ADVERTISEMENT

Tokyo Olympics: ಜರ್ಮನಿಗೆ ಶರಣಾದ ಭಾರತ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 19:31 IST
Last Updated 26 ಜುಲೈ 2021, 19:31 IST
ಜರ್ಮನಿಯ ನೈಕಿ ಲೊರೆಂಜ್‌ (ಬಲ) ಹಾಗೂ ಭಾರತದ ವಂದನಾ ಕಟಾರಿಯಾ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರು –ಎಎಫ್‌ಪಿ ಚಿತ್ರ
ಜರ್ಮನಿಯ ನೈಕಿ ಲೊರೆಂಜ್‌ (ಬಲ) ಹಾಗೂ ಭಾರತದ ವಂದನಾ ಕಟಾರಿಯಾ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರು –ಎಎಫ್‌ಪಿ ಚಿತ್ರ   

ಟೋಕಿಯೊ: ಸಿಕ್ಕ ಅವಕಾಶಗಳನ್ನು ಸುಲಭವಾಗಿ ಕೈಚೆಲ್ಲಿದ ಭಾರತದ ಮಹಿಳಾ ಹಾಕಿ ತಂಡದವರು ಟೋಕಿಯೊ ಕೂಟದಲ್ಲಿ ಮತ್ತೆ ನಿರಾಸೆ ಕಂಡರು.

ಒಯಿ ಹಾಕಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ‘ಎ’ ಗುಂಪಿನ ತನ್ನ ಎರಡನೇ ಪಂದ್ಯದಲ್ಲಿ ರಾಣಿ ರಾಂಪಾಲ್‌ ಬಳಗ 0–2 ಗೋಲುಗಳಿಂದ ಜರ್ಮನಿ ಎದುರು ಪರಾಭವಗೊಂಡಿತು. ಮೊದಲ ಪಂದ್ಯದಲ್ಲಿ ತಂಡವು 1–5 ಗೋಲುಗಳಿಂದ ನೆದರ್ಲೆಂಡ್ಸ್‌ಗೆ ಶರಣಾಗಿತ್ತು.

ರಾಣಿ ಪ‍ಡೆಗೆ ಈ ಪಂದ್ಯದಲ್ಲಿ ಅದೃಷ್ಟ ಕೈಹಿಡಿಯಲಿಲ್ಲ. ಸಿಕ್ಕ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಲು ಆಟಗಾರ್ತಿಯರು ವಿಫಲರಾದರು. ಮೂರನೇ ಕ್ವಾರ್ಟರ್‌ನಲ್ಲಿ ಲಭಿಸಿದ ಪೆನಾಲ್ಟಿ ಸ್ಟ್ರೋಕ್‌ ಅವಕಾಶವನ್ನು ಗುರ್ಜಿತ್‌ ಕೌರ್‌ ಹಾಳು ಮಾಡಿದರು.

ADVERTISEMENT

ವಿಶ್ವ ರ‍್ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿರುವ ಜರ್ಮನಿಗೆ ಮೊದಲ ಕ್ವಾರ್ಟರ್‌ನ ಆರಂಭದಲ್ಲಿ ಪ್ರಬಲ ಪ್ರತಿರೋಧ ಎದುರಾಯಿತು. ಹೀಗಿದ್ದರೂ ಎದುರಾಳಿ ತಂಡದ ನಾಯಕಿ ನೈಕಿ ಲೊರೆಂಜ್‌ 12ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. 35ನೇ ನಿಮಿಷದಲ್ಲಿ ಆ್ಯನಾ ಶ್ರೋಡರ್‌ ಗೋಲು ಬಾರಿಸಿ ತಂಡದ ಗೆಲುವನ್ನು ಖಾತ್ರಿ ಪಡಿಸಿದರು. ಭಾರತದ ಗೋಲ್‌ಕೀಪರ್‌ ಸವಿತಾ, ಬ್ರಿಟನ್‌ ಆಟಗಾರ್ತಿಯರ ಅನೇಕ ಪ್ರಯತ್ನಗಳನ್ನು ವಿಫಲಗೊಳಿಸಿ ಗಮನಸೆಳೆದರು.

ತನ್ನ ಮೂರನೇ ಪಂದ್ಯದಲ್ಲಿ ಭಾರತವು ಬ್ರಿಟನ್‌ ಎದುರು ಸೆಣಸಲಿದೆ. ಈ ಹೋರಾಟ ಬುಧವಾರ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.