ADVERTISEMENT

ಇಂಡಿಯನ್ ಓಪನ್ ಅಥ್ಲೆಟಿಕ್‌ ಕೂಟ ಇಂದು: ತೇಜಸ್ವಿನ್‌, ತಜಿಂದರ್ ಮೇಲೆ ಗಮನ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 16:29 IST
Last Updated 27 ಜೂನ್ 2025, 16:29 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಏಪ್ರಿಲ್‌ನಿಂದ ದೇಶದ ನಾಲ್ಕು ಕಡೆ ನಡೆದಿರುವ ಇಂಡಿಯನ್ ಓಪನ್ ಅಥ್ಲೆಟಿಕ್‌ ಕೂಟ ಇದೀಗ– ಶನಿವಾರ ನಗರದ  ಶ್ರೀಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ವರ್ಷದ ಮಧ್ಯದಲ್ಲಿ ನಡೆಯುವ ಈ ಚಾಂಪಿಯನ್‌ಷಿಪ್‌ನಲ್ಲಿ ಕೆಲವು ಪ್ರಮುಖ ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ.

ಏಪ್ರಿಲ್‌ ತಿಂಗಳಿನಲ್ಲಿ ಪಂಜಾಬಿನ ಸಂಗ್ರೂರ್‌, ಗುಜರಾತ್‌ನ ನಡಿಯಾಡ್‌, ಜಾರ್ಖಂಡ್‌ನ ರಾಂಚಿ ಮತ್ತು ತಮಿಳುನಾಡಿನ ಚೆನ್ನೈನಲ್ಲಿ ಮೊದಲ ನಾಲ್ಕು ಕೂಟಗಳು ನಡೆದಿದ್ದವು. ಭಾರತ ಅಥ್ಲೆಟಿಕ್‌ ಫೆಡರೇಷನ್ ಕಾರ್ಯಕ್ರಮ ಪಟ್ಟಿಯ ಪ್ರಕಾರ ಇಂಥ ಎಂಟು ಕೂಟಗಳು ನಿಗದಿಯಾಗಿವೆ.

ADVERTISEMENT

ಷಾಟ್‌ಪಟ್‌ನಲ್ಲಿ ಒಲಿಂಪಿಯನ್ ತಜಿಂದರ್‌ಪಾಲ್‌ ಸಿಂಗ್ ತೂರ್‌ ಪಾಲ್ಗೊಳ್ಳುವುದನ್ನು ಖಚಿತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ದಾಖಲೆ ಸುಧಾರಿಸಿರುವ ಮಧ್ಯಮ ಅಂತರದ ಓಟಗಾರ ಮೊಹಮ್ಮದ್‌ ಅಫ್ಸಲ್ ಅವರು ಪುರುಷರ 800 ಮೀ. ಓಟದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದಾರೆ.

2 ಸ್ಪರ್ಧಿಗಳಲ್ಲಿ ತೇಜಸ್ವಿನ್‌:

ಕೆಲ ಸಮಯದಿಂದ ಡೆಕಾತ್ಲಾನ್‌ನಲ್ಲಿ ಸ್ಪರ್ಧಿಸುತ್ತಿರುವ ತೇಜಸ್ವಿನ್ ಶಂಕರ್‌ ಇಲ್ಲಿ ತಮ್ಮ ನೆಚ್ಚಿನ ಸ್ಪರ್ಧೆಯಾದ ಹೈಜಂಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಅವರು ದಕ್ಷಿಣ ಕೊರಿಯಾದ ಗುಮಿಯಲ್ಲಿ ಕಳೆದ ತಿಂಗಳು ನಡೆದ ಏಷ್ಯನ್ ಚಾಂಪಿಯನ್‌ಷಿಪ್‌ನ ಡೆಕಾತ್ಲಾನ್‌ನಲ್ಲಿ ಬೆಳ್ಳಿ ಗೆದ್ದಿದ್ದರು.

ಹೈಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆ (2.29 ಮೀ.) ಹೊಂದಿರುವ 26 ವರ್ಷ ವಯಸ್ಸಿನ ತೇಜಸ್ವಿನ್ ಈ ಕೂಟದಲ್ಲಿ ಜೆಎಸ್‌ಡಬ್ಲ್ಯು ತಂಡವನ್ನು ಪ್ರತಿನಿಧಿಸಲಿದ್ದಾರೆ. ಅವರಿಗೆ ಸರ್ವೇಶ್‌ ಅನಿಲ್‌ ಕುಶಾರೆ ಅವರಿಂದ ಪೈಪೋಟಿ ಎದುರಾಗಬಹುದು. ಮಹಾರಾಷ್ಟ್ರದ ಸರ್ವೇಶ್‌, ಕೊಚ್ಚಿಯಲ್ಲಿ ನಡೆದ 28ನೇ ರಾಷ್ಟ್ರೀಯ ಫೆಡರೇಷನ್‌ ಸೀನಿಯರ್ ಕೂಟದಲ್ಲಿ 2.26 ಮೀ. ಜಿಗಿದು ರಾಷ್ಟ್ರೀಯ ದಾಖಲೆ ಸಮೀಪಕ್ಕೆ ಬಂದಿದ್ದರು.

ಅಮೆರಿಕದಲ್ಲಿ ನೆಲೆಸಿರುವ ತೇಜಸ್ವಿನ್‌ ಅವರು ಪುರುಷರ 110 ಮೀ. ಹರ್ಡಲ್ಸ್‌ನಲ್ಲೂ ಸ್ಪರ್ಧಿಸಲಿದ್ದಾರೆ.

ಮಹಿಳಾ ವಿಭಾಗದಲ್ಲಿ ಆರ್‌.ವಿದ್ಯಾ ರಾಮರಾಜ್ 400 ಮೀ. ಹರ್ಡಲ್ಸ್‌ ಓಟ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿದ್ದಾರೆ. ಅವರು ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.

ಇನ್ನು, ಕರ್ನಾಟಕದ 27 ವರ್ಷ ವಯಸ್ಸಿನ ಎಸ್‌.ಎಸ್‌.ಸ್ನೇಹಾ 100 ಮೀ. ಓಟದಲ್ಲಿ ಪ್ರಶಸ್ತಿಗೆ ಯತ್ನಿಸಲಿದ್ದಾರೆ. ಅವರ ಜೊತೆಗೆ ಆರ್ಯನ್ ಮನೋಜ್ (100 ಮೀ. ಓಟ) ಮತ್ತು ಅಭಿನ್‌ ಬಿ. ದೇವಾಡಿಗ (200 ಮೀ. ಓಟ) ಅವರೂ ತವರಿನ ಪ್ರೇಕ್ಷಕರ ಮುಂದೆ ಉತ್ತಮ ಪ್ರದರ್ಶನ ನೀಡುವ ತವಕದಲ್ಲಿದ್ದಾರೆ. ರಾಜ್ಯ ಸೀನಿಯರ್ ಕೂಟದಲ್ಲಿ ಆರ್ಯನ್ ಮತ್ತು ಅಭಿನ್ ತಮ್ಮ ಸ್ಪರ್ಧಿಗಳಲ್ಲಿ ಅಗ್ರಸ್ಥಾನ ಪಡೆದಿದ್ದರು.

ಮಹಿಳೆಯರ 100 ಮೀ. ಓಟದಲ್ಲಿ ಸ್ನೇಹಾ ಅಲ್ಲದೇ, ತೆಲಂಗಾಣದ ನಿತ್ಯಾ ಗಂಧೆ, ಸ್ಥಳೀಯರಾದ ವಿ.ಸುಧೀಕ್ಷಾ, ದಾನೇಶ್ವರಿ ಎ.ಟಿ. ಅವರೂ ಕಣದಲ್ಲಿದ್ದಾರೆ.

ಟ್ರಿಪಲ್‌ಜಂಪ್‌ನಲ್ಲಿ ಜೆಸ್ಸಿ ಸಂದೇಶ್ ಅವರೂ ಪದಕದ ಭರವಸೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.