ADVERTISEMENT

ಟೇಬಲ್ ಟೆನಿಸ್ ಕೋಚ್ ಪುರುಷೋತ್ತಮ್ ರಾವ್ ನಿಧನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 23:30 IST
Last Updated 19 ಆಗಸ್ಟ್ 2025, 23:30 IST
ಜೆ.ಪುರುಷೋತ್ತಮ ರಾವ್
ಜೆ.ಪುರುಷೋತ್ತಮ ರಾವ್   

ಬೆಂಗಳೂರು/ಹುಬ್ಬಳ್ಳಿ: ಟೇಬಲ್ ಟೆನಿಸ್ ಕೋಚ್, ರೆಫರಿ ಮತ್ತು  ರೈಲ್ವೆ ತಂಡದ ಮಾಜಿ ಆಟಗಾರ ಜೆ. ಪುರುಷೋತ್ತಮ ರಾವ್ (90) ಸೋಮವಾರ ಸಂಜೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಇದ್ದಾರೆ.  

80ರ ದಶಕದಲ್ಲಿ ಅವರು ಅಖಿಲ ಭಾರತ ರೈಲ್ವೆ ತಂಡವನ್ನು ಪ್ರತಿನಿಧಿಸಿದ್ದರು. ನಿವೃತ್ತಿಯ ನಂತರ ಟೇಬಲ್ ಟೆನಿಸ್‌ ತರಬೇತುದಾರರಾಗಿ ಹಲವು ಪ್ರತಿಭಾನ್ವಿತರಿಗೆ ಮಾರ್ಗದರ್ಶನ ನೀಡಿದ್ದರು. 

‘ನನಗೆ ಪುರುಷೋತ್ತಮ್ ಅವರು 1974ರಿಂದಲೂ ಪರಿಚಯ. ಟೇಬಲ್ ಟೆನಿಸ್ ಎಂದರೆ ಅವರಿಗೆ ಅಪಾರ ಪ್ರೀತಿ. ರೈಲ್ವೆ ಉದ್ಯೋಗಿಯಾಗಿದ್ದರು. ಅವರು ಟೇಬಲ್ ಟೆನಿಸ್ ಕಲಿಯಲು ಹುಬ್ಬಳ್ಳಿಯಿಂದ ಧಾರವಾಡಕ್ಕೆ ಸೈಕಲ್‌ನಲ್ಲಿ ಹೋಗುತ್ತಿದ್ದರು. ರಾಷ್ಟ್ರೀಯ ಟೂರ್ನಿಯಲ್ಲಿ ಅವರು ಶ್ರೇಯಾಂಕರಹಿತ ಆಟಗಾರರಾಗಿಯೂ 1 ರಿಂದ 8 ರ‍್ಯಾಂಕ್‌ನಲ್ಲಿರುವ ಎಲ್ಲ ಆಟಗಾರರ ವಿರುದ್ಧವೂ ಮೇಲುಗೈ ಸಾಧಿಸಿದ್ದರು.  ಅವರ ಮಾರ್ಗದರ್ಶನದಲ್ಲಿ ಬೆಳೆದ ರವಿ ವರ್ಮಾ, ರೂಪೇಶ್ ಸಿಂಘಾಲ್ ಮತ್ತಿತರರು ರಾಜ್ಯ ತಂಡದಲ್ಲಿ ಆಡಿದರು. ಪ್ರಸ್ತುತ ಧಾರವಾಡ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ (ಡಿಡಿಟಿಟಿಎ) ಜೀವಮಾನ ಗೌರವ ಅಧ್ಯಕ್ಷರಾಗಿದ್ದರು’ ಎಂದು ಡಿಡಿಟಿಟಿಎ ಅಧ್ಯಕ್ಷ ಟಿ.ಜಿ. ಉಪಾಧ್ಯೆ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.