ADVERTISEMENT

ಟೋಕಿಯೊ ಒಲಿಂಪಿಕ್ಸ್‌ಗೆ ಕೋವಿಡ್ ಕರಿನೆರಳು: 6 ತಿಂಗಳಲ್ಲೇ ಗರಿಷ್ಠ ಸೋಂಕು ಪ್ರಕರಣ

ಏಜೆನ್ಸೀಸ್
Published 22 ಜುಲೈ 2021, 1:22 IST
Last Updated 22 ಜುಲೈ 2021, 1:22 IST
ಟೋಕಿಯೊ ಒಲಿಂಪಿಕ್ಸ್ (ಸಾಂದರ್ಭಿಕ ಚಿತ್ರ)
ಟೋಕಿಯೊ ಒಲಿಂಪಿಕ್ಸ್ (ಸಾಂದರ್ಭಿಕ ಚಿತ್ರ)   

ಟೋಕಿಯೊ: ಬಹುನಿರೀಕ್ಷಿತ ಒಲಿಂಪಿಕ್ಸ್ ಆರಂಭಕ್ಕೆ ಇನ್ನೇನು ಒಂದು ದಿನ ಮಾತ್ರ ಬಾಕಿ ಉಳಿದಿರುವಂತೆಯೇ ಕ್ರೀಡಾಕೂಟ ಆಯೋಜನೆಯ ಟೋಕಿಯೊ ನಗರಕ್ಕೆ ಕೋವಿಡ್ ಕರಿನೆರಳು ಬಿದ್ದಿದೆ.

ಟೋಕಿಯೊದಲ್ಲಿ ಕಳೆದ ಆರು ತಿಂಗಳಲ್ಲೇ ಗರಿಷ್ಠ ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿವೆ. ಒಲಿಂಪಿಕ್ ಆರಂಭಕ್ಕೆ ಎರಡು ದಿನಗಳ ಮೊದಲು 1,832 ಸೋಂಕು ಪ್ರಕರಣಗಳು ಪತ್ತೆಯಾಗಿವೆ.

'ನಾವು ಯಾವುದರ ಬಗ್ಗೆ ಭಯಪಟ್ಟಿದೆಯೋ ಅದೀಗ ಸಂಭವಿಸುತ್ತಿದೆ. ಒಲಿಂಪಿಕ್ಸ್ ಆಯೋಜನೆ ಮಾಡಿದರೂ, ಇಲ್ಲದಿದ್ದರೂ ಕೋವಿಡ್ ಪ್ರಕರಣಗಳ ಹೆಚ್ಚಳದ ಬಗ್ಗೆ ಆತಂಕವಿತ್ತು' ಎಂದು ಜಪಾನ್ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷ ತೊಷಿಯೊ ನಕಗವ ಹೇಳಿದ್ದಾರೆ.

ಜಪಾನ್‌ನಲ್ಲಿ ಕೋವಿಡ್ ಲಸಿಕೆಯ ಸರಬರಾಜಿನ ಅನಿಶ್ಚಿತತೆಯಿಂದಾಗಿ ಯುವ ಜನಾಂಗ ಹಾಗೂ ಲಸಿಕೆ ಹಾಕಿಸಿಕೊಳ್ಳದ ಜನರಲ್ಲಿ ಸೋಂಕಿನ ಪ್ರಕರಣ ಹೆಚ್ಚುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜಪಾನ್‌ನಲ್ಲಿ ಲಸಿಕೆ ಅಭಿಯಾನ ತಡವಾಗಿ ಮತ್ತು ನಿಧಾನವಾಗಿ ಆರಂಭವಾಗಿದ್ದವು. ಒಲಿಂಪಿಕ್ಸ್‌ಗೂ ಮುನ್ನ ಲಸಿಕೆ ಪೂರೈಕೆಗೆ ಹೆಚ್ಚಿನ ವೇಗ ನೀಡಲಾಗಿದೆ. ಶೇಕಡಾ 23ರಷ್ಟು ಜಪಾನಿಯರಿಗೆ ಸಂಪೂರ್ಣವಾಗಿ ಲಸಿಕೆ ಹಾಕಿಸಲಾಗಿದೆ.

'ಮುಂಬರುವ ದಿನಗಳಲ್ಲಿ ಟೋಕಿಯೊದಲ್ಲಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದ್ದು, ದೈನಂದಿನ 2,600 ಸೋಂಕು ಪ್ರಕರಣ ದಾಖಲಾಗುವ ಸಾಧ್ಯತೆಯಿದೆ' ಎಂದು ಟೋಕಿಯೊ ಮೆಟ್ರೋಪಾಲಿಟನ್ ಸರ್ಕಾರಿ ತಜ್ಞರು ಎಚ್ಚರಿಸಿದ್ದಾರೆ.

ಜನರ ಆರೋಗ್ಯವನ್ನು ಕಡೆಗಣಿಸಿ ಒಲಿಂಪಿಕ್ ಆಯೋಜನೆಗೆ ಆದ್ಯತೆ ನೀಡಿರುವುದಕ್ಕೆ ಪ್ರಧಾನಿ ಯೋಶಿಹಿದೆ ಸುಗಾ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ. ಅಲ್ಲದೆ ಇತ್ತೀಚಿನ ಅಧ್ಯಯನ ಪ್ರಕಾರ, ಅವರ ಬೆಂಬಲ ರೇಟಿಂಗ್ ಶೇಕಡಾ 30ಕ್ಕೆ ಕುಸಿದಿದೆ.

ಟೋಕಿಯೊ ಒಲಿಂಪಿಕ್ಸ್ ಜುಲೈ 23ರಿಂದ ಆರಂಭವಾಗಿ ಆಗಸ್ಟ್ 8ರ ವರೆಗೆ ನಡೆಯಲಿದೆ. ಅಲ್ಲದೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಕ್ರೀಡಾಕೂಟವು ಬಹುತೇಕ ಮುಚ್ಚಿದ ಕ್ರೀಡಾಂಗಣಗಳಲ್ಲಿ ಆಯೋಜನೆಯಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.