ADVERTISEMENT

ಒಡಿಶಾ ಓಪನ್ ಬ್ಯಾಡ್ಮಿಂಟನ್‌ ಟೂರ್ನಿ | ಕಿರಣ್‌, ಉನ್ನತಿ ಮುಡಿಗೇರಿದ ಪ್ರಶಸ್ತಿ

ಪಿಟಿಐ
Published 30 ಜನವರಿ 2022, 11:52 IST
Last Updated 30 ಜನವರಿ 2022, 11:52 IST
ಪ್ರಶಸ್ತಿಯೊಂದಿಗೆ ಉನ್ನತಿ ಹೂಡಾ– ಟ್ವಿಟರ್ ಚಿತ್ರ
ಪ್ರಶಸ್ತಿಯೊಂದಿಗೆ ಉನ್ನತಿ ಹೂಡಾ– ಟ್ವಿಟರ್ ಚಿತ್ರ   

ಕಟಕ್‌: ಭಾರತದ ಉನ್ನತಿ ಹೂಡಾ ಹಾಗೂ ಕಿರಣ್ ಜಾರ್ಜ್ ಅವರು ಒಡಿಶಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಕ್ರಮವಾಗಿ ಮಹಿಳಾ ಸಿಂಗಲ್ಸ್ ಮತ್ತು ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ ಹಣಾಹಣಿಯಲ್ಲಿ 14 ವರ್ಷದ ಉನ್ನತಿ21-18, 21-11ರಿಂದ ಭಾರತದವರೇ ಆದ ಸ್ಮಿತ್ ತೋಶ್ನಿವಾಲ್ ಅವರನ್ನು ಮಣಿಸಿದರು. ಇದರೊಂದಿಗೆ ಸೂಪರ್‌ 100 ಟೂರ್ನಿಯೊಂದರಲ್ಲಿ ಚಾಂಪಿಯನ್‌ ಆದ ದೇಶದ ಅತಿ ಕಿರಿಯ ಆಟಗಾರ್ತಿ ಎಂಬ ಶ್ರೇಯ ಗಳಿಸಿದರು.

ಉನ್ನತಿ ಅವರಿಗೆ ಒಲಿದ ಮೊದಲ ಒಡಿಶಾ ಓಪನ್ ಕಿರೀಟ ಇದು.

ADVERTISEMENT

ಪಂದ್ಯದ ಆರಂಭದಲ್ಲಿ ಹಿನ್ನಡೆ ಕಂಡಿದ್ದ ಉನ್ನತಿ ಬಳಿಕ ಪುಟಿದೆದ್ದು,ಮೊದಲ ಗೇಮ್‌ ವಶಪಡಿಸಿಕೊಂಡರು. ಅದೇ ಲಯದಲ್ಲಿ ಮುಂದುವರಿದು ಎರಡನೇ ಸುಲಭವಾಗಿ ಗೆದ್ದು ಬೀಗಿದರು. ಉನ್ನತಿಯ ವೇಗದ ಸರ್ವ್‌ಗಳಿಗೆ ತೋಶ್ನಿವಾಲ್ ನಿರುತ್ತರರಾದರು.

ಇಂಡಿಯಾ ಓಪನ್‌ ಫೈನಲಿಸ್ಟ್ ಮಾಳವಿಕಾ ಬಂಸೋಡ್ ಅವರನ್ನು ಮಣಿಸಿ ಫೈನಲ್‌ ತಲುಪಿದ್ದ ಉನ್ನತಿ, ಕೇವಲ 35 ನಿಮಿಷಗಳ ಆಟದಲ್ಲಿ ತೋಶ್ನಿವಾಲ್ ಸವಾಲು ಮೀರಿದರು. ತೋಶ್ನಿವಾಲ್ ಅವರು ಅಸ್ಮಿತಾ ಚಲಿಹಾ ಅವರಿಗೆ ಸೋಲುಣಿಸಿ ಪ್ರಶಸ್ತಿ ಸುತ್ತು ತಲುಪಿದ್ದರು.

21 ವರ್ಷದ ಕಿರಣ್ ಜಾರ್ಜ್‌ ಪುರುಷರ ಫೈನಲ್ ಜಿದ್ದಾಜಿದ್ದಿ ಪೈಪೋಟಿಯಲ್ಲಿ 21-15 14-21 21-18ರಿಂದ ಸ್ವದೇಶದ ಪ್ರಿಯಾಂಶು ರಾಜಾವತ್ ಅವರನ್ನು ಸೋಲಿಸಿದರು.

ಮೊದಲ ಗೇಮ್‌ ಗೆದ್ದ ಕಿರಣ್‌, ಎರಡನೇ ಗೇಮ್‌ನ ಆರಂಭದಲ್ಲೂ 5–3ರಿಂದ ಮೇಲುಗೈ ಸಾಧಿಸಿದ್ದರು. ಆದರೆ ತಿರುಗೇಟು ನೀಡಿದ ಪ್ರಿಯಾಂಶು ಗೇಮ್‌ ಜಯಿಸಿದರು. ತೀವ್ರ ಪೈಪೋಟಿ ಕಂಡುಬಂದ ಮೂರನೇ ಮತ್ತು ನಿರ್ಣಾಯಕ ಗೇಮ್‌ನಲ್ಲಿ ಕಿರಣ್‌ ಜಯದ ನಗೆ ಬೀರಿದರು.

ಭಾರತದ ತ್ರೀಶಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಅವರಿಗೆ ಮಹಿಳಾ ಡಬಲ್ಸ್ ವಿಭಾಗದ ಪ್ರಶಸ್ತಿ ಒಲಿಯಿತು. ಫೈನಲ್‌ನಲ್ಲಿ ಈ ಜೋಡಿಯು21-12, 21-10ರಿಂದ ಸಂಯೋಗಿತಾ ಘೋರ್ಪ‍ಡೆ– ಶ್ರುತಿ ಮಿಶ್ರಾ ಎದುರು ಜಯಭೇರಿ ಮೊಳಗಿಸಿದರು.

ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಎಂ.ಆರ್‌. ಅರ್ಜುನ್‌ ಮತ್ತು ತ್ರೀಶಾ ಜೋಲಿ16-21, 20-22ರಿಂದ ಶ್ರೀಲಂಕಾದ ಸಚಿನ್ ದಿಯಾಸ್‌ ಮತ್ತು ತಿಳಿನಿ ಹೆಂದಾದಹೆವಾ ಎದುರು ಸೋತು ರನ್ನರ್ ಅಪ್ ಆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.