ADVERTISEMENT

ಟೇಬಲ್ ಟೆನಿಸ್‌ನಲ್ಲಿ ‘ಚಿನ್ನ’ದ ಸಂದೇಶ

ಸದಾಶಿವ ಎಂ.ಎಸ್‌.
Published 31 ಮಾರ್ಚ್ 2019, 19:45 IST
Last Updated 31 ಮಾರ್ಚ್ 2019, 19:45 IST
ಅಬುಧಾಬಿಯಲ್ಲಿ ನಡೆದ ವಿಶೇಷ ಒಲಿಂಪಿಕ್ಸ್‌ನಲ್ಲಿ ಸಂದೇಶ ಕೃಷ್ಣ ಹರಿಕಂತ್ರ (ಎಡದಿಂದ ಮೂರನೆಯವರು) ಚಿನ್ನದ ಪದಕ ಗೆದ್ದ ಕ್ಷಣ. ಅವರ ಪಕ್ಕದಲ್ಲೇ ತರಬೇತುದಾರ ಸಿರಿಲ್ ಲೋಪಿಸ್ (ನೀಲಿ ಬಣ್ಣದ ಅಂಗಿ ಧರಿಸಿದವರು) ಇದ್ದಾರೆ.
ಅಬುಧಾಬಿಯಲ್ಲಿ ನಡೆದ ವಿಶೇಷ ಒಲಿಂಪಿಕ್ಸ್‌ನಲ್ಲಿ ಸಂದೇಶ ಕೃಷ್ಣ ಹರಿಕಂತ್ರ (ಎಡದಿಂದ ಮೂರನೆಯವರು) ಚಿನ್ನದ ಪದಕ ಗೆದ್ದ ಕ್ಷಣ. ಅವರ ಪಕ್ಕದಲ್ಲೇ ತರಬೇತುದಾರ ಸಿರಿಲ್ ಲೋಪಿಸ್ (ನೀಲಿ ಬಣ್ಣದ ಅಂಗಿ ಧರಿಸಿದವರು) ಇದ್ದಾರೆ.   

ಕುಮಟಾ ತಾಲ್ಲೂಕಿನ ಬೆಟ್ಕುಳಿಯ ಮೀನುಗಾರ, ಕೃಷ್ಣ ಹರಿಕಂತ್ರ ಹಾಗೂ ಮಹಾಲಕ್ಷ್ಮಿ ದಂಪತಿಯ ಪುತ್ರ ಸಂದೇಶ್‌ಗೆ ಸ್ಪಷ್ಟವಾಗಿ ಮಾತನಾಡಲು ಬರುವುದಿಲ್ಲ. ಅಲ್ಲದೇ ಬುದ್ಧಿಮತ್ತೆಯೂ ಆರೋಗ್ಯವಂತರಿಗಿಂತ ಕಡಿಮೆಯಿದೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ತರಬೇತಿ ನೀಡುವುದು ಬಡ ಕುಟುಂಬಕ್ಕೆ ದೊಡ್ಡ ಸವಾಲಾಗಿತ್ತು.

ಹಾಗಾಗಿ ಮಗನನ್ನು ಐದು ವರ್ಷಗಳ ಹಿಂದೆ ದಯಾನಿಲಯಕ್ಕೆ ಕಳುಹಿಸಿದರು. ಅದರ ಸಂಸ್ಥಾಪಕರೂ ಆಗಿರುವ ತರಬೇತುದಾರ ಸಿರಿಲ್ ಲೋಪಿಸ್, ಯುವಕನ ಕ್ರೀಡಾಯಾತ್ರೆಗೆ ಗುರುವಾದರು. ಪಟಿಯಾಲದ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಅವರು ಪಡೆದಿದ್ದ ತರಬೇತಿಯ ಅನುಭವ ಧಾರೆ ಎರೆದರು. ಈಚೆಗೆ ಅಬುಧಾಬಿಯಲ್ಲಿ ನಡೆದ ವಿಶೇಷ ಒಲಿಂಪಿಕ್ಸ್‌ನಲ್ಲಿ ಸಂದೇಶ್ ಬಂಗಾರದ ಪದಕ ಗೆದ್ದು ಗಮನ ಸೆಳೆದಿದ್ದಾರೆ. ಉತ್ತರಕನ್ನಡ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

