 24 ಜೂನ್ 2025, 16:23 IST
ರಾಷ್ಟ್ರೀಯ ದಾಖಲೆ ನಿರ್ಮಿಸಿದ ಕರ್ನಾಟಕದ ರುಜುಲಾ ಎಸ್‌. –ಪ್ರಜಾವಾಣಿ ಸಂಗ್ರಹ ಚಿತ್ರ
ರಾಷ್ಟ್ರೀಯ ದಾಖಲೆ ನಿರ್ಮಿಸಿದ ಕರ್ನಾಟಕದ ರುಜುಲಾ ಎಸ್‌. –ಪ್ರಜಾವಾಣಿ ಸಂಗ್ರಹ ಚಿತ್ರ   

ಬೆಂಗಳೂರು: ಕರ್ನಾಟಕದ ರುಜುಲಾ ಎಸ್‌. ಅವರು ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ 78ನೇ ರಾಷ್ಟ್ರೀಯ ಸೀನಿಯರ್ಸ್‌ ಈಜು ಚಾಂಪಿಯನ್‌ಷಿಪ್‌ನ ಮಹಿಳೆಯರ 50 ಮೀಟರ್‌ ಫ್ರೀಸ್ಟೈಲ್‌ನಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಕೂಟದ ಮೂರನೇ ದಿನವಾದ ಮಂಗಳವಾರ ನಡೆದ ಸ್ಪರ್ಧೆಯಲ್ಲಿ 17 ವರ್ಷ ವಯಸ್ಸಿನ ರುಜುಲಾ 26.36 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. 2023ರಲ್ಲಿ ರುಜುತಾ ಖಾಡೆ (26.47ಸೆ) ನಿರ್ಮಿಸಿದ್ದ ದಾಖಲೆಯನ್ನು ಮುಳುಗಿಸಿದರು. ರೈಲ್ವೆ ಕ್ರೀಡಾ ಅಭಿವೃದ್ಧಿ ಮಂಡಳಿಯ (ಆರ್‌ಎಸ್‌ಪಿಬಿ) ಅವಂತಿಕಾ ಸುಧೀರ್ ಚವ್ಹಾಣ್ (26.58ಸೆ) ಮತ್ತು ಕರ್ನಾಟಕದ ದಿನಿಧಿ ದೇಸಿಂಗು (26.69ಸೆ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು. 

ಪುರುಷರ 50 ಮೀಟರ್‌ ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ಕರ್ನಾಟಕದ ಒಲಿಂಪಿಯನ್‌ ಶ್ರೀಹರಿ ನಟರಾಜ್‌ (25.70ಸೆ) ಚಿನ್ನದ ಸಾಧನೆ ಮಾಡಿದರು. ಮಹಿಳೆಯರ ವಿಭಾಗದಲ್ಲಿ ಕರ್ನಾಟಕದ ವಿಹಿತಾ ನಯನಾ ಲೋಕನಾಥನ್‌ (29.99ಸೆ) ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 

ADVERTISEMENT

ಮಹಿಳೆಯರ 1500 ಮೀಟರ್‌ ಫ್ರೀಸ್ಟೈಲ್‌ನಲ್ಲಿ ದೆಹಲಿಯ ಭವ್ಯಾ ಸಚದೇವ್‌ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. 17ನಿ.35.07 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಅವರು, 2015ರಲ್ಲಿ ಕರ್ನಾಟಕದ ವಿ.ಮಾಳವಿಕಾ (17ನಿ.39.16 ಸೆ.) ನಿರ್ಮಿಸಿದ್ದ ದಾಖಲೆಯನ್ನು ಮುರಿದರು. 

ಪುರುಷರ 4x100 ಮೀ. ಮೆಡ್ಲೆ ರಿಲೆ ಸ್ಪರ್ಧೆಯಲ್ಲಿ ತಮಿಳುನಾಡು ತಂಡವು ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದಿತು. ಉತ್ಕರ್ಷ್‌ ಸಂತೋಷ್‌ ಪಾಟೀಲ್, ಮಣಿಕಂಠ ಎಲ್‌, ಚಿಂತನ್ ಎಸ್‌.ಶೆಟ್ಟಿ, ತನಿಶ್‌ ಜಾರ್ಜ್ ಮ್ಯಾಥ್ಯೂ ಅವರ ತಂಡವು 3ನಿಮಿಷ 45.09 ಸೆಕೆಂಡ್‌ಗಳಲ್ಲಿ ದಡ ಸೇರಿ, ಕಳೆದ ವರ್ಷ ತಮ್ಮದೇ ರಾಜ್ಯ ನಿರ್ಮಿಸಿದ್ದ ದಾಖಲೆಯನ್ನು (3ನಿ.45.66ಸೆ) ಉತ್ತಮ ಪಡಿಸಿತು. 

