ADVERTISEMENT

ಟೇಬಲ್ ಟೆನಿಸ್‌ನಲ್ಲಿ ಪದಕದ ಭರವಸೆ

ಟೋಕಿಯೊ ಒಲಿಂಪಿಕ್ಸ್‌ 2020 ಭಾರತದ ಕನಸಿನ ಪಯಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜುಲೈ 2021, 18:24 IST
Last Updated 19 ಜುಲೈ 2021, 18:24 IST
ಮಣಿಕಾ ಬಾತ್ರಾ (ಪಿಟಿಐ)
ಮಣಿಕಾ ಬಾತ್ರಾ (ಪಿಟಿಐ)   

ಎಲ್ಲ ಎಂಟು ಆವೃತ್ತಿಗ ಳಲ್ಲಿ ಪಾಲ್ಗೊಂಡಿದ್ದರೂ ಟೇಬಲ್ ಟೆನಿಸ್ ಕ್ರೀಡೆಯಲ್ಲಿ ಭಾರತಕ್ಕೆ ಒಲಿಂಪಿಕ್ಸ್ ಪದಕ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಚೀನಾ, ಉತ್ತರ–ದಕ್ಷಿಣ ಕೊರಿಯಾ, ಜಪಾನ್, ಜರ್ಮನಿ ಮುಂತಾದ ದೇಶಗಳ ಟೇಬಲ್ ಟೆನಿಸ್ ಪಟುಗಳು ಪ್ರತಿ ಬಾರಿಯೂ ಸಾಮರ್ಥ್ಯ ತೋರಿ ಪದಕಗಳನ್ನು ಗೆದ್ದು ಸಂಭ್ರಮಿಸುವಾಗ ಭಾರತದ ಪ್ರತಿನಿಧಿಗಳು ಬರಿಗೈಯಲ್ಲಿ ವಾಪಸ್ ಬಂದಿದ್ದಾರೆ. ನಿರಾಸೆಯನ್ನು ಮರೆತು ಪದಕಕ್ಕೆ ಮುತ್ತನ್ನಿಡುವ ನಿರೀಕ್ಷೆಯಲ್ಲಿ ಈ ಬಾರಿ ನಾಲ್ವರು ಟೋಕಿಯೊಗೆ ಪ್ರಯಾಣ ಬೆಳೆಸಿದ್ದಾರೆ.

ವಯಸ್ಸಿನಲ್ಲೂ ಅನುಭವದಲ್ಲೂ ಹಿರಿಯರಾಗಿರುವ ಅಚಂತಾ ಶರತ್ ಕಮಲ್ ನೇತೃತ್ವದಲ್ಲಿ ಮಣಿಕಾ ಭಾತ್ರ, ಗಣೇಶ್ವರನ್‌ ಸತ್ಯನ್ ಮತ್ತು ಸುತೀರ್ಥ ಮುಖರ್ಜಿ ಅವರು ಜಪಾನ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಡುವ ಹುಮ್ಮಸ್ಸಿನಲ್ಲಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಟೇಬಲ್ ಟೆನಿಸ್ ಕ್ರೀಡೆ ಸ್ಥಾನ ಪಡೆದುಕೊಂಡದ್ದು 1988ರ ಸೋಲ್‌ ಕ್ರೀಡಾಕೂಟದಲ್ಲಿ. 2008ರ ಬೀಜಿಂಗ್ ಕೂಟದ ವರೆಗೆ ಪುರುಷ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದ ಸ್ಪರ್ಧೆಗಳು ಮಾತ್ರ ಇದ್ದವು. ಅನಂತರ ತಂಡ ವಿಭಾಗವನ್ನೂ ಸೇರಿಸಲಾಯಿತು. ಈ ಬಾರಿ ಮಿಶ್ರ ಡಬಲ್ಸ್ ವಿಭಾಗವೂ ಸೇರಿಕೊಂಡಿದೆ.

ADVERTISEMENT

20ನೇ ಶತಮಾನದ ಮಧ್ಯಭಾಗದ ವರೆಗೂ ಯುರೋಪ್‌ನ ಹಂಗೇರಿ, ಜೆಕ್ ಗಣರಾಜ್ಯ, ಆಸ್ಟ್ರಿಯಾ ಮತ್ತು ಜರ್ಮನಿ ದೇಶಗಳು ಟೇಬಲ್ ಟೆನಿಸ್‌ನಲ್ಲಿ ಪಾರಮ್ಯ ಮೆರೆದಿದ್ದವು. ಆದರೆ ಇದು ಒಲಿಂಪಿಕ್ ಕ್ರೀಡೆಯಾದ ನಂತರ ಚೀನಾ ಸಂಪೂರ್ಣ ಆಧಿಪತ್ಯ ಸ್ಥಾಪಿಸಿತು. ದಕ್ಷಿಣ ಕೊರಿಯಾ ಮತ್ತು ಜರ್ಮನಿಯ ಸಾಧನೆಯನ್ನೂ ಕಡೆಗಣಿಸುವಂತಿಲ್ಲ.

ಭಾರತ 1988ರಿಂದ ಪ್ರತಿ ಬಾರಿಯೂ ಈ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದೆ. ಈ ಪೈಕಿ ಮೂರು ಬಾರಿ ತಂಡದಲ್ಲಿ ಶರತ್ ಕಮಲ್ ಇದ್ದರು. ಇದು ಅವರಿಗೆ ನಾಲ್ಕನೇ ಒಲಿಂಪಿಕ್ಸ್‌. ಕಾಮನ್ವೆಲ್ತ್ ಗೇಮ್ಸ್‌ ಮತ್ತು ಏಷ್ಯನ್‌ ಗೇಮ್ಸ್‌ನಲ್ಲಿ ಅಮೋಘ ಸಾಧನೆ ಮಾಡಿರುವ ಮಣಿಕಾ ಭಾತ್ರ ಮಿಶ್ರ ಡಬಲ್ಸ್‌ನಲ್ಲಿ ಶರತ್ ಕಮಲ್ ಅವರ ಜೋಡಿ. ಭಾರತ, ಟೇಬಲ್‌ ಟೆನಿಸ್‌ನ ಎರಡಕ್ಕಿಂತ ಹೆಚ್ಚು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿರುವುದು ಕೂಡ ಇದೇ ಮೊದಲು. ಶರತ್ ಕಮಲ್ ಮತ್ತು ಮಣಿಕಾ 2018ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.

ಸತ್ಯನ್ ಮೊದಲ ಬಾರಿ ಒಲಿಂಪಿಕ್ಸ್‌ಗೆ ಆಯ್ಕೆಯಾಗಿ
ದ್ದಾರೆ. ಮಣಿಕಾ ಮತ್ತು ಸುತೀರ್ಥ ಮೇಲೆಯೂ ಭರವಸೆ ಇದೆ. ಆದರೆ ಮಿಶ್ರ ಡಬಲ್ಸ್‌ನಲ್ಲಿ ಭಾರತ ಪದಕ ಗೆಲ್ಲುವ ಸಾಧ್ಯತೆ ಹೆಚ್ಚು ಇದೆ. ತಜ್ಞರ ಅಭಿಪ್ರಾಯ ಮತ್ತು ದೇಶದ ನಿರೀಕ್ಷೆ ಟೇಬಲ್‌ ಮೇಲೆ ನಿಜವಾಗುವುದೇ ಎಂಬ ಕುತೂಹಲ ಗರಿಗೆದರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.