ಸೊಳ್ಳೆ ಪರದೆಯೇ ನೆಟ್!:‘ಸಂದೇಶನಿಗೆ ಅಕ್ಷರಾಭ್ಯಾಸ ಮಾಡಿಸಲು ಪಟ್ಟ ಪ್ರಯತ್ನಗಳು ತಕ್ಷಣಕ್ಕೆ ಫಲ ನೀಡಲಿಲ್ಲ. ಹೀಗಾಗಿ ಕ್ರೀಡೆಯಲ್ಲಿ ತೊಡಗಿಸುವ ಯೋಚನೆ ಬಂತು. ಆದರೆ, ಬ್ಯಾಡ್ಮಿಂಟನ್‌ನಂತಹ ಕ್ರೀಡೆಗಳಿಗೆ ಜಾಸ್ತಿ ಜಾಗ ಬೇಕು. ನಮ್ಮ ಶಾಲೆಯ ಅಂಗಳ ದೊಡ್ಡದಾಗಿಲ್ಲ. ಹಾಗಾಗಿ ಟೇಬಲ್ ಟೆನಿಸ್‌ನಲ್ಲಿತರಬೇತಿ ನೀಡಿದೆ.ಅದರ ಟೇಬಲ್ ಹಾಗೂ ನೆಟ್ ಖರೀದಿಸಲು ಸಾವಿರಾರು ರೂಪಾಯಿ ನಮ್ಮ ಬಳಿ ಇರಲಿಲ್ಲ. ಟೇಬಲ್ ಟೆನಿಸ್‌ನಅಂಕಣ 9x5 ಅಡಿ ಇರಬೇಕು.ಆದರೆ, ತಾತ್ಕಾಲಿಕವಾಗಿ8x4 ಅಡಿ ಅಳತೆಯ ಪ್ಲೈವುಡ್ ಮತ್ತು ಅದಕ್ಕೆ ಸೊಳ್ಳೆ ಪರದೆ ಕತ್ತರಿಸಿ ಅಳವಡಿಸಿದೆ. ₹ 100, ₹ 200ರಲ್ಲೇ ಖರ್ಚು ಮುಗಿಯಿತು. ಅದರಲ್ಲೇ ತರಬೇತಿ ನೀಡಿದೆ’ ಎಂದು ಸಿರಿಲ್‌ ನೆನಪಿಸಿಕೊಂಡರು.

ADVERTISEMENT

‌‘ಆರಂಭದಲ್ಲಿ ಯಾವುದೇ ಉದ್ದೇಶ ಇಟ್ಟುಕೊಳ್ಳದೇ ಸುಮ್ಮನೆ ತರಬೇತಿ ನೀಡುತ್ತಿದ್ದೆ. ಹೀಗೇಎರಡು ವರ್ಷ ಕಳೆದಿದ್ದವು. ಅಷ್ಟರಲ್ಲಿ ವಿಶೇಷ ಒಲಿಂಪಿಕ್ಸ್‌ನ ದಿನಾಂಕ (ಮಾರ್ಚ್ 14ರಿಂದ 21ರವರೆಗೆ) ಪ್ರಕಟವಾಗಿತ್ತು. ಅದಕ್ಕೆ ಸಿದ್ಧತೆ ಮಾಡಿಕೊಳ್ಳಲು ಆರಂಭಿಸಿದೆವು‍’ ಎಂದು ಒಲಿಂಪಿಕ್ಸ್ ದಾರಿಯನ್ನು ತೆರೆದಿಟ್ಟರು.

‘ಸಂದೇಶ ತಾಲ್ಲೂಕುಮಟ್ಟದ ಸ್ಪರ್ಧೆಗಳನ್ನು ಗೆದ್ದುಕೊಂಡ. ನಂತರ, ಜಿಲ್ಲಾಮಟ್ಟ, ಅಂತರಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿಯೂ ಗೆದ್ದುಕೊಂಡ. ವೃತ್ತಿಪರ ತರಬೇತಿ ಇಲ್ಲದಿದ್ದರೂ ಅವನ ಗೆಲುವನ್ನು ಕಂಡು ಅಚ್ಚರಿಪಟ್ಟಿದ್ದೆ. ಈ ನಡುವೆ, ಯಾವುದೋ ರೆಸಾರ್ಟ್‌ನಲ್ಲಿ ಟೇಬಲ್ ಟೆನಿಸ್‌ನ ಟೇಬಲ್‌ ಅನ್ನುಊಟಕ್ಕೆ ಬಳಕೆ ಮಾಡುತ್ತಿದ್ದು, ಮಾರಾಟಕ್ಕಿದೆ ಎಂದು ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ನೋಡಿದೆ. ಸ್ನೇಹಿತರ ಜತೆಗೂಡಿ ಅದನ್ನು ಖರೀದಿಸಿ ತಂದು ಸಂಪೂರ್ಣ ವೃತ್ತಿಪರ ತರಬೇತಿ ಶುರುಮಾಡಿದೆ’ ಎಂದು ತಮ್ಮ ಪ್ರಯಾಸದ ದಿನಗಳನ್ನು ಮೆಲುಕು ಹಾಕಿದರು.

