ನವದೆಹಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಪ್ರವೀಣ್ ಕುಮಾರ್ ಅವರು ಶನಿವಾರ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಟಿ64 ಹೈಜಂಪ್‌ನಲ್ಲಿ ಚಿನ್ನ ಗೆಲ್ಲಲಾಗದಿದ್ದರೂ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಕ್ಲಬ್ ಥ್ರೊನಲ್ಲಿ ಏಕತಾ ಭ್ಯಾನ್ ಬೆಳ್ಳಿ ಗೆದ್ದರು.
ಭಾರತದ ಅಥ್ಲೀಟುಗಳು ಒಂಬತ್ತನೇ ದಿನವಾದ ಶನಿವಾರ ಒಟ್ಟು ಮೂರು ಪದಕಗಳನ್ನು ಪಡೆದರು. ಆದರೆ ಬಂಗಾರ ಒಲಿಯಲಿಲ್ಲ.
ಭಾನುವಾರ ಈ ಕೂಟದ ಕೊನೆಯ ದಿನವಾಗಿದ್ದು, ಆತಿಥೇಯ ತಂಡ ಈಗಾಗಲೇ 18 ಪದಕಗಳನ್ನು ಗೆದ್ದುಕೊಂಡು ಪದಕಪಟ್ಟಿಯಲ್ಲಿ ಇದುವರೆಗಿನ ಅತ್ಯುತ್ತಮ ಸಾಧನೆ ದಾಖಲಿಸಿದೆ. ಇದರಲ್ಲಿ ಆರು ಚಿನ್ನ, ಏಳು ಬೆಳ್ಳಿ, ಐದು ಕಂಚಿನ ಪದಕಗಳು ಒಳಗೊಂಡಿವೆ. ಬ್ರೆಜಿಲ್ 37 ಪದಕಗಳೊಡನೆ (12–18–7) ಅಗ್ರಸ್ಥಾನದಲ್ಲಿದೆ. ಭಾರತದ ಈ ಹಿಂದಿನ ಶ್ರೇಷ್ಠ ಸಾಧನೆ ಜಪಾನ್‌ನ ಕೋಬೆ (2024) ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ದಾಖಲಾಗಿತ್ತು. ಅಲ್ಲಿ 17 ಪದಕಗಳನ್ನು (6–5–6) ಗೆದ್ದುಕೊಂಡಿತ್ತು.
ಭಾರತಕ್ಕೆ ದಿನದ ಮೂರನೇ ಪದಕವನ್ನು ಪುರುಷರ ಷಾಟ್‌ಪಟ್ ಎಫ್57 ವಿಭಾಗದಲ್ಲಿ ಸೋಮನ್ ರಾಣಾ ತಂದುಕೊಟ್ಟರು. ಸೇನೆಯಲ್ಲಿರುವ 42 ವರ್ಷ ವಯಸ್ಸಿನ ಸೋಮನ್ 14.69 ಮೀ. ದೂರ ಎಸೆದರು. ಹಾಂಗ್‌ಝೌ ಏಷ್ಯನ್ ಕ್ರೀಡೆಗಳಲ್ಲಿ ಬೆಳ್ಳಿ ಗೆದ್ದಿದ್ದ ಅವರು ನಾಲ್ಕನೆ ಥ್ರೊನಲ್ಲಿ ಈ ದೂರ ದಾಖಲಿಸಿದರು. ಈ ವಿಭಾಗದಡಿ ಸ್ಪರ್ಧಿಗಳು ಕಾಲಿನ ಊನದಿಂದಾಗಿ ಕುಳಿತ ಸ್ಥಿತಿಯಲ್ಲೇ ಸ್ಪರ್ಧಿಸಬೇಕಾಗುತ್ತದೆ.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಪ್ರವೀಣ್ ಇಲ್ಲೂ ಫೇವರಿಟ್ ಆಗಿದ್ದರು. ಆದರೆ ಅವರು 2.00 ಮೀ. ಎತ್ತರ ಜಿಗಿಯಲು ಮಾತ್ರ ಸಾಧ್ಯವಾಯಿತು. ಉಜ್ಬೇಕಿಸ್ತಾನದ ತೆಮುರ್ಬೆಕ್ ಗಿಯಾಝೋವ್ (2.03 ಮೀ.) ಚಿನ್ನ ಗೆದ್ದರು. ಬ್ರಿಟನ್‌ನ ಜೊನಾಥನ್ ಬ್ರೂಮ್–ಎಡ್ವರ್ಡ್ಸ್ ಸಹ 2.00 ಮೀ. ಜಿಗಿದರೂ ಬೆಳ್ಳಿ ಪಡೆದರು. 37 ವರ್ಷ ವಯಸ್ಸಿನ ಎಡ್ವರ್ಡ್ಸ್ ಮೊದಲ ಯತ್ನದಲ್ಲೇ 2.00 ಮೀ. ಜಿಗಿದರೆ, ಪ್ರವೀಣ್ ಎರಡನೇ ಯತ್ನದಲ್ಲಿ ಈ ಎತ್ತರ ದಾಖಲಿಸಿದ್ದರು.
‘10–12 ದಿನಗಳಿಂದ ಪೃಷ್ಠದ ನೋವು ಕಾಡುತ್ತಿದೆ. ಹೀಗಾಗಿ ರನ್‌ಅಪ್ ಕೂಡ ಮೊಟಕುಗೊಳಿಸಿದ್ದೆ’ ಎಂದು 22 ವರ್ಷ ವಯಸ್ಸಿನ ಪ್ರವೀಣ್ ಹೇಳಿದರು. ಈ ವಿಭಾಗದಲ್ಲಿ ಸ್ಪರ್ಧಿಸುವವರ ಒಂದು ಕಾಲು ಮಾತ್ರ ಸುಸ್ಥಿತಿಯಲ್ಲಿರುತ್ತದೆ.
ಭ್ಯಾನ್‌ಗೆ ಬೆಳ್ಳಿ: ಮಹಿಳೆಯರ ಎಫ್ 51 ಕ್ಲಬ್ ಥ್ರೊನಲ್ಲಿ ಏಕತಾ ಆರನೇ ಹಾಗೂ ಅಂತಿಮ ಯತ್ನದಲ್ಲಿ 19.80 ಮೀ. ದೂರ ದಾಖಲಿಸಿದರು. ಉಕ್ರೇನಿನ ಝೊಯಾ ಒವಿಸಿ (24.03 ಮೀ.) ಚಿನ್ನ ಗೆದ್ದರೆ, ತಟಸ್ಥ ದೇಶಗಳ ತಂಡದ ಏಕತೆರಿನಾ ಪೊಟಪೊವಾ (18.60 ಮೀ.) ಕಂಚು ಗೆದ್ದರು. ಕೈ ಅಥವಾ ಕಾಲುಗಳಲ್ಲಿ ಹೆಚ್ಚಿನ ಊನ ಇದ್ದವರು ಈ ವಿಭಾಗದಡಿ ಸ್ಪರ್ಧಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.