ADVERTISEMENT

Tokyo Olympics | ಎರಡು ಬಾರಿಯ ಚಾಂಪಿಯನ್ ವಿರುದ್ಧ ಅತನು ದಾಸ್ ಜಯಭೇರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜುಲೈ 2021, 4:50 IST
Last Updated 29 ಜುಲೈ 2021, 4:50 IST
ಅತನು ದಾಸ್
ಅತನು ದಾಸ್   

ಟೋಕಿಯೊ: ಎರಡು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ವಿರುದ್ಧ ಗೆಲುವು ದಾಖಲಿಸಿರುವ ಭಾರತದ ಬಿಲ್ಲುಗಾರ ಅತನು ದಾಸ್ ಪ್ರಿ-ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗುರುವಾರ ನಡೆದ ಆರ್ಚರಿ ಪುರುಷರ ವೈಯಕ್ತಿಕ ವಿಭಾಗದಲ್ಲಿ ಅತನು ದಾಸ್, ವಿಶ್ವ ನಂ.3 ರ‍್ಯಾಂಕ್‌ನ ದಕ್ಷಿಣ ಕೊರಿಯಾದ ಓಹ್ ಜಿನ್ ಹಿಯೆಕ್ ವಿರುದ್ಧ 6-5ರ ಅಂತರದ ರೋಚಕ ಗೆಲುವು ದಾಖಲಿಸಿದರು.

ಕಳೆದ ದಿನವಷ್ಟೇ 29 ವರ್ಷದ ಅತನು ದಾಸ್ ಅವರ ಪತ್ನಿ ದೀಪಿಕಾ ಕುಮಾರಿ, ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಪ್ರಿ-ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದರು. ವಿಶ್ವದ ಅಗ್ರ ಶ್ರೇಯಾಂಕಿತೆ ದೀಪಿಕಾ ಕುಮಾರಿ ಭಾರತದ ಭರವಸೆಯಾಗಿದ್ದಾರೆ.

ಅತ್ತ ಭಾರತದ ಅಗ್ರ ಬಿಲ್ಲುಗಾರ ಅತನು ದಾಸ್, ಮೊದಲ ಸುತ್ತಿನಲ್ಲಿ ಚೀನಾ ತೈಪೆಯ ಯೂ-ಚೆಂಗ್ ವಿರುದ್ಧ ಗೆಲುವು ದಾಖಲಿಸಿದರು. ಬಳಿಕ ಅದೇ ಲಯ ಕಾಪಾಡಿಕೊಂಡು ಜಿನ್ ಹಿಯೆಕ್ ವಿರುದ್ಧವೂ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಹಾಗೂ ಕಂಚಿನ ಪದಕ ಸಾಧನೆ ಮಾಡಿರುವ ಜಿನ್ ಜಿಯೆಕ್, ಪ್ರಸ್ತುತ ಸಾಗುತ್ತಿರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತಂಡ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.