‘ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಗೆದ್ದಿದ್ದ ಸಂದೇಶ, ದಕ್ಷಿಣ ವಲಯದಲ್ಲೂ ಜಯಿಸಿದ. ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದ. ದೇಶದ ವಿವಿಧ ಭಾಗಗಳಿಂದ ಬಂದಿದ್ದ ಒಂದು ಸಾವಿರ ಹುಡುಗರಲ್ಲಿ ಎರಡನೇ ಹಂತಕ್ಕೆ 300, ಕೊನೆಯ ಹಂತಕ್ಕೆ ನಾಲ್ವರನ್ನು ಆಯ್ಕೆ ಮಾಡಿದ್ದರು. ಅವರ ನಡುವಿನ ಸ್ಪರ್ಧೆಯಲ್ಲಿ ಕೂಡ ಮೊದಲಿಗನಾದ. ಆ ಅವಧಿಯಲ್ಲಿರೋಬೋಟ್ ಬಳಸಿತರಬೇತಿ, ಹಲವು ಚೆಂಡುಗಳ ತರಬೇತಿ (ಮಲ್ಟಿ ಬಾಲ್ ಟ್ರೈನಿಂಗ್) ಪಡೆದು ಪಳಗಿದ. ಅದರೊಂದಿಗೆ ವಿಶೇಷ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಅಪರೂಪದ ಅವಕಾಶ ಗಿಟ್ಟಿಸಿಕೊಂಡ. ಅಂತರರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಪುಟ್ಟ ಪಟ್ಟಣದ ಹುಡುಗನೊಬ್ಬ ಬಂಗಾರದ ಪದಕ ಗೆದ್ದುಕೊಂಡ ಎಂಬುದೇ ಸಂಭ್ರಮದ ಸಂಗತಿ’ ಎಂದು ಹೆಮ್ಮೆಯಿಂದ ಹೇಳಿದರು ಸಿರಿಲ್‌.

‘ಒತ್ತಡ ಎನಿಸಲಿಲ್ಲ’
‘ವಿಶೇಷ ಅಗತ್ಯವುಳ್ಳ ಮಕ್ಕಳನ್ನು ನಿಭಾಯಿಸಲು ವಿಶೇಷ ತರಬೇತಿಯ ಅಗತ್ಯವಿದೆ.ಅವರಿಗೆ ಪದೇ ಪದೇ ಹೇಳಬೇಕು, ಚಟುವಟಿಕೆಗಳನ್ನು ಗಮನಿಸುತ್ತಿರಬೇಕು. 18 ವರ್ಷದ ಸಂದೇಶ ಐದು ವರ್ಷಗಳಿಂದ ನನ್ನ ಜೊತೆಯಿದ್ದಾನೆ. ಸ್ಪರ್ಧೆಗಳಿಗಾಗಿ ಬೇರೆ ಬೇರೆ ಕಡೆಗಳಿಗೆ ಜತೆಯಾಗಿ ಓಡಾಡಿರುವ ಕಾರಣ ಇಬ್ಬರಿಗೂ ಹೊಂದಾಣಿಕೆಯಾಗುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ, ಜೊತೆಗೆ ಇರುವವರು ನಮ್ಮವರು ಎಂಬ ಭಾವನೆ ಬಂದಾಗ ಎಲ್ಲವೂ ಸರಳವಾಗಿ ಸಾಗುತ್ತದೆ. ಹಾಗಾಗಿ ಅವನನ್ನು ಅಬುಧಾಬಿಗೆ ಸ್ಪರ್ಧೆಗೆ ಕರೆದುಕೊಂಡು ಹೋಗುವುದು ಒತ್ತಡ ಎನಿಸಲಿಲ್ಲ’ ಎನ್ನುತ್ತಾರೆ ಸಿರಿಲ್ ಲೋಪಿಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.