ADVERTISEMENT

Tokyo Olympics| ಗಮನ ಸೆಳೆದ ‘ಬಾಲಕಿ’ ಹೇಂಡ್ ಜಾಜಾ

ಏಜೆನ್ಸೀಸ್
Published 25 ಜುಲೈ 2021, 1:58 IST
Last Updated 25 ಜುಲೈ 2021, 1:58 IST
ಹೇಂಡ್ ಜಾಜಾ ಅವರ ಆಟದ ಶೈಲಿ –ರಾಯಿಟರ್ಸ್ ಚಿತ್ರ
ಹೇಂಡ್ ಜಾಜಾ ಅವರ ಆಟದ ಶೈಲಿ –ರಾಯಿಟರ್ಸ್ ಚಿತ್ರ   

ಟೋಕಿಯೊ: ಮೊದಲ ಸುತ್ತಿನಲ್ಲೇ ಸೋತರೂ ಬಾಲಕಿ, ಟೇಬಲ್ ಟೆನಿಸ್ ಆಟಗಾರ್ತಿ ಹೇಂಡ್ ಜಾಜಾ ಅವರು ಒಲಿಂಪಿಕ್ಸ್ ಅಂಗಣದಲ್ಲಿ ಗಮನ ಸೆಳೆದರು. ಯುದ್ಧಪೀಡಿತ ಸಿರಿಯಾದಿಂದ ಒಲಿಂಪಿಕ್ಸ್‌ಗೆ ಆಯ್ಕೆಯಾಗಿ ಕಳೆದ ವರ್ಷ ಅಚ್ಚರಿ ಮೂಡಿಸಿದ್ದ ಅವರಿಗೆ ಈಗ ಬರೀ 12 ವರ್ಷ ವಯಸ್ಸು.

ಟೋಕಿಯೊ ಒಲಿಂ‍ಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಅತಿ ಕಿರಿಯ ಮತ್ತು ಒಟ್ಟಾರೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಎರಡನೇ ಅತಿ ಕಿರಿಯ ಕ್ರೀಡಾಪಟು ಹೇಂಡ್ ಜಾಜಾ. ಒಲಿಂಪಿಕ್ಸ್‌ನಲ್ಲಿ ಆಡಲು ಅವಕಾಶ ಸಿಕ್ಕಿದ್ದೇ ದೊಡ್ಡ ಗೌರವ ಎಂಬುದು ಅವರ ಅಭಿಪ್ರಾಯ.

ಶನಿವಾರ ನಡೆದ ಪಂದ್ಯದಲ್ಲಿ ಆಸ್ಟ್ರಿಯಾದ ಲಿಯು ಜಿಯಾ ಎದುರು 4–11, 9–11, 3–11, 5–11ರಲ್ಲಿ ಸೋತರು. 1968ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ 11 ವರ್ಷದ ರೊಮೇನಿಯಾ ಸ್ಕೇಟಿಂಗ್‌ಪಟು ಬೀಟ್ರಿಸ್ ಜಗತ್ತಿನ ಕ್ರೀಡಾಹಬ್ಬದಲ್ಲಿ ಪಾಲ್ಗೊಂಡ ಅತಿ ಕಿರಿಯರಾಗಿದ್ದಾರೆ.

ADVERTISEMENT

ಸರ್ಕಾರದ ವಿರುದ್ಧ 2011ರಲ್ಲಿ ಆರಂಭಗೊಂಡಿರುವ ಯುದ್ಧ ಸಿರಿಯಾದಲ್ಲಿ ಲಕ್ಷಾಂತರ ನಾಗರಿಕರನ್ನು ಬಲಿ ಪಡೆದಿದೆ. ಲಕ್ಷಗಟ್ಟಲೆ ಮಂದಿ ನಾಪತ್ತೆಯಾಗಿದ್ದಾರೆ. ಅಂಥ ದೇಶದಿಂದ ಬಂದಿರುವ ಜಾಜಾ ಶುಕ್ರವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ಹೆಜ್ಜೆ ಹಾಕಿದ್ದರು.

‘12 ವರ್ಷದ ಬಾಲಕಿಯೊಬ್ಬಳು 39 ವರ್ಷದ ಅನುಭವಿ ಆಟಗಾರ್ತಿಯ ಎದುರು ಪೈಪೋಟಿ ನಡೆಸಿ ಒಂಬತ್ತೊ ಹತ್ತೊ ಪಾಯಿಂಟ್ ಗಳಿಸುವುದೆಂದರೆ ಸಣ್ಣ ವಿಷಯವಲ್ಲ. ಆದ್ದರಿಂದ ಈ ಕೂಟದಿಂದ ನನ್ನ ಹುಮ್ಮಸ್ಸು ಹೆಚ್ಚಿದೆ’ ಎಂದು ಜಾಜಾ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.