ಪುರುಷರು: 400 ಮೀ. ಫ್ರೀಸ್ಟೈಲ್‌: ಆರ್ಯನ್‌ ನೆಹ್ರಾ (ಗುಜರಾತ್‌)–1, ಕುಶಾಗ್ರ ರಾವತ್‌ (ದೆಹಲಿ)–2, ಅನೀಶ್‌ ಎಸ್‌.ಗೌಡ (ಕರ್ನಾಟಕ)–3, ಕಾಲ: 3ನಿ.55.96 ಸೆ.; 200 ಮೀ. ಬಟರ್‌ಫ್ಲೈ: ಸಜನ್ ಪ್ರಕಾಶ್‌ (ಪೊಲೀಸ್‌)–1, ವಿಕ್ರಮ್‌ ಚಾಂಗ್‌ಮೈ (ಆರ್‌ಎಸ್‌ಪಿಬಿ)–2, ದರ್ಶನ್‌ ಎಸ್‌. (ಕರ್ನಾಟಕ)–3, ಕಾಲ: 1ನಿ.58.98 ಸೆ.; 50 ಮೀ. ಬ್ಯಾಕ್‌ಸ್ಟ್ರೋಕ್‌: ಶ್ರೀಹರಿ ನಟರಾಜ್ (ಕರ್ನಾಟಕ)–1, ರಿಷಭ್‌ ಅನುಪಮ್ ದಾಸ್‌ (ಮಹಾರಾಷ್ಟ್ರ)–2, ಆಕಾಶ್‌ ಮಣಿ (ಕರ್ನಾಟಕ)–3, ಕಾಲ: 25.70 ಸೆ.; 4x100 ಮೀ. ಮೆಡ್ಲೆ ರಿಲೆ: ತಮಿಳುನಾಡು–1, ಕರ್ನಾಟಕ (ಉತ್ಕರ್ಷ್‌ ಸಂತೋಷ್‌ ಪಾಟೀಲ, ಮಣಿಕಂಠ ಎಲ್‌, ಚಿಂತನ್ ಎಸ್‌.ಶೆಟ್ಟಿ, ತನಿಶ್‌ ಜಾರ್ಜ್ ಮ್ಯಾಥ್ಯೂ)–2, ಆರ್‌ಎಸ್‌ಪಿಬಿ –3, ಕಾಲ: 3ನಿ.45.09 ಸೆ.; ನೂತನ ದಾಖಲೆ, ಹಳೆಯದು: 3ನಿ.45.66 ಸೆ.

ಮಹಿಳೆಯರು: 1,500 ಮೀ. ಫ್ರೀಸ್ಟೈಲ್‌: ಭವ್ಯಾ ಸಚದೇವ್‌ (ದೆಹಲಿ)–1, ವೃತ್ತಿ ಅಗರವಾಲ್‌ (ತೆಲಂಗಾಣ)–2, ತಾನ್ಯಾ ಷಡಕ್ಷರಿ (ಕರ್ನಾಟಕ)–3, ಕಾಲ: 17ನಿ.35.07 ಸೆ., ನೂತನ ದಾಖಲೆ, ಹಳೆಯದು: 17ನಿ.39.16 ಸೆ., ಕರ್ನಾಟಕ ವಿ.ಮಾಳವಿಕಾ; 200 ಮೀ. ಬಟರ್‌ಫ್ಲೈ: ಆಸ್ತಾ ಚೌಧುರಿ (ಆರ್‌ಎಸ್‌ಪಿಬಿ)–1 ರೋಶಿನಿ ಬಾಲಸುಬ್ರಮಣಿಯನ್ (ತಮಿಳುನಾಡು)–2, ಸೃಷ್ಟಿ ಉಪಾಧ್ಯಾಯ (ಒಡಿಶಾ)–3, ಕಾಲ: 2ನಿ.20.63 ಸೆ.; 50 ಮೀ. ಬ್ಯಾಕ್‌ಸ್ಟ್ರೋಕ್‌: ವಿಹಿತಾ ನಯನಾ ಲೋಕನಾಥನ್ (ಕರ್ನಾಟಕ)–1, ಸಂಜನಾ ಮಂಗೇಶ್‌ ಪ್ರಭುಗಾಂವಕರ್‌ (ಗೋವಾ)–2, ಸೌಬ್ರತಿ ಮೊಂಡಲ್‌ (ಪಶ್ಚಿಮ ಬಂಗಾಳ)–3, ಕಾಲ:29.99 ಸೆ.; 50 ಮೀ. ಫ್ರೀಸ್ಟೈಲ್‌: ರುಜುಲಾ ಎಸ್‌. (ಕರ್ನಾಟಕ)–1, ಅವಂತಿಕಾ ಸುಧೀರ್ ಚವ್ಹಾಣ್ (ಆರ್‌ಎಸ್‌ಪಿಬಿ)–2, ದಿನಿಧಿ ದೇಸಿಂಗು (ಕರ್ನಾಟಕ)–3, ಕಾಲ: 26.36 ಸೆ., ನೂತನ ದಾಖಲೆ, ಹಳೆಯದು: 26.47 ಸೆ., ರುಜುತಾ ಖಾಡೆ.

ಚಿನ್ನದ ಪದಕ ಗೆದ್ದ ಶ್ರೀಹರಿ ನಟರಾಜ್‌
ಚಿನ್ನದ ಪದಕ ಗೆದ್ದ ವಿಹಿತಾ ನಯನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.