ADVERTISEMENT

ಪಾರದರ್ಶಕತೆ ತಂದಿರುವುದರಿಂದಲೇ ಕ್ರೀಡಾ ಕ್ಷೇತ್ರ ಯಶಸ್ಸಿನ ಹಾದಿಯಲ್ಲಿದೆ: ಮೋದಿ

ಪಿಟಿಐ
Published 15 ಆಗಸ್ಟ್ 2022, 11:14 IST
Last Updated 15 ಆಗಸ್ಟ್ 2022, 11:14 IST
   

ನವದೆಹಲಿ: ‘ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರೀಯ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತಂದಿರುವುದರಿಂದಲೇ ಕ್ರೀಡಾಕ್ಷೇತ್ರದಲ್ಲಿ ನಮ್ಮ ದೇಶ ಯಶಸ್ಸಿನ ಹಾದಿಯಲ್ಲಿ ಮುನ್ನಡೆದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

‘ಸ್ವಜನಪಕ್ಷಪಾತದ ನಕಾರಾತ್ಮಕ ಪರಿಣಾಮ ರಾಜಕೀಯಕ್ಕೆ ಮಾತ್ರ ಸೀಮಿತವಾಗಿರದೆ ಒಂದು ಕಾಲದಲ್ಲಿ ಕ್ರೀಡಾ ಕ್ಷೇತ್ರದ ಮೇಲೂ ತನ್ನ ಪರಿಣಾಮ ಬೀರಿದೆ’ ಎಂದು ಸ್ವಾತಂತ್ರ್ಯೋ‌ತ್ಸವ ದಿನದ ಭಾಷಣದಲ್ಲಿ ಸೋಮವಾರ ತಿಳಿಸಿದರು.

‘ತಂಡಗಳ ಆಯ್ಕೆಯಲ್ಲಿ ಪಾರದರ್ಶಕತೆಯ ಕೊರತೆಯಿತ್ತು. ಇದರಿಂದ ನಮ್ಮ ಕ್ರೀಡಾಪಟುಗಳ ಪ್ರತಿಭೆಯು ವ್ಯರ್ಥವಾಗಿ ಹೋಗುತ್ತಿತ್ತು’ ಎಂದರು.

ADVERTISEMENT

‘ಅರ್ಹತೆ ಇದ್ದವರು ತಂಡಕ್ಕೆ ಆಯ್ಕೆಯಾಗಲು ಸಾಕಷ್ಟು ಕಷ್ಟಪಡಬೇಕಾಗುತ್ತಿತ್ತು. ಈಗ ಪರಿಸ್ಥಿತಿಯಲ್ಲಿ ಬದಲಾವಣೆ ಉಂಟಾಗಿದೆ. ನಮ್ಮ ಕ್ರೀಡಾಪಟುಗಳು ಯಶಸ್ಸು ಸಾಧಿಸುತ್ತಿದ್ದಾರೆ. ಚಿನ್ನ ಮತ್ತು ಬೆಳ್ಳಿ ಪದಕಗಳ ಹೊಳಪು ಯುವಜನರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದೆ’ ಎಂದು ಕ್ರೀಡಾಪಟುಗಳ ಸಾಧನೆಯನ್ನು ಕೊಂಡಾಡಿದರು.

‘ಇದು ಆರಂಭ ಮಾತ್ರ. ಮುಂದಿನ ದಿನಗಳಲ್ಲಿ ನಮ್ಮ ಕ್ರೀಡಾಪಟುಗಳು ಇನ್ನಷ್ಟು ಪದಕಗಳನ್ನು ಗೆದ್ದುಕೊಂಡು ಬರಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇತ್ತೀಚೆಗೆ ಕೊನೆಗೊಂಡ ಕಾಮನ್‌ವೆಲ್ತ್‌ ಕೂಟದಲ್ಲಿ ಭಾರತ, 22 ಚಿನ್ನ ಸೇರಿದಂತೆ ಒಟ್ಟು 61 ಪದಕಗಳನ್ನು ಗೆದ್ದುಕೊಂಡಿತ್ತು. ಕಳೆದ ವರ್ಷ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಏಳು ಪದಕ ಜಯಿಸಿತ್ತು.

ಕಾಮನ್‌ವೆಲ್ತ್‌ ಕೂಟದಲ್ಲಿ ಪದಕ ಗೆದ್ದ ಅಥ್ಲೀಟ್‌ಗಳ ಸಾಧನೆಯನ್ನು ಪ್ರಧಾನಿ ಅವರು ಶ್ಲಾಘಿಸಿದ್ದರು. ಔತಣಕೂಟ ಆಯೋಜಿಸಿ ಅವರನ್ನು ಅಭಿನಂದಿಸಿದ್ದರು